BJP ಕಾರ್ಯಕರ್ತೆಯನ್ನ ವಿವಸ್ತ್ರಗೊಳಿಸಿದ್ದು ಯಾರು? ಮಹಿಳೆಯ ಹೈಡ್ರಾಮಾವೋ? ಪೊಲಿಸರ ಕ್ರೌರ್ಯವೋ?
ಯಾರದ್ದಾದ್ರೂ ಮೇಲೆ ಆರೋಪ ಬಂದ್ರೆ, ಕೇಸ್ ದಾಖಲಾದ್ರೆ ಅವರನ್ನ ಬಂಧಿಸುವುದು ಪೊಲೀಸರ ಕರ್ತವ್ಯ. ಇದೇ ರೀತಿ ಹುಬ್ಬಳ್ಳಿಯ ಕೇಶ್ವಾಪುರ ಠಾಣೆ ಪೊಲೀಸರು ಪ್ರಕರಣವೊಂದರಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯನ್ನ ಬಂಧಿಸಲು ಹೋಗಿದ್ರು. ಬಂಧಿಸಿ ಬಸ್ ಹತ್ತಿಸೋವರೆಗೂ ಎಲ್ಲವೂ ಚೆನ್ನಾಗೇ ಇತ್ತು. ಬಸ್ ಹತ್ತಿದ ಮೇಲೆ, ಅದೂ ಕೂಡಾ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೇ ಆಕೆ ಅರೆಬೆತ್ತಲಾಗಿದ್ದಳು. ಇದೇ ವಿವಸ್ತ್ರ ಪ್ರಕರಣ ರಾಜ್ಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದು, ಕಾಂಗ್ರೆಸ್ ಬಿಜೆಪಿ ಮಧ್ಯೆ ಮತ್ತೆ ಜಟಾಪಟಿಗೆ ಕಾರಣವಾಗಿದೆ. ಅಷ್ಟಕ್ಕೂ BJP ಕಾರ್ಯಕರ್ತೆಯ ವಿವಸ್ತ್ರಗೊಳಿಸಿದ್ದು ಯಾರು? ಹೈಡ್ರಾಮಾವೋ? ಪೊಲಿಸರ ಕ್ರೌರ್ಯವೋ?

ಹುಬ್ಬಳ್ಳಿ, (ಜನವರಿ 07): ಬಿಜೆಪಿ ಕಾರ್ಯಕರ್ತೆಯನ್ನ (BJP Worker) ಬಟ್ಟೆಬಿಚ್ಚಿ ಪೊಲೀಸರು ಥಳಿಸಿದ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯ (Hubballi) ಕೇಶ್ವಾಪುರ ಪೊಲೀಸ್ ಠಾಣೆಯ ಪೊಲೀಸರು, ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ಬಂಧನದ ವೇಳೆ ವಿವಸ್ತ್ರಗೊಳಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ನಡುವೆ ಹಳೆ ವೈಷಮ್ಯದ ಹಿನ್ನಲೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ತಿಕ್ಕಾಟ ನಡೆದಿದೆ. ಈ ಸಂಬಂಧ ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನ ಮೇರೆಗೆ ಕೇಶ್ವಾಪುರ ಪೊಲೀಸರು, ಸುಜಾತ ಅವರನ್ನ ಬಂಧಿಸಲು ಯತ್ನಿಸಿದ್ದಾರೆ. ಈ ವೇಳೆ ದೊಡ್ಡ ಹೈಡ್ರಾಮವೇ ಆಗಿದ್ದು,ಪೊಲೀಸ್ ವಾಹನದಲ್ಲೇ ಬಂಧಿತ ಸುಜಾತ ಅರೆನಗ್ನ ಸ್ಥಿತಿಯಲ್ಲಿರುವ ವಿಡಿಯೋ ವೈರಲ್ ಆಗಿದ್ದು, ಕೇಶ್ವಾಪುರ ಪೊಲೀಸರ ವರ್ತನೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದ್ರೆ, ಇದನ್ನು ಪೊಲೀಸರು ಅಲ್ಲಗೆಳೆದಿದ್ದಾರೆ.
ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಜನವರಿ 5 ರಂದು ಹುಬ್ಬಳ್ಳಿಯ ಕೇಶ್ವಾಪುರ ಠಾಣೆ ಪೊಲೀಸರು ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯನ್ನ ಬಂಧಿಸಿದ್ರು. ಈ ಬಂಧನದ ವೇಳೆ ಸುಜಾತಳನ್ನ ಪೊಲೀಸರು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಅಂತಾ ಆರೋಪಿಸಿದ್ದಾರೆ. ಈ ಸಂಬಂಧ ವೈರಲ್ ವಿಡಿಯೋ ಮುಂದಿಟ್ಟುಕೊಂಡು ಇಂದು ಠಾಣೆ ಮುಂದೆ ಪ್ರತಿಭಟಿಸಿದ್ದು, ಪೊಲೀಸರ ಅಮಾನತಿಗೆ ಆಗ್ರಹಿಸಿದ್ದಾರೆ. ನನ್ನ ಮಗಳ ಬಟ್ಟೆ ಬಿಚ್ಚಿ ಪೊಲೀಸರೇ ಹಲ್ಲೆ ನಡೆಸಿದ್ದಾರೆ ಎಂದು ಸುಜಾತ ತಾಯಿ ಕಮಲಮ್ಮ ಸಹ ಆರೋಪಿಸಿದ್ದು, ಮಗಳ ಸ್ಥಿತಿ ನೆನೆದು ಕಣ್ಣೀರಾಗಿದ್ದಾರೆ.
ಇದನ್ನೂ ನೋಡಿ: ನನ್ನ ಮಗಳ ಬಟ್ಟೆ ಬಿಚ್ಚಿದ್ದು ಪೊಲೀಸರೇ: BJP ಕಾರ್ಯಕರ್ತೆ ತಾಯಿ ಕಣ್ಣೀರು
ಪ್ರತಿಭಟನೆ ಜೋರಾಗುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಹುಬ್ಬಳ್ಳಿ ಪೊಲೀಸ್ ಕಮಿಷನರ್ ಶಶಿಕುಮಾರ್, ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ ಎಂದು ಮನವೊಲಿಕೆ ಕೆಲಸ ಮಾಡಿದ್ದಾರೆ. ಪೊಲೀಸ್ ವಶದಲ್ಲಿದ್ದಾಗ ವಿಡಿಯೋ ಮಾಡಿದ್ಯಾರು? ಅವರ ಬಗ್ಗೆಯೂ ಕ್ರಮ ತೆಗೆದುಕೊಳ್ತೀವಿ. ಹಲ್ಲೆ ಆರೋಪದ ಬಗ್ಗೆಯೂ ತನಿಖೆ ಮಾಡ್ತೀವಿ ಎಂದಿದ್ದಾರೆ.
ಪ್ರಕರಣವನ್ನ ಗಂಭೀರವಾಗಿ ಪರಿಣಿಸಿರೋ ಬಿಜೆಪಿ ನಾಯಕರು, ಕಾಂಗ್ರೆಸ್ ಕಾರ್ಪೊರೇಟರ್ ಸುವರ್ಣ ಕಲ್ಲಕುಂಟ್ಲಾ ಕುಮ್ಮಕ್ಕಿನಿಂದಲೇ ದಲಿತ ಮಹಿಳೆ ಮೇಲೆ ಹಲ್ಲೆ ಆಗಿದೆ ಅಂತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡಾ ರಾಜ್ಯದಲ್ಲಿ ತುಘಲಕ್ ಸಾಮ್ರಾಜ್ಯ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಆರೋಪ ತಳ್ಳಿ ಹಾಕಿದ ಪೊಲೀಸ್ರು
