ರಾಮನಗರ, ಜನವರಿ 12: ಕೆಲವೇ ದಿನಗಳಲ್ಲಿ ಬ್ರೋಕರ್ಗಳು ನಿಮ್ಮ ಮನೆಗೆ ಬರುತ್ತಾರೆ. ಯಾವುದೇ ಕಾರಣಕ್ಕೂ ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಈ ಹಿಂದೆ ಚನ್ನಪಟ್ಟಣ ಉಪಚುನಾವಣೆ ಸಂದರ್ಭದಲ್ಲೂ ಸಹ ಇದೇ ಮಾತು ಹೇಳಿದ್ದ ಡಿಕೆ ಶಿವಕುಮಾರ್ ಇದೀಗ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಜಿಲ್ಲೆಯ ಕನಕಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತ್ತೆ ಮತ್ತೆ ನಿಮಗೆ ಹೇಳುತ್ತಿದ್ದೇನೆ, ನಿಮ್ಮ ಆಸ್ತಿ ಮಾರಿಕೊಳ್ಳಬೇಡಿ. ನಿಮ್ಮ ಆಸ್ತಿಗೆ ಬಹಳ ಮೌಲ್ಯ ಬರಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಆಸ್ತಿ ಮಾರಿಕೊಳ್ಳಬೇಡಿ, ಉಳಿಸಿಕೊಳ್ಳಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ನಲ್ಲಿ ಡಿನ್ನರ್ ಮತ್ತು ಡಿಶುಂ ಡಿಶುಂ ಪಾಲಿಟಿಕ್ಸ್; ಹತಾಶೆಗೊಂಡ ಹಿರಿಯರು; ಕಿವಿ ಹಿಂಡುತ್ತಾರಾ ಸುರ್ಜೆವಾಲ
ನಾನು ಶಾಲೆಗೆ 110 ಎಕರೆ ಜಮೀನು ಬರೆದುಕೊಟ್ಟಿದ್ದೇನೆ. ಹೆಚ್ಡಿ ಕುಮಾರಸ್ವಾಮಿ ಅಥವಾ ಮಂಜುನಾಥ್ 1 ಸೈಟ್ನಾದರೂ ಕೊಟ್ಟಿದ್ದಾರಾ? ನನ್ನನ್ನು ಶಾಸಕ, ಉಪ ಮುಖ್ಯಮಂತ್ರಿಯಾಗಿ ಮಾಡಿದ್ದೀರಿ. ಬೇರೆಯವರಿಗೆ ಮತ ಹಾಕಿದ್ದವರೂ ಯೋಚನೆ ಮಾಡಬೇಕು. ಸ್ಕೂಟರ್ ತಗೊಂಡು ಮದ್ದೂರು, ಮಳವಳ್ಳಿಗೆ ಹೋಗಿ ನೋಡಿ ಚನ್ನಪಟ್ಟಣಕ್ಕೆ ಹೋದರೆ ಮೂಗು ಹಿಡಿದುಕೊಂಡು ಹೋಗಬೇಕಿತ್ತು.
ನನಗೆ ನಾಚಿಕೆ ಆಯ್ತು, ನಾನೇ 200-300 ಕೋಟಿ ರೂ ಹಣ ಕೊಟ್ಟೆ. ಬಹಳಷ್ಟು ಜನ ಡಿಕೆ ಬ್ರದರ್ಸ್ ಜೊತೆ ಹೋಗೋಣ ಅಂತ ಬಂದ್ರು. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆಲ್ಲಿಸಿ ಗೌರವ ಉಳಿಸಿದ್ದರು. 25,000 ಮತಗಳ ಅಂತರದಿಂದ ಗೆಲ್ಲಿಸಿ ನಮ್ಮ ಗೌರವ ಉಳಿಸಿದರು ಎಂದಿದ್ದಾರೆ.
ಕನಕಪುರ ಭಾಗದಲ್ಲಿ ಕಾಡಾನೆ ಹಾವಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕನಕಪುರ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿರುವುದು ನಿಜ. ಕಾಡಂಚಿನ ಗ್ರಾಮಗಳಲ್ಲಿ ಆನೆಗಳು ಪ್ರತಿದಿನ ದಾಂದಲೆ ಮಾಡುತ್ತಿವೆ. ಕೋಡಿಹಳ್ಳಿಯ ನಮ್ಮನೆ ಬಳಿ 50 ಆನೆ ಓಡಾಟದ ವಿಡಿಯೋ ನೋಡಿದ್ದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ಭಾಗದಲ್ಲೂ ಕಾಡಾನೆ ಹಾವಳಿ ಹೆಚ್ಚಿದೆ. ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಅರಣ್ಯ ಸಚಿವರ ಜತೆ ಚರ್ಚಿಸುವೆ. ರೈಲು ಕಂಬಿಗಳ ತಡೆಗೋಡೆ ಸೇರಿದಂತೆ ಅಗತ್ಯ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂಬ ಮರುನಾಮಕರಣ ವಿಚಾರವಾಗಿ ಮಾತನಾಡಿದ್ದು, ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಹಂತಿಮ ಹಂತಕ್ಕೆ ಬಂದಿವೆ. ಇನ್ನು ಒಂದು ಎನ್ಓಸಿ ಬರಬೇಕು, ಅದನ್ನ ದೆಹಲಿಯವರು ಮಾಡುತ್ತಾರೆ. ನಮ್ಮ ಜಿಲ್ಲೆಯ ಹೆಸರು ನಾವು ಬದಲಾವಣೆ ಮಾಡಿಕೊಳ್ಳುವುದಕ್ಕೆ ಮಾನದಂಡಗಳಿಲ್ಲ. ಪ್ರಧಾನಿಗಳಿಗೆ ಹಾಗೂ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿಟಿ ರವಿಗೆ ಬೆದರಿಕೆ ಒಡ್ಡಲಾಗುತ್ತಿರುವ ಶಕ್ತಿಗಳು ಯಾವುದೆಂಬುದು ಸರ್ಕಾರಕ್ಕೆ ಗೊತ್ತಿದೆ: ವಿಜಯೇಂದ್ರ ಆರೋಪ
ಕಾಂಗ್ರೆಸ್ನಲ್ಲಿ ಡಿನ್ನರ್ ಪಾಲಿಟಿಕ್ಸ್ ಚರ್ಚೆ ವಿಚಾರವಾಗಿ ಮಾತನಾಡಿದ್ದು, ನಮ್ಮಲ್ಲಿ ಯಾವುದೇ ಡಿನ್ನರ್ ಪಾಲಿಟಿಕ್ಸ್ ಇಲ್ಲ. ಹೊಸ ವರ್ಷ ಅಂತ ಅವರು ಊಟಕ್ಕೆ ಸೇರಿದ್ದರು. ನಾನು ವಿದೇಶಕ್ಕೆ ಹೋಗಿದ್ದೆ ಅಷ್ಟೇ. ಅದನ್ನ ನೀವು ವೈಭವೀಕರಣ ಮಾಡಿದ್ರಿ ಅಷ್ಟೇ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.