ರಾಮನಗರ ಸೆ.17: ರಾಮನಗರಕ್ಕೆ (Ramnagar) ಮಂಜೂರಾಗಿದ್ದ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜನ್ನು ಡಿ.ಕೆ ಸಹೋದರರು (DK Brothers) ಕನಕಪುರಕ್ಕೆ (Kanakapura) ಕೊಂಡೊಯ್ದಿದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ವಿಚಾರವಾಗಿ ರಾಮನಗರ ನಿವಾಸಿಗಳು ರಾಮನಗರ ಬಂದ್ಗೆ ಕರೆ ನೀಡಿದ್ದರು. ಅಲ್ಲದೇ ಪ್ರತಿಪಕ್ಷಗಳಾದ ಬಿಜೆಪಿ (BJP) ಮತ್ತು ಜೆಡಿಎಸ್ (JDS) ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಒಂದೆಡೆ ಮೆಡಿಕಲ್ ಕಾಲೇಜು ಹೋರಾಟ, ಮತ್ತೊಂದೆಡೆ ಚಿಕಿತ್ಸೆ ಪಡೆಯಲು ರೋಗಿಗಳು ಪರದಾಡುತ್ತಿದ್ದಾರೆ.
ಹೌದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತವರು ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿ ಕೊರತೆ ಇದೆ. ಸುಸಜ್ಜಿತ ಆಸ್ಪತ್ರೆ ಇದ್ದರೂ, ಸಮರ್ಪಕ ವೈದ್ಯಕೀಯ ಸಿಬ್ಬಂದಿ ಇಲ್ಲದೇ ರೋಗಿಗಳು ಪರದಾಡುತ್ತಿದ್ದಾರೆ. ವೈದ್ಯರು, ನರ್ಸ್ಗಳು, ಸ್ವಚ್ಚತಾ ಸಿಬ್ಬಂದಿ ಕೊರತೆಯಿಂದ ಸರಿಯಾದ ಚಿಕಿತ್ಸೆ ಸಿಗದ ರೋಗಿಗಳು ನರಳಾಡುತ್ತಿದ್ದಾರೆ.
ಇದನ್ನೂ ಓದಿ: ರಾಮನಗರದಿಂದ ಕನಕಪುರಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರದ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಜಿಲ್ಲಾಸ್ಪತ್ರೆಯಲ್ಲಿನ 39 ವೈದ್ಯ ಹುದ್ದೆಯಲ್ಲಿ 17 ಜನ ವೈದ್ಯರ ಹುದ್ದೆ ಖಾಲಿ ಇವೆ. 109 ಬಿ.ಗ್ರೂಪ್ ಸಿಬ್ಬಂದಿ ಇರಬೇಕಾದ ಆಸ್ಪತ್ರೆಯಲ್ಲಿ ಕೇವಲ 61 ನೌಕರರು ಮಾತ್ರ ಇದ್ದಾರೆ. ಸ್ಟಾಫ್ ನರ್ಸ್, ಸೀನಿಯರ್ ನರ್ಸ್ ಸೇರಿದಂತೆ 52 ಹುದ್ದೆಗಳು ಖಾಲಿ ಇವೆ. ಇದರಿಂದ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ಚಿಕಿತ್ಸೆ ದೊರೆಯದೆ, ಬೆಂಗಳೂರು, ಮಂಡ್ಯಕ್ಕೆ ಹೋಗುತ್ತಿದ್ದಾರೆ.
ನ್ಯೂರೋ ಸರ್ಜನ್, ನ್ಯೂರೊ ಫಿಜಿಷಿಯನ್, ಕಾರ್ಡಿಯಾಲಜಿ, ಫಲ್ಮೋನಾಲಜಿ ಚಿಕಿತ್ಸೆ ನೀಡಲು ವೈದ್ಯರಿಲ್ಲ. ಇನ್ನು ವೆಂಟಿಲೇಟರ್ಗಳಿದ್ದರೂ, ಅದರ ನಿರ್ವಾಹಣೆಗೆ ಬೇಕಾದ ನಿಯೋನೆಟಲಾಜಿಸ್ಟ್, ಟ್ರೈನ್ಡ್ ಸ್ಟಾಫ್ನರ್ಸ್ ಕೂಡ ಇಲ್ಲ. ಒಟ್ಟು 30 ಜನ ಸ್ಟಾಫ್ ನರ್ಸ್ ಹುದ್ದೆ ಭರ್ತಿಯಾಗಬೇಕಿದೆ. ಕೂಡಲೇ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಸಮಸ್ಯೆಯನ್ನು ಬಗೆಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.