
ರಾಮನಗರ, ಆ.25: ರಾಜ್ಯದಲ್ಲೇ ಅತಿ ಹೆಚ್ಚು ರೇಷ್ಮೆ ಬೆಳೆಯುವ ಹೆಗ್ಗಳಿಕೆ ಹೊಂದಿರುವ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಭಾರಿ ಸಿಹಿ ಸುದ್ದಿ ಸಿಕ್ಕಿದೆ. ರಾಮನಗರ ಹಾಗೂ ಚನ್ನಪಟ್ಟಣ ಅವಳಿ ನಗರಗಳ ಮಧ್ಯೆ ಸುಮಾರು ರೂ. 75 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಹೈಟೆಕ್ ರೇಷ್ಮೆ ಮಾರುಕಟ್ಟೆ ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆಗೆ ಸಿದ್ಧವಾಗಿದೆ.
ರಾಮನಗರದಲ್ಲಿ ಪ್ರಸ್ತುತ ದೇಶದಲ್ಲೇ ಅತಿ ದೊಡ್ಡ ಸರ್ಕಾರಿ ರೇಷ್ಮೆ ಮಾರುಕಟ್ಟೆಯಿದ್ದು, ಪ್ರತಿನಿತ್ಯ 40 ರಿಂದ 45 ಟನ್ ರೇಷ್ಮೆಗೂಡು ಮಾರಾಟವಾಗುತ್ತದೆ. ನೆರೆ ರಾಜ್ಯಗಳ ರೈತರೂ ಸಹ ಇಲ್ಲಿಗೆ ಗೂಡು ತರುತ್ತಾರೆ. ಆದರೆ, ರಾಮನಗರ ಮತ್ತು ಚನ್ನಪಟ್ಟಣದ ಹಳೆಯ ಮಾರುಕಟ್ಟೆಗಳು ಚಿಕ್ಕದಾಗಿದ್ದ ಕಾರಣ, ಸುಮಾರು 20 ಎಕರೆ ಪ್ರದೇಶದಲ್ಲಿ ಈ ಆಧುನಿಕ ಹೈಟೆಕ್ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ.
ಗಣಕೀಕೃತ ರೇಷ್ಮೆಗೂಡು ಹರಾಜು ಸಭಾಂಗಣ, ಆಕರ್ಷಕ ಪ್ರವೇಶದ್ವಾರ, ಕೋರ್ ಕಟ್ಟಡ, ಪೊಲೀಸ್ ಚೌಕಿ, ಅಗ್ನಿಶಾಮಕ ನಿಯಂತ್ರಣ ಕೊಠಡಿ, ಸೋಲಾರ್ ವ್ಯವಸ್ಥೆ, ಬೃಹತ್ ನೀರು ಶೇಖರಣಾ ತೊಟ್ಟಿ ಹಾಗೂ ವಿಸ್ತಾರವಾದ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಪ್ರಸ್ತುತ ಪ್ರತಿದಿನ 40-45 ಟನ್ ಗೂಡು ಮಾರಾಟವಾಗುತ್ತಿದ್ದರೆ, ಈ ನೂತನ ಮಾರುಕಟ್ಟೆ ಲೋಕಾರ್ಪಣೆಗೊಂಡ ನಂತರ ಪ್ರತಿನಿತ್ಯ 110 ರಿಂದ 115 ಟನ್ ರೇಷ್ಮೆಗೂಡು ಮಾರಾಟವಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: ಮಹಿಳಾ PSI ಅಶ್ಲೀಲ ವಿಡಿಯೋ ಪ್ರಕರಣ: ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕೋರ್ಟ್ ಮೆಟ್ಟಿಲೇರಿದ ಸಹಾಯಕ ಅಧೀಕ್ಷಕ
ಈ ಮಾರುಕಟ್ಟೆಯು ಏಷ್ಯಾದಲ್ಲೇ ಅತಿ ದೊಡ್ಡ ಮತ್ತು ಪ್ರಮುಖ ರೇಷ್ಮೆ ವ್ಯಾಪಾರ ಕೇಂದ್ರವಾಗಿ ಹೊರಹೊಮ್ಮಲಿದೆ. ನೂತನ ಮಾರುಕಟ್ಟೆ ಉದ್ಘಾಟನೆಯಾದ ತಕ್ಷಣ ರಾಮನಗರ ಹಾಗೂ ಚನ್ನಪಟ್ಟಣದಲ್ಲಿರುವ ಹಳೆಯ ಮಾರುಕಟ್ಟೆಗಳನ್ನು ಮುಚ್ಚಿ, ಆ ಜಾಗಗಳನ್ನು ಇಲಾಖೆಯ ಇತರ ಕಾರ್ಯಗಳಿಗೆ ಬಳಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. “ಮುಂದಿನ ತಿಂಗಳಲ್ಲಿ ಈ ಹೈಟೆಕ್ ಮಾರುಕಟ್ಟೆಯನ್ನು ಉದ್ಘಾಟನೆ ಮಾಡಲು ಎಲ್ಲಾ ಅಗತ್ಯ ಸಿದ್ಧತೆಗಳು ನಡೆದಿವೆ.” ಎಂದು ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಕೆ. ಎನ್. ರವಿ ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