ಹು-ಧಾ ನಗರದಲ್ಲಿ ಆನ್‌ಲೈನ್ ವಂಚನೆ ಕಡಿವಾಣಕ್ಕೆ ಸೈಬರ್ ಅಪರಾಧ ಪೊಲೀಸ್ ಸಿಬ್ಬಂದಿಯಿಂದ ವಿನೂತನ ಜಾಗೃತಿ ಅಭಿಯಾನ
ಆನ್‌ಲೈನ್ ಮೂಲಕ ವಂಚಿಸುವ ಪ್ರಕರಣಗಳಿಗೆ ಕಡಿವಾಣ ಹಾಕಲು ಸೈಬರ್ ಅಪರಾಧ ಪೊಲೀಸ್ ಠಾಣಾ ಸಿಬ್ಬಂದಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಅಭಿಯಾನ ಆರಂಭಿಸಿದೆ.
ಹುಬ್ಬಳ್ಳಿ: ಮೊಬೈಲ್ ಬಂದ ಮೇಲೆ ಇತ್ತೀಚಿನ ದಿನಗಳಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿವೆ. ದಿನಕ್ಕೆ ಒಂದಲ್ಲಾ ಒಂದು ಕಡೆ ಆನಲೈನ್ ವಂಚನೆ (online fraud) ಪ್ರಕರಣ ಬೆಳಕಗೆ ಬರುತ್ತಿವೆ. ಅದೆಷ್ಟೋ ಜನ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ. ವಿದೇಶದಲ್ಲಿ ಉದ್ಯೋಗ ಕೊಡಿಸಲಾಗುವುದು, ಪಾರ್ಟ್‌ಟೈಮ್ ಕೆಲಸ ಮಾಡಿ ಹೆಚ್ಚು ಹಣ ಗಳಿಸಬಹುದು ಎಂದು ಹಲವಾರು ಆಸೆ, ಆಮಿಷವೊಡ್ಡಿ ಸತ್ಯದ ಮೇಲೆ ಹೊಡೆದ ರೀತಿಯಲ್ಲಿ ಸುಳ್ಳು ಹೇಳಿ ಆನ್‌ಲೈನ್ ಮೂಲಕ ವಂಚಿಸುವ ಪ್ರಕರಣ ಅವಳಿನಗರದಲ್ಲಿ ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸೈಬರ್ ಅಪರಾಧ ಪೊಲೀಸ್ ಠಾಣಾ ಸಿಬ್ಬಂದಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಅಭಿಯಾನ ಆರಂಭಿಸಿದೆ.
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕಳೆದ ಐದು ವರ್ಷದಲ್ಲಿ 768 ಸೈಬರ್ ಕ್ರೈಂ ಪ್ರಕರಣ ದಾಖಲಾಗಿವೆ. ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತಿ ಪತ್ರಗಳ ನೀಡುವ ಮೂಲಕ ಜಾಗೃತಿ ಕಾರ್ಯ ಹಮ್ಮಿಕೊಂಡಿದ್ದರು. ಇದು ಅಷ್ಟೊಂದು ಪರಿಣಾಮ ಬಿರಿರಲಿಲ್ಲ. ವಿದ್ಯಾವಂತರು ಹಾಗೂ ವಿದ್ಯಾರ್ಥಿಗಳು ಹೆಚ್ಚು ಸೈಬರ್ ವಂಚನೆಗೊಳಗಾಗುತ್ತಿರುವುದರಿಂದ ಶಿಕ್ಷಣ ಸಂಸ್ಥೆ ಗುರಿಯಾಗಿಸಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ.
