ರಾಮನಗರ: ಹಾರೋಬೆಲೆ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ 2 ಕಾಡಾನೆ ಸಾವು

ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕೂನೂರು ಗ್ರಾಮದ ಬಳಿಯ ಹಾರೋಬೆಲೆ ಡ್ಯಾಂ ಹಿನ್ನೀರಿನಲ್ಲಿ ಎರಡು ಕಾಡಾನೆಗಳು ಮುಳುಗಿ ಸಾವನ್ನಪ್ಪಿರುವಂತಹ ಘಟನೆ ಕುನೂರು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ. ಆಹಾರ ಅರಸಿ ನಾಡಿಗೆ ಬಂದಿದ್ದ ಗಂಡಾನೆಗಳು ನದಿ ದಾಟುವಾಗ ಜೊಂಡಿಗೆ ಸಿಲುಕಿ ಮುಳುಗಿ ಮೃತಪಟ್ಟಿವೆ.

ರಾಮನಗರ: ಹಾರೋಬೆಲೆ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ 2 ಕಾಡಾನೆ ಸಾವು
ಕಾಡಾನೆ ಸಾವು
Updated By: ಗಂಗಾಧರ​ ಬ. ಸಾಬೋಜಿ

Updated on: Nov 09, 2025 | 3:24 PM

ರಾಮನಗರ, ನವೆಂಬರ್​ 09: ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಕಾಡಾನೆಗಳು (wild elephants) ಸಾವನ್ನಪ್ಪಿದ್ದ (death) ಘಟನೆ ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುಳೆಗಾಳಿ ಗ್ರಾಮದಲ್ಲಿ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕೂನೂರು ಗ್ರಾಮದ ಹಾರೋಬೆಲೆ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಎರಡು ಗಂಡಾನೆಗಳು ಮೃತಪಟ್ಟಿವೆ.

ನಡೆದದ್ದೇನು? 

ಕಳೆದ ಒಂದು ವಾರದಿಂದ ಗ್ರಾಮದ ಸುತ್ತಮುತ್ತ ಏಳು ಗಂಡಾನೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಎರಡು ದಿನಗಳ ಕೆಳಗೆ ಕಾಡಿಗೆ ಹಿಮ್ಮೆಟ್ಟಿಸುವ ಕೆಲಸ ಮಾಡಿದ್ದರು. ಈ ವೇಳೆ ಹದಿನೈದರಿಂದ ಇಪತ್ತು ವರ್ಷ ಪ್ರಾಯದ ಎರಡು ಗಂಡಾನೆಗಳು ನದಿ ದಾಟಲು ಹೋಗಿ ಜೊಂಡು (ಜಲಸಸ್ಯ) ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ.

ಇದನ್ನೂ ಓದಿ: ಬೆಳಗಾವಿ: ಖಾನಾಪುರ ಸುಳೆಗಾಳಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 2 ಕಾಡಾನೆ ಸಾವು, ರೈತನ ಬಂಧನ

ಆಹಾರ ಅರಿಸಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಕಾಡಾನೆಗಳು ನಾಡಿಗೆ ಬಂದಿದ್ದವು. ಸದ್ಯ ಸಾವನ್ನಪ್ಪಿರುವ ಕಾಡಾನೆಗಳನ್ನು ಸಿಬ್ಬಂದಿ ನದಿಯಿಂದ ಮೇಲಕ್ಕೆತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ ನಡೆಸಲಿದ್ದಾರೆ. ಕುನೂರು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ವಿದ್ಯುತ್ ಸ್ಪರ್ಶಿಸಿ ಎರಡು ಕಾಡಾನೆಗಳು ಸಾವು

ಇನ್ನು ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುಳೇಗಾಳಿ ಗ್ರಾಮ ಅರಣ್ಯಕ್ಕೆ ಹೊಂದಿಕೊಂಡಂತೆ ಇದೆ. ಇದೇ ಗ್ರಾಮದ ಜಮೀನಿಗೆ ಕಾಲಿಟ್ಟಿದ್ದ ಎರಡು ಕಾಡಾನೆಗಳು ವಿದ್ಯುತ್‌ ಸ್ಪರ್ಶಕ್ಕೆ ಬಲಿ ಆಗಿದ್ದವು. ಎರಡು ಆನೆಗಳ ಸಾವು ಎಲ್ಲರೂ ಕೆರಳವಂತೆ ಮಾಡಿತ್ತು. ಅದರಲ್ಲೂ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತನಿಖೆಗೆ ಆದೇಶಿಸಿದ್ದರು. ಪ್ರಾಥಮಿಕ ತನಿಖೆ ವೇಳೆ ಗಣಪತಿ ಗುರವ್ ಅನ್ನೋ ರೈತನ ಕುಕೃತ್ಯ ಬಯಲಾಗಿದ್ದು, ಆತನನ್ನ ಬಂಧಿಸಲಾಗಿತ್ತು.

ಇದನ್ನೂ ಓದಿ: ಶೃಂಗೇರಿ ಕಿಲ್ಲರ್ ಕಾಡಾನೆ ಸೆರೆ: ಏಕಲವ್ಯ ತಂಡದಿಂದ ಕಾರ್ಯಾಚರಣೆ ಯಶಸ್ವಿ

ಗ್ರಾಮದಲ್ಲೇ ಪೊಲೀಸರು, ಅರಣ್ಯ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳು ಬೀಡುಬಿಟ್ಟಿದ್ದರು. ಪರಿಶೀಲನೆ ನಡೆಸಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಎರಡೂ ಆನೆಗಳನ್ನ ಅದೇ ಜಾಗದಲ್ಲೇ ಅಂತ್ಯಸಂಸ್ಕಾರ ಮಾಡಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:21 pm, Sun, 9 November 25