ಪೊಲೀಸರು ತಮ್ಮ ವಿರುದ್ಧದ ಆರೋಪವನ್ನ ತಳ್ಳಿ ಹಾಕಿದ್ದಾರೆ. ಮಹಿಳೆ ತಾನಾಗಿಯೇ ಬಟ್ಟೆ ಬಿಚ್ಚಿಕೊಂಡ್ಲು ಅಂತಿದ್ದಾರೆ. ಸಾಲದ್ದಕ್ಕೆ ಕಾರ್ಯಕರ್ತೆಯೇ ಮಹಿಳಾ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಆರೋಪ ಕೂಡ ಕೇಳಿಬಂದಿದ್ದು, ಮಹಿಳಾ ಪೊಲೀಸರು ಆಯುಕ್ತರ ಮುಂದೆ ಈ ಬಗ್ಗೆ ಕಣ್ಣೀರಿಟ್ಟಿದ್ದಾರೆ. ಇನ್ನು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಸಹ ಮಾಹಿತಿ ಪಡೆದಿದ್ದು, ಸುಜಾತಾಳ ಸಹೋದರನೇ ವಿಡಿಯೋ ವೈರಲ್ ಮಾಡಿದ್ದಾನೆ ಎಂದಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯರಿಗೆ ಪೊಲೀಸ್ ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿ ಪ್ರಕರಣದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಸಂತೋಷ್ ಲಾಡ್, ಬಿಜೆಪಿ ಕಾರ್ಯಕರ್ತೆಯದ್ದೇ ತಪ್ಪು ಅಂತಿದ್ದಾರೆ.
ಸುಜಾತ ಹಂಡಿಯನ್ನ ಬಂಧಿಸಿದ್ಯಾಕೆ? ಏನಿದು ಪ್ರಕರಣ?
ಸುಜಾತ SIR- BLO ಗಳನ್ನು ಕರೆತಂದು ನಮ್ಮ ವೋಟ್ ಡಿಲಿಟ್ ಮಾಡಿಸಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ. ಇದೇ ಆರೋಪದ ಮೇಲೆ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ ಆಗಿತ್ತು. ಈ ವಿಚಾರ ಇಟ್ಟುಕೊಂಡು ಕಾಂಗ್ರೆಸ್ ಕಾರ್ಪೋರೇಟರ್ ಸುವರ್ಣ ನೀಡಿದ ದೂರಿನ ಮೇರೆಗೆ ಕಲ್ಲಕುಂಟ್ಲಾ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 307 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ದೂರಿನ ಮೇರೆಗೆ ಬಿಜೆಪಿ ಕಾರ್ಯಕರ್ತೆ ಸುಜತಾ ಹಂಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ, ಬಂಧನ ವೇಳೆ ಪ್ರತಿರೋಧ ತೋರಿ ಸುಜಾತ ಹಂಡಿ ಚೀರಾಟ ನಡೆಸಿದ್ದಾರೆ. ಈ ವೇಳೆ ವಿವಸ್ತ್ರಗೊಳಿಸಿ ಥಳಿಸಿದ ಆರೋಪ ಕೇಳಿ ಬಂದಿದೆ. ಇನ್ನು ಬಂಧನದ ಸಂದರ್ಭದಲ್ಲಿ ಸುಜಾತ ಅನುಚಿತ ವರ್ತನೆ ತೋರಿದ್ದಾರೆ ಎಂದು ಕೇಶ್ವಾಪುರ ಪೊಲೀಸರು ಮತ್ತೊಂದು ದೂರು ದಾಖಲಿಸಿಕೊಂಡಿದ್ದಾರೆ.
ಹಿಂದೆ ಕಾಂಗ್ರೆಸ್‌ನಲ್ಲಿದ್ದ ಸುಜಾತ ಸದ್ಯ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಈಕೆ ಮೇಲೆ ವಿವಿಧ ಠಾಣೆಗಳಲ್ಲಿ 9 ಕೇಸ್‌ಗಳಿದ್ದು, ವಿವಸ್ತ್ರದ ಆರೋಪವನ್ನ ಪೊಲೀಸರು ತಳ್ಳಿಹಾಕಿದ್ದಾರೆ. ಆದ್ರೆ ಬಿಜೆಪಿ ನಾಯಕರು ಮಾತ್ರ ತನಿಖೆಗೆ ಆಗ್ರಹಿಸಿದ್ದಾರೆ.