ರಾಮನಗರ, ನ.16: ಇತ್ತೀಚೆಗೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ವಿದ್ಯಾವಂತರೇ ಈ ಜಾಲಕ್ಕೆ ಸಿಲುಕುತ್ತಿರುವುದು ಆಶ್ಚರ್ಯವಾಗಿದೆ. ಆನ್‌ಲೈನ್ ವಂಚನೆ (Online Fraud)ಯ ಬಗ್ಗೆ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ, ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಅದರಂತೆ ರಾಮನಗರ ಎಸ್.ಪಿ ಕಾರ್ತಿಕ್ ರೆಡ್ಡಿ ಹೆಸರಲ್ಲಿ ರಾಮನಗರ ಜಿಲ್ಲಾ ಪಂಚಾಯತ್ ಉದ್ಯೋಗಿಗೆ ಬರೊಬ್ಬರಿ 75 ಸಾವಿರ ರೂಪಾಯಿಗಳನ್ನು ವಂಚಿಸಿದ ಘಟನೆ ನಡೆದಿದೆ. ಈ ಕುರಿತು ಇದೀಗ ಎಸ್ಪಿ ಕಛೇರಿಗೆ ದೂರು ನೀಡಲು ಬಂದಿದ್ದಾರೆ.
ಅನೇಕ ಸಭೆಗಳಲ್ಲಿ ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಅವರನ್ನು ನೋಡಿದ್ದ ಜಿಲ್ಲಾ ಪಂಚಾಯತಿ ಉದ್ಯೋಗಿ ಅನಿಲ್ ಎಂಬಾತ, ಕಾರ್ತಿಕ್ ರೆಡ್ಡಿಯವರ ಫೇಸ್ಬುಕ್ಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಮ್ಯೂಚಲ್ ಫ್ರೆಂಡ್ಸ್ ಆದ ಬಳಿಕ, ಮೊದಲಿಗೆ ಅನಿಲ್ ಗುಡ್ ನೈಟ್ ಸರ್ ಎಂದು ಮೇಸೆಜ್ ಮಾಡಿದ್ದ. ನಂತರ ನವೆಂಬರ್ 6 ರಂದು ಹಾಯ್ ಹೇಗಿದ್ದೀರಿ ಎಂದು ಆ ಕಡೆಯಿಂದ ವಂಚಕ ರಿಪ್ಲೆ ಮಾಡಿದ್ದ. ಇದೇ ವೇಳೆ ಅನಿಲ್, ಆರೋಗ್ಯ ಹಾಗೂ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂದು ಕಷ್ಟ ಹೇಳಿಕೊಂಡಿದ್ದ. ನಿನ್ನ ಕಷ್ಟ ದೂರ ಮಾಡುವುದಕ್ಕೆ ನನ್ನ ಹತ್ರ ಐಡಿಯಾ ಇದೆಯೆಂದು ವಂಚಕ ಸಂದೇಶ ಕಳುಹಿಸಿದ್ದ.
ಇದನ್ನೂ ಓದಿ:ಹು-ಧಾ ನಗರದಲ್ಲಿ ಆನ್‌ಲೈನ್ ವಂಚನೆ ಕಡಿವಾಣಕ್ಕೆ ಸೈಬರ್ ಅಪರಾಧ ಪೊಲೀಸ್ ಸಿಬ್ಬಂದಿಯಿಂದ ವಿನೂತನ ಜಾಗೃತಿ ಅಭಿಯಾನ
‘ನನ್ನೊಬ್ಬ ಸಿಆರ್ಪಿಎಫ್ ಫ್ರೆಂಡ್ ಇದ್ದಾನೆ, ಅವನಿಗೆ ಟ್ರಾನ್ಸ್ಫರ್ ಆಗಿದೆ. ಅವನ ಮನೆಯ ಫ್ರಿಡ್ಜ್, ಸೋಫಾ, ಟಿವಿ ಎಲ್ಲವೂ 75 ಸಾವಿರಕ್ಕೆ ಕೊಡುತ್ತಾನೆ ಎಂದು ಆಮಿಷ ಒಡ್ಡಿದ್ದಾನೆ. ಜೊತೆಗೆ ಸಿಆರ್ಪಿಎಫ್ ಅಧಿಕಾರಿ ಸಂತೋಷ್ ಎಂಬುವವರ ನಂಬರ್ ಕೂಡ ಕಳುಹಿಸಿದ್ದ. ಪೊಲೀಸ್ ಅಧಿಕಾರಿ ನನ್ನ ಕಷ್ಟಕ್ಕೆ ಮಿಡಿಯುತ್ತಿದ್ದಾರೆ ಎಂದು ಸಂತೋಷ್ ಅಕೌಂಟ್ಗೆ 75 ಸಾವಿರ ಹಣವನ್ನು ಗೂಗಲ್ ಫೇ, ಫೋನ್ ಪೇ ಮೂಲಕ ಹಂತ ಹಂತವಾಗಿ ಹಣ ಸಂದಾಯ ಮಾಡಿದ್ದ.
ಹಣ ಹಾಕಿ ದಿನಗಳು ಕಳೆದರೂ ಟಿವಿ, ಫ್ರಿಡ್ಜ್, ಸೋಫಾ ಬರಲಿಲ್ಲ. ಸಾಮಾನು ಬಾರದ ಹಿನ್ನೆಲೆ ಆತಂಕಗೊಂಡ ಅನಿಲ್, ಕೂಡಲೇ ಕಾರ್ತಿಕ್ ರೆಡ್ಡಿ ಡಿಪಿ ಬಳಸಿರುವ ಫೇಸ್ಬುಕ್ ಖಾತೆಯಲ್ಲಿ ಪರಿಸ್ಥಿತಿ ಹೇಳಿಕೊಂಡಿದ್ದಾನೆ. ಆದರೆ, ಆ ಖಾತೆಯಿಂದಲೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಸಧ್ಯ ಎಸ್ಪಿ ಕಚೇರಿಯಲ್ಲಿ ದೂರು ನೀಡಲು ಬಂದಿರುವ ಅನಿಲ್ ತಮ್ಮ ವಂಚನೆ ಕುರಿತು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