
ರಾಮನಗರ, ಆಗಸ್ಟ್ 02: ಬಿಡದಿ ಟೌನ್‌ಶಿಪ್ ಯೋಜನೆ (Bidadi Township) ವಿಚಾರವಾಗಿ ಪರ, ವಿರೋಧ ಮುಂದುವರೆದಿದೆ. ಇದೀಗ ಜೆಡಿಎಸ್ ಪಕ್ಷ ಪಾದಯಾತ್ರೆಗೆ ಸಜ್ಜಾಗಿದೆ. ‘ಆಗಸ್ಟ್ 9 ರಿಂದ 11ರವರೆಗೆ ಅಂದರೆ 3 ದಿನಗಳ ಕಾಲ ಬೈರಮಂಗಲದಿಂದ ಫ್ರೀಡಂಪಾರ್ಕ್ವರೆಗೆ ಒಟ್ಟು 38 ಕಿ. ಮೀ ಪಾದಯಾತ್ರೆ ಮಾಡುತ್ತೇವೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದ್ದಾರೆ.
ರಾಮನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಇಂದು ನಿಖಿಲ್ ಕುಮಾರಸ್ವಾಮಿ ಪೂರ್ವಭಾವಿ ಸಭೆ ಮಾಡಿದರು. ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,‘ ಆಗಸ್ಟ್ 9ರಿಂದ 11ರವರೆಗೆ 3 ದಿನ ಪಾದಯಾತ್ರೆ ಮಾಡುತ್ತೇವೆ. ಪಾದಯಾತ್ರೆಯಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಭಾಗಿಯಾಗುತ್ತಾರೆ’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ವಿವಾದದ ನಡುವೆಯೇ ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
‘ರೈತರ ಸಮಸ್ಯೆಗೆ ಧ್ವನಿಯಾಗಿ ಜೆಡಿಎಸ್ ಕೆಲಸ ಮಾಡಿದೆ. ಈ ನಿಟ್ಟಿನಲ್ಲಿ ರೈತರ ಸಮಸ್ಯೆ ತಿಳಿಯಲು ಮತ್ತು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪಾದಯಾತ್ರೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಕಣ್ಣು ಕಾಣಿಸುತ್ತಿಲ್ಲ, ಕಿವಿಯೂ ಕೇಳಿಸುತ್ತಿಲ್ಲ. ಹೀಗಾಗಿ ರೈತರ ಪರ ನಿಲ್ಲುವುದು ನಮ್ಮ ಧರ್ಮ. ಟೌನ್‌ಶಿಪ್ ಬಗ್ಗೆ ಸ್ಥಳೀಯ ಶಾಸಕರು ಏನು ಬೇಕಾದರೂ ಮಾತಾಡಲಿ, ಯೋಜನೆ ವಿರುದ್ಧ ಕಾನೂನು ಹೋರಾಟಕ್ಕೂ ಮುಂದಾಗಿದ್ದೇವೆ’ ಎಂದರು.
ಇನ್ನು ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ ನಡೆಸುತ್ತಿರುವ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ‘ಕೆಲವೊಮ್ಮೆ ಪ್ರತ್ಯೇಕವಾಗಿ, ಇನ್ನು ಕೆಲವೊಮ್ಮೆ ಒಟ್ಟಾಗಿ ಹೋರಾಟ ಮಾಡಬೇಕಾಗುತ್ತದೆ. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ’ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ದೋಸ್ತಿಯಲ್ಲಿ ಕುಸ್ತಿ: ಬಿಜೆಪಿ ನಾಯಕರ ಚರ್ಚೆಗೂ ಮುನ್ನವೇ ಪ್ರತ್ಯೇಕ ಪಾದಯಾತ್ರೆ ಘೋಷಿಸಿದ ಜೆಡಿಎಸ್
ಒಟ್ಟಾರೆ ಬಿಡದಿ ಟೌನ್‌ಶಿಪ್ ಯೋಜನೆ ವಿರೋಧದ ಹೋರಾಟ ರಾಜಕೀಯವಾಗಿ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಆಗಸ್ಟ್ 9ರಿಂದ ಆರಂಭವಾಗಲಿರುವ ಜೆಡಿಎಸ್ ಪಾದಯಾತ್ರೆ ಸರ್ಕಾರದ ಮೇಲೆ ಎಷ್ಟರ
ಮಟ್ಟಿಗೆ ಒತ್ತಡ ತರುತ್ತದೆ ಎಂಬುದು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Sun, 2 August 26