ಇದನ್ನೂ ಓದಿ: WhatsApp Scam: ವಾಟ್ಸ್ಆ್ಯಪ್ನಲ್ಲಿ ನಡೆಯುತ್ತಿದೆ ಬಹುದೊಡ್ಡ ವಂಚನೆ: ತಪ್ಪಿಯೂ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ
ತಂಡಗಳ ರಚನೆ:
ಸೈಬರ್ ಅಪರಾಧದ ಬಗ್ಗೆ ಜಾಗೃತಿ ಮೂಡಿಸಲು ಮೂರು ತಂಡಗಳ ರಚನೆ ಮಾಡಲಾಗಿದೆ. ಇಲ್ಲಿಯವರೆಗೆ 20ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ ತಂಡಗಳು ಪಿಪಿಟಿ ಮೂಲಕ ಕಾರ್ಯಾಗಾರ ನಡೆಸಿ ಜಾಗೃತಿ ಮೂಡಿಸುತ್ತಿದೆ. ಸೈಬರ್ ಅಪರಾಧ ಎಂದರೇನು? ಯಾವ ರೀತಿ ವಂಚನೆ ಮಾಡುತ್ತಾರೆ? ಸಾರ್ವಜನಿಕರು ವಂಚನೆಗೊಳಗಾಗಬಾರದೆಂದರೆ ಏನು ಮಾಡಬೇಕು? ವಂಚನೆಗೊಳಗಾದರೆ ಮುಂದೆ ಏನು ಮಾಡಬೇಕು ಎಂಬುವುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುತ್ತಿದೆ. ಅಷ್ಟೇ ಅಲ್ಲದೇ ಸೈಬರ್ ವಂಚನೆಗಳಿಗೆ ಸಾಮಾನ್ಯ ಜನರು ಯಾವ ರೀತಿ ಒಳಗಾಗುತ್ತಿದ್ದಾರೆ ಎಂಬ ಹತ್ತು ಹಲವಾರು ವರದಿಯ ಅಂಶಗಳ ಪಟ್ಟಿ ಸಿದ್ಧ ಪಡಿಸಿ ವಿದ್ಯಾರ್ಥಿಗಳಿಗೆ ನೀಡಿ ಅದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಶಿಕ್ಷಣ ಸಂಸ್ಥೆಗಳ ಸಹಕಾರ:
ಈಗಾಗಲೇ ಹು-ಧಾ ಅವಳಿನಗರಲ್ಲಿ ಎಸ್‌ಡಿಎಂ ಕಾಲೇಜು, ವಿದ್ಯಾನಿಕೇತನ ಶಾಲೆ, ಜೆ.ಕೆ. ಶಿಕ್ಷಣ ಸಂಸ್ಥೆ ಹಾಗೂ ಧಾರವಾಡ ಮಹಿಳಾ ಕಾಲೇಜು ಸೇರಿದಂತೆ ಹಲವಾರು ಕಾಲೇಜಿನಲ್ಲಿ ಜಾಗೃತಿ ಅಭಿಯಾನ ಮಾಡಲಾಗಿದೆ. ಆ ಶಿಕ್ಷಣ ಸಂಸ್ಥೆಯವರು ಸಹ ಸಂಪೂರ್ಣವಾಗಿ ಸಹಕರಿಸಿದ್ದಾರೆ ಎಂದು ಸೈಬರ್ ಅಪರಾಧ ಪೊಲೀಸ್ ಠಾಣಾಧಿಕಾರಿ ಎಂ.ಎಸ್. ಹೂಗಾರ ತಿಳಿಸಿದರು. ಸಾರ್ವಜನಿಕ ಸ್ಥಳಗಳಾದ ದುರ್ಗದಬೈಲ್, ಸಿಬಿಟಿ, ಹಳೇ ಹುಬ್ಬಳ್ಳಿ, ನವನಗರ, ಧಾರವಾಡ ಜುಬ್ಲಿ ವೃತ್ತ, ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಬಿಆರ್‌ಟಿಎಸ್ ಬಸ್ ನಿಲ್ದಾಣಗಳಲ್ಲಿ ಬಿತ್ತಿ ಪತ್ರ ಗೋಡೆಗಳಿಗೆ ಅಂಟಿಸಿ ಹಾಗೂ ಜನಸಾಮಾನ್ಯರಿಗೆ ನೀಡಿಯೂ ಸಹ ಜಾಗೃತಿ ಮೂಡಿಸಲಾಗುತ್ತಿದೆ.
ಇದನ್ನೂ ಓದಿ: 31 Online ವಂಚನೆ ಪ್ರಕರಣ ಭೇದಿಸಿದ ವಿಜಯಪುರ ಸಿಇಎನ್ ಪೊಲೀಸರು, ಬಹುತೇಕ ಹಣವನ್ನು ಮರಳಿಸಿದ್ದಾರೆ!
