ರಾಮನಗರ: ಅಕಾಲಿಕ ಮಳೆ ಮತ್ತು ಶೀತಗಾಳಿಯಿಂದ ಕಂಗಾಲಾದ ಮಾವು ಬೆಳೆಗಾರರು, ಇಳುವರಿ ಕುಂಠಿತವಾಗುವ ಆತಂಕ
ಕಳೆದ ಬಾರಿ ಕೂಡ ಹವಾಮಾನ ವೈಪರಿತ್ಯದಿಂದ ಮಾವು ಬೆಳೆ ಸಂಪೂರ್ಣವಾಗಿ ನೆಲಕಚ್ಚಿತ್ತು. ಈ ಬಾರಿಯಾದರೂ ಉತ್ತಮ ಫಸಲು ಸಿಗುತ್ತದೆ ಎಂದು ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಆಕಾಲಿಕ ಮಳೆ, ಶೀತಗಾಳಿ ಮತ್ತೆ ಸಂಕಷ್ಟ ತಂದೊಡ್ಡಿದೆ.
ರಾಮನಗರ: ಮಾವು ಹೂವು ಬಿಡುವ ಹಂತದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ ಮತ್ತು ಬೀಸುತ್ತಿರುವ ಶೀತಗಾಳಿಯಿಂದ ಮಾವು ಇಳುವರಿಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆ ಎದುರಾಗಿದೆ. ಜಿಲ್ಲೆಯಲ್ಲಿ ಆಕಾಲಿಕ ಮಳೆ ಬರುತ್ತಲೆ ಇದ್ದು, ಜೊತೆಗೆ ಶೀತಗಾಳಿ ಕೂಡ ಬರುತ್ತಿದೆ. ಹೀಗಾಗಿ ಋತುವಿನ ಆರಂಭದಲ್ಲಿಯೇ ಮಾವು ಬೆಳೆಗಾರರಿಗೆ ಆತಂಕ ತಂದೊಡ್ಡಿದೆ. ಮಳೆ ಮುಂದುವರೆದಷ್ಟು ಹೂವು ಬಿಡುವ ಪ್ರಕ್ರಿಯೆ ನಿಧಾನಗತಿಯಾಗಲಿದೆ. ಅಷ್ಟೇ ಅಲ್ಲದೆ ಇಳುವರಿ ಕೂಡ ಕಡಿಮೆಯಾಗುತ್ತದೆ. ಮರದಲ್ಲಿ ಹೂವು ಕಟ್ಟುವ ಬದಲು ಬರಿ ಚಿಗುರುಗಳು ಬರಲು ಪ್ರಾರಂಭಿಸುತ್ತವೆ.
ರಾಮನಗರ ಜಿಲ್ಲೆಯಲ್ಲಿ ಆಕ್ಟೋಬರ್, ನವೆಂಬರ್ ತಿಂಗಳಲ್ಲಿ ಮಾವಿನ ಮರದಲ್ಲಿ ಹೂವುಗಳು ಆರಂಭವಾಗುತ್ತವೆ. ಆದರೆ ಆಕಾಲಿಕ ಮಳೆಯಾದರೆ ಹೂವು ಕೂಡ ಉದುರುತ್ತವೆ. ಹೂವು ಕಟ್ಟುವ ಪ್ರಕ್ರಿಯೆ ಕೂಡ ಮುಂದು ಹೋಗುತ್ತದೆ. ಇದು ರೈತರಿಗೆ ಬಿಡಿಸಲಾರದ ಸಮಸ್ಯೆಯಾಗಿ ಪರಿಣಮಿಸಿದೆ. ಕಳೆದ ಬಾರಿ ಕೂಡ ಹವಮಾನ ವೈಪರಿತ್ಯದಿಂದ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಕೂಡ ಅದೇ ರೀತಿಯಾದರೆ ಜಿಲ್ಲೆಯ ಮಾವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಇನ್ನು ರಾಮನಗರ ಜಿಲ್ಲೆ ಮಾವು ಬೆಳೆಯುವಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿ ಇದೆ. ಸುಮಾರು 30 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯನ್ನು ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಮಾವು ಉತ್ಪನ್ನ ಮಾರುಕಟ್ಟೆಗೆ ಬರುವುದು ರಾಮನಗರ ಜಿಲ್ಲೆಯಿಂದ. ಜಿಲ್ಲೆಯಲ್ಲಿ ರಾಗಿ ಬೆಳೆ ನಂತರ ಪ್ರಮುಖ ಬೆಳೆ ಮಾವು ಆಗಿದೆ. ಜಿಲ್ಲೆಯಲ್ಲಿ ಈಗಾಗಲೇ ಮಾವಿನ ಮರಗಳಲ್ಲಿ ಹೂವು ಬಿಡಲು ಆರಂಭಿಸಿವೆ. ಆದರೆ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ರೋಗಗಳು ಕೂಡ ಮಾವಿನ ಮರದಲ್ಲಿ ಕಾಣಿಸಿಕೊಳ್ಳಲಿದೆ. ಕಳೆದ ಬಾರಿ ಅತಿವೃಷ್ಟಿಯಿಂದಾಗಿ ಅರ್ಧದಷ್ಟು ಇಳುವರಿ ಕಡಿಮೆಯಾಗಿತ್ತು. ಈ ಬಾರಿ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿ ಮಾವು ಬೆಳೆಗಾರರು ಇದ್ದರು. ಆದರೆ ಆಗಾಗ ಬರುತ್ತಿರುವ ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಇದನ್ನೂ ಓದಿ:ಅತಿವೃಷ್ಟಿ, ಥರಗುಟ್ಟುವ ಚಳಿ ಪರಿಣಾಮ ರಾಮನಗರ ರೇಷ್ಮೆಗೂಡಿನಲ್ಲಿ ಬಂಪರ್ ಧಾರಣೆ, ಇ-ಪಾವತಿಯಿಂದ ರೈತರು ಇನ್ನಷ್ಟು ನಿರಾಳ ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮುನೇಗೌಡ ಅವರು ರೈತರು ಅಗತ್ಯ ಔಷಧಿಗಳನ್ನು ಸಿಂಪಡನೆ ಮಾಡಿಕೊಳ್ಳಬೇಕು ಎನ್ನುತ್ತಿದ್ದಾರೆ. ಒಟ್ಟಾರೆ ಆಗಾಗ ಬರುತ್ತಿರುವ ಅಕಾಲಿಕ ಮಳೆ ರಾಮನಗರ ಜಿಲ್ಲೆಯ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದೆ. ಮತ್ತೆ ಏನಾದರು ಮಳೆ ಬಂದರೆ ಮಾವು ಬೆಳೆಗಾರರ ಸಂಕಷ್ಟ ಹೇಳತೀರದಂತೆ ಆಗುತ್ತದೆ.
ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