ಸಿಡಿಯಲ್ಲಿರುವ ಯುವತಿ, ವಕೀಲ ಜಗದೀಶ್ ನನ್ನ ಸಹಕಾರ ಕೇಳಿದ್ದಕ್ಕೆ ಅಲ್ಲಿ ಹಾಜರಿದ್ದೆ: ಸೂರ್ಯ ಮುಕುಂದರಾಜ್ ಸ್ಪಷ್ಟನೆ
ಜಗದೀಶ್ ಅವರು ನನಗೆ ಸಹಕಾರ ಕೇಳಿದ್ದಕ್ಕೆ ಅಲ್ಲಿ ಹಾಜರಿದ್ದೆ. ಅವರು ಏನು ಬೇಕಾದರೂ ಹೇಳಲಿ ನಾನು ಉತ್ತರಿಸಲ್ಲ. ಸಿಡಿಯಲ್ಲಿರುವ ಯುವತಿ, ವಕೀಲ ಜಗದೀಶ್ ನನ್ನನ್ನು ಪ್ರಕರಣ ಮುನ್ನಡೆಸಿ ಎಂದು ಕೇಳಿಕೊಂಡಿದ್ದಾರೆ. ಇದರಲ್ಲಿ ನಮ್ಮ ಒತ್ತಡ ಇಲ್ಲ ಎಂದು ಸೂರ್ಯ ಮುಕುಂದರಾಜ್ ಹೇಳಿದ್ದಾರೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣ ಕ್ಷಣಕ್ಕೊಂದು ಸ್ವರೂಪ ಪಡೆದು ಬೆಳೆಯುತ್ತಿದೆ. ಒಂದೆಡೆ ಸಿಡಿಯಲ್ಲಿದ್ದ ಯುವತಿ ಇಂದು (ಮಾರ್ಚ್ 31) ವೈದ್ಯಕೀಯ ಪರೀಕ್ಷೆ ಹಾಗೂ ಎಸ್ಐಟಿ ತನಿಖೆ ಎದುರಿಸಿದ್ದಾರೆ. ಅದರ ಬೆನ್ನಲ್ಲೇ ಯುವತಿಯ ತಂದೆ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮಗಳ ಹೇಳಿಕೆಗಳನ್ನು ಪಡೆಯಬಾರದು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಷ್ಟೇ ಅಲ್ಲ, ನನ್ನ ಮಗಳ ಹೇಳಿಕೆಯನ್ನು ಪಡೆಯುವಾಗ ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಉಪಸ್ಥಿತಿ ಇದ್ದಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಸಂಬಂಧಿಸಿ ಸೂರ್ಯ ಮುಕುಂದರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿಡಿ ಲೇಡಿ ತಂದೆಗೆ ಯಾರು ಹೇಳಿದರೋ ಗೊತ್ತಿಲ್ಲ. ಅವರು ಸೂರ್ಯ ಮುಕುಂದರಾಜ್ ಅಲ್ಲಿದ್ದಾರೆಂದು ಹೇಳುತ್ತಾರೆ. ನಾನು ಕಾಂಗ್ರೆಸ್ ಸೇರುವ ಮುನ್ನ ವಕೀಲನಾಗಿದ್ದೆ. ನನ್ನ ಸೇವೆ ಬಯಸುವವರ ಪರ ವಕಾಲತ್ತು ವಹಿಸುತ್ತೇನೆ ಎಂದು ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಜಗದೀಶ್ ಅವರು ನನ್ನ ಸಹಕಾರ ಕೇಳಿದ್ದಕ್ಕೆ ಅಲ್ಲಿ ಹಾಜರಿದ್ದೆ. ಅವರು ಏನು ಬೇಕಾದರೂ ಹೇಳಲಿ ನಾನು ಉತ್ತರಿಸಲ್ಲ. ಸಿಡಿಯಲ್ಲಿರುವ ಯುವತಿ, ವಕೀಲ ಜಗದೀಶ್ ನನ್ನನ್ನು ಪ್ರಕರಣ ಮುನ್ನಡೆಸಿ ಎಂದು ಕೇಳಿಕೊಂಡಿದ್ದಾರೆ. ಇದರಲ್ಲಿ ನಮ್ಮ ಒತ್ತಡ ಇಲ್ಲ ಎಂದು ಸೂರ್ಯ ಮುಕುಂದರಾಜ್ ಹೇಳಿದ್ದಾರೆ.
ಯುವತಿಗೆ ರಕ್ಷಣೆ ಕೊಡಲು ಸರ್ಕಾರ ಮುಂದೆ ಬರಬೇಕು. ಸರ್ಕಾರ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ಸರ್ಕಾರ ವಕೀಲರ ಫೋನ್ ಕರೆಗಳನ್ನ ಕದ್ದಾಲಿಕೆ ಮಾಡಿದೆ. ಈವರೆಗೆ ಯಾವ ಸರ್ಕಾರವೂ ಈ ರೀತಿ ಮಾಡಿಲ್ಲ. ಬಿ.ಎಸ್. ಯಡಿಯೂರಪ್ಪನವರೇ ಇದು ಒಳ್ಳೆಯದಲ್ಲ. ತುರ್ತು ಪರಿಸ್ಥಿತಿಯಲ್ಲೂ ವಕೀಲರ ಕರೆ ಕದ್ದಾಲಿಕೆ ಆಗಿಲ್ಲ. ಗೃಹಸಚಿವರೇ ನ್ಯಾಯಾಂಗ ವ್ಯವಸ್ಥೆ ಬುಡಮೇಲು ಮಾಡ್ಬೇಡಿ. ನೀವು ಆರೋಪ ಮಾಡುತ್ತಿರುವುದು ನನ್ನ ಮೇಲೆ ಅಲ್ಲ. ನ್ಯಾಯಾಂಗ, ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಎಂದು ಸರ್ಕಾರದ ವಿರುದ್ಧ ಮಾತನಾಡಿದ್ದಾರೆ.
ಶಾಸಕ ರಮೇಶ್ ಜಾರಕಿಹೊಳಿ ಓರ್ವ ಆರೋಪಿ. ರಮೇಶ್ ಜಾರಕಿಹೊಳಿಗೆ ರಕ್ಷಣೆ ನೀಡುವ ಪ್ರಯತ್ನ ಬೇಡ. ಯುವತಿ ನಿಮ್ಮ ಕಂಟ್ರೋಲ್ನಲ್ಲಿಯೇ ಇದ್ದಾಳೆ, ಕೇಳಿ. ನಿಮ್ಮ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬೊಮ್ಮಾಯಿಯವರೇ ಅಧಿಕಾರಿಗಳನ್ನೇ ಕೇಳಿ ತಿಳಿದುಕೊಳ್ಳಿ. ಸಿಡಿ ಯುವತಿ ಕೇವಲ ಹೈಕೋರ್ಟ್ಗಷ್ಟೇ ಮೇಲ್ ಮಾಡಿಲ್ಲ. ಸುಪ್ರೀಂಕೋರ್ಟ್ಗೂ ಯುವತಿ ಮೇಲ್ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಸೂರ್ಯ ಮುಕುಂದರಾಜ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಿಡಿ ಸಂತ್ರಸ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮಗಳ ಹೇಳಿಕೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ತಂದೆ
Published On - 8:09 pm, Wed, 31 March 21