ತಿಳುವಳಿಕೆ ಸಂದೇಶ ಪಟ್ಟಿ:
ಎಟಿಎಂ ಕಾರ್ಡ್ ವಂಚನೆ, ಓಎಲ್‌ಎಕ್ಸ್, ಕ್ವಿಕರ್ ಮೂಲಕ ವಂಚನೆ, ಸಾಲ ಕೊಡುವ ನೆಪದಲ್ಲಿ ವಂಚನೆ, ವಿವಾಹದ ಹಲವಾರು ವೆಬ್ಸೈಟ್ಗಳಿಂದ ವಂಚನೆ, ಸಾಮಾಜಿಕ ಜಾಲತಾಣದಿಂದ, ಅಪರಿಚಿತ ವ್ಯಕ್ತಿ ವಾಟ್ಸ್‌ಆಪ್ ವಿಡಿಯೋ ಕಾಲ ಮಾಡಿ ಬೆದರಿಕೆ ಹಾಕುವುದು, ಕಸ್ಟಮರ್ ಕೇರ್ ಸೋಗಿನಲ್ಲಿ ಮಾತನಾಡಿ, ಕ್ಯೂಆರ್ ಕೋಡ್ ಮೂಲಕ ಹಣ ವಂಚಿಸುತ್ತಿದ್ದಾರೆ ಎಂದು ವಿವರವಾಗಿ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ.
ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕಳೆದ ಐದು ವರ್ಷಗಳಲ್ಲಿ ದಾಖಲಾದ ಪ್ರಕರಣಗಳು
2018-17, 2019-110, 2020- 118, 2021-176, 2022 (ಡಿ. 24ರ ವರೆಗೆ) 347 ಪ್ರಕರಣ ದಾಖಲಾಗಿದ್ದು, ಕಳೆದ ಐದು ವರ್ಷದಲ್ಲಿ ಈ ವರ್ಷ ಹೆಚ್ಚಿನ ಪ್ರಕರಣ ದಾಖಲಾಗಿವೆ. ಅದರಲ್ಲಿ ಪ್ರಮುಖ್ಯವಾಗಿ ಬ್ಯಾಂಕ್ ವಂಚನೆಗಳೇ ಜಾಸ್ತಿಯಾಗಿವೆ. ಅಕೌಂಟ್ ನಂಬರ್ ಪಡೆದು ಹಣ ಡ್ರಾ ಮಾಡಿಕೊಂಡ ಪ್ರಕರಣಗಳೇ ಹೆಚ್ಚು ದಾಖಲಾಗಿವೆ, ಜೊತೆಗೆ ನಾವು ಕಸ್ಟಮರ್ ಕೇರ್ ಎಂದು ನಂಬಿಸಿ ಹಣ ವಂಚನೆ ಮಾಡಿದ್ದಾರೆ. ಎಲ್ಲೋ ಕೂತು ಮರಳಾಗಿ ಮಾತನಾಡಿ ಜನರಿಗೆ ಮಕ್ಮಲ್ ಟೋಪಿ ಹಾಕೋದರ ಬಗ್ಗೆ ಹುಬಳ್ಳಿ ಧಾರವಾಡ ಪೊಲೀಸರು ಇದೀಗ ಜಾಗೃತಿ ಆರಂಭಿಸಿದ್ದು, ಹೆಚ್ಚು ಜನ ನಿಭಿಡ ಪ್ರದೇಶಗಳು, ಕಾಲೇಜ್ಗಳನ್ನ ಟಾರ್ಗೆಟ್ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.
ಈ ಕುರಿತಾಗಿ ಪಿಐ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಎಂ.ಎಸ್. ಹೂಗಾರ ಮಾತನಾಡಿ, ಜನರು ಯಾವುದೇ ಕಾರಣಕ್ಕೂ ತಮ್ಮ ಬ್ಯಾಂಕ್‌ಗೆ ಸಂಬಂಸಿದ ಮಾಹಿತಿ ಯಾರಿಗೂ ನೀಡಬಾರದು. ಅಷ್ಟೇ ಅಲ್ಲದೇ ಅನಕೃತ ಲಿಂಕ್ ಇರುವ ಸಂದೇಶ ಬಂದರೆ ಅವುಗಳನ್ನು ಕಡೆಗಣಿಸಿ. ಏನಾದರೂ ವಂಚನೆಗೊಳಗಾದರೆ ತಕ್ಷಣ ಸಹಾಯವಾಣಿ 1930 ಹಾಗೂ 0836 2233567ಗೆ ಕರೆ ಮಾಡಿ ದೂರು ನೀಡಿ ಎಂದು ತಿಳಿಸಿದ್ದಾರೆ.
ವರದಿ: ಶಿವಕುಮಾರ್ ಪತ್ತಾರ್, ಟಿವಿ9, ಹುಬ್ಬಳ್ಳಿ
Published On - 4:34 pm, Mon, 26 December 22