ಡಾ. ಮಂಜುನಾಥ್ರನ್ನೇ ನಿಲ್ಲಿಸಲು ಧೈರ್ಯವಿಲ್ಲ ಅಂದ್ರೆ ಏನು ಅರ್ಥ: ಹೆಚ್ಡಿ ಕುಮಾರಸ್ವಾಮಿಗೆ ಬಾಲಕೃಷ್ಣ ಟಾಂಗ್
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಗೊಂದಲ ವಿಚಾರವಾಗಿ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ಮಾತನಾಡಿ, ಡಾ.ಮಂಜುನಾಥ್ ದೇವೇಗೌಡರ ಅಳಿಯ, ಕುಮಾರಸ್ವಾಮಿ ಅವರ ಭಾವ. ಅವರನ್ನು ನಿಲ್ಲಿಸಲು ಧೈರ್ಯವಿಲ್ಲ ಅಂದ್ರೆ ಏನು ಅರ್ಥ? ಗೆದ್ದಿರುವ ಕ್ಷೇತ್ರದಲ್ಲಿ ತನ್ನ ಭಾವನನ್ನು ಗೆಲ್ಲಿಸಿಕೊಳ್ಳೋದಕ್ಕೆ ಆಗಲ್ಲ ಅಂದರೆ ಜೆಡಿಎಸ್ ಪಕ್ಷ ದುರ್ಬಲವಾಗಿದೆ ಅಂತಲ್ವಾ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಮನಗರ, ಫೆಬ್ರವರಿ 29: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ (JDS) ವರಿಷ್ಠ ಹೆಚ್ಡಿ ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಇಬ್ಬರೂ ಗೆದ್ದಿದ್ದಾರೆ. ಗೆದ್ದಿರುವ ಕ್ಷೇತ್ರದಲ್ಲಿ ಡಾ.ಸಿ.ಎನ್.ಮಂಜುನಾಥ್ರನ್ನು ಗೆಲ್ಲಿಸಿಕೊಳ್ಳೋದಕ್ಕೆ ಆಗಲ್ಲ ಅಂದರೆ ಜೆಡಿಎಸ್ ಪಕ್ಷ ದುರ್ಬಲವಾಗಿದೆ ಅಂತಲ್ವಾ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಗೊಂದಲ ವಿಚಾರವಾಗಿ ಜಿಲ್ಲೆಯ ಮಾಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಾ.ಮಂಜುನಾಥ್ ದೇವೇಗೌಡರ ಅಳಿಯ, ಕುಮಾರಸ್ವಾಮಿ ಅವರ ಭಾವ. ಅವರನ್ನು ನಿಲ್ಲಿಸಲು ಧೈರ್ಯವಿಲ್ಲ ಅಂದರೆ ಏನು ಅರ್ಥ ಎಂದಿದ್ದಾರೆ.
ಬೇರೆ ಪಕ್ಷದಿಂದ ಅಭ್ಯರ್ಥಿ ಮಾಡುವ ಬಗ್ಗೆ ನನಗೆ ಮಾಹಿತಿ ಇದೆ. ಜೆಡಿಎಸ್ ಚಿಹ್ನೆಯಿಂದ ಚುನಾವಣೆ ನಿಲ್ಲಿಸಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಮೈತ್ರಿ ಪಕ್ಷಗಳಿಗೆ ಸೂಕ್ತ ಅಭ್ಯರ್ಥಿ ಇಲ್ಲ, ಕಾಂಗ್ರೆಸ್ನಲ್ಲಿ ಅಭ್ಯರ್ಥಿ ಇದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಜೆಡಿಎಸ್ಗೆ ಕನ್ಫರ್ಮ್ ಆಗಿದೆ: ಶಾಸಕ ಜಿಟಿ ದೇವೇಗೌಡ
ರಾಜ್ಯಸಭೆ ಚುನಾವಣೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಬಿಜೆಪಿಯನ್ನು ಬೀದಿಗೆ ತಂದಿದ್ದಾರೆ. ನಮಗೆ ಇರುವ ಸಂಖ್ಯೆ ಆಧಾರದ ಮೇಲೆ 3 ಸ್ಥಾನ ಗೆಲ್ಲಿಸಿಕೊಂಡಿದ್ದೇವೆ. ನಮಗೆ ಮೂರು ಸ್ಥಾನ, ಬಿಜೆಪಿಗೆ 1 ಸ್ಥಾನ ಗೆಲ್ಲಿಸಲು ಸಂಖ್ಯಾಬಲ ಇತ್ತು. ಆದರೆ ಜೆಡಿಎಸ್ನ H.D.ಕುಮಾರಸ್ವಾಮಿಗೆ ಶಾಸಕರ ಸಂಖ್ಯಾಬಲ ಇತ್ತಾ? ಕೇವಲ 19 ಶಾಸಕರನ್ನು ಇಟ್ಟುಕೊಂಡು ಕುಪೇಂದ್ರ ರೆಡ್ಡಿ ಆಗುತ್ತಾರೆ ಅಂದ್ರೆ? ಬಿಜೆಪಿಯವರಿಂದ ಅಡ್ಡಮತದಾನ ಆಗಿದೆ ಅಂತಾ ಸುದ್ದಿಯಾಯ್ತು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಈಗ ಮುಖಭಂಗ ಆಗಲಿಲ್ವಾ? ಇನ್ಮುಂದೆ ಹೆಚ್ಡಿಕೆಯಿಂದ ಬಿಜೆಪಿಗೆ ಏನು ಕಾದಿದ್ಯೋ ನೋಡಬೇಕು ಎಂದಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಎಲ್ಲಿಯೂ ಒಂದು ಕಡೆ ಮೈತ್ರಿಯಲ್ಲಿ ಇರಲ್ಲ
ಲೋಕಸಭೆ ಚುನಾವಣೆ ಬಳಿಕ ಬಿಜೆಪಿ-ಜೆಡಿಎಸ್ ಮೈತ್ರಿ ಭವಿಷ್ಯ ವಿಚಾರವಾಗಿ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಎಲ್ಲಿಯೂ ಒಂದು ಕಡೆ ಮೈತ್ರಿಯಲ್ಲಿ ಇರಲ್ಲ. ನಾವು ಅವರ ಗರಡಿಯಲ್ಲಿ ಪಳಗಿದವರು, ಎಲ್ಲಿಯೂ ಒಂದು ಕಡೆ ನಿಲ್ಲಲ್ಲ. ಅವರ್ಬಿಟ್ಟು ಇವ್ರು, ಇವರ್ಬಿಟ್ಟು ಅವರು ಅಂತಾ ಹುಡುಕೊಂಡು ಹೋಗುತ್ತಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ರಾಜಕೀಯಕ್ಕೆ ಬರುವ ವಿಚಾರದಲ್ಲಿ ನನ್ನಲ್ಲಿ ಇನ್ನೂ ಗೊಂದಲಗಳಿವೆ: ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್
ಮಂಜುನಾಥ್ ಅವರು ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ನಿಟ್ಟಿನಲ್ಲಿ ಮಂಜುನಾಥ್ ಮನವೊಲಿಕೆಗೆ ಜೆಡಿಎಸ್ ನಾಯಕರು ಮುಂದಾಗಿದ್ದರು. ಜತೆಗೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಜುನಾಥ್ ಅವರನ್ನು ಸ್ಪರ್ಧಿಸುವಂತೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.