ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ಗೆ ಹೆಚ್ಚಿದ ಸಂಕಷ್ಟ: ದಾಖಲಾಯ್ತು ಅತ್ಯಾಚಾರ ಪ್ರಕರಣ
Prajwal Revanna Sexual Assault Case: ತಮ್ಮ ಮನೆಯ ಮಹಿಳಾ ಕೆಲಸದಾಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಹೊಳೆನರಸೀಪುರ ಠಾಣೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಬೆಂಗಳೂರು, ಮೇ 03: ಲೈಂಗಿಕ ದೌರ್ಜನ್ಯ, ಕಿರುಕುಳ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹೆಚ್. ಡಿ ರೇವಣ್ಣ (HD Revanna) ಪುತ್ರ, ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದಡಿಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಹೊಸದಾಗಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಇದು ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾದ ಎರಡನೇ ಪ್ರಕರಣವಾಗಿದೆ.
ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, ವಿಡಿಯೋದಲ್ಲಿದ್ದ ಕೆಲ ಮಹಿಳೆಯರನ್ನು ಸಂಪರ್ಕಿಸಿ ದೂರು ನೀಡುವಂತೆ ಹೇಳಿದ್ದರು. ಈ ಪೈಕಿ ಮಹಿಳೆಯೊಬ್ಬರು ಎಸ್ಐಟಿ ಅಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಆಧರಿಸಿ ಅಧಿಕಾರಿಗಳು ಈಗಾಗಲೇ ಲೈಂಗಿಕ ದೌರ್ಜನ್ಯ ಆರೋಪದಡಿ ದಾಖಲಾಗಿದ್ದ ಎಫ್ಐಆರ್ಗೆ ಹೊಸದಾಗಿ ಐಪಿಸಿ ಸೆಕ್ಷನ್ 376 ಅನ್ನು ಸೇರ್ಪಡೆಗೊಳಿಸುವ ಮೂಲಕ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜ್ವಲ್ ರೇವಣ್ಣ ಹಲವು ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ಸಿಆರ್ಪಿಸಿ 164 ಅಡಿಯಲ್ಲಿ ಹೇಳಿಕೆ ದಾಖಲಿಸಲಾಗಿದೆ. ಸಂತ್ರಸ್ತೆಯ ಮಾಹಿತಿಯನ್ನು ಗೌಪ್ಯವಾಗಿರಿಸಲಾಗಿದೆ.
2ನೇ ಎಫ್ಐಆರ್ನಲ್ಲಿ ದಾಖಲಿಸಿರುವ ಸೆಕ್ಷನ್ಗಳು
ಐಪಿಸಿ 376(2) ಎನ್, 506, 354 ಎ1, 354ಬಿ, 354ಸಿ ಹಾಗೂ ಐಟಿ ಕಾಯ್ದೆ ಅಡಿ ಎಫ್ಐಆರ್ ದಾಖಲಾಗಿದೆ.
376 (2) ಎನ್ – ಒಬ್ಬ ಮಹಿಳೆ ಮೇಲೆ ನಿರಂತರ ಅತ್ಯಾಚಾರ, ಕನಿಷ್ಟ 10 ವರ್ಷ ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ 506 – ಅಪರಾಧಿಕ ಉದ್ದೇಶದಿಂದ ಬೆದರಿಸುವುದು. 354a1 – ಲೈಂಗಿಕ ಬೇಡಿಕೆಗೆ ಒತ್ತಾಯಿಸುವುದು. ಗರಿಷ್ಟ 3 ವರ್ಷಗಳ ಶಿಕ್ಷೆ. 354b – ಅಪರಾಧಿಕ ಉದ್ದೇಶಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡುವುದು. ಗರಿಷ್ಟ ಮೂರು ವರ್ಷ ಶಿಕ್ಷೆ ನೀಡಲಾಗುತ್ತದೆ. 354 c – ಮಹಿಳೆಯ ಇಚ್ಚೆಗೆ ವಿರುದ್ದವಾಗಿ ಆಕೆಯ ಖಾಸಗಿ ವಿಷಯವನ್ನ ರೆಕಾರ್ಡ್ ಮಾಡುವುದು ಮತ್ತು ನೋಡುವುದು. ಗರಿಷ್ಟ ಏಳು ವರ್ಷ ಶಿಕ್ಷೆ ನೀಡಲಾಗುತ್ತದೆ.
ಇದನ್ನೂ ಓದಿ: ಮಾಜಿ ಸಚಿವ ಹೆಚ್ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ, ಮೈಸೂರಿನಲ್ಲಿಯೂ ಕೇಸ್ ದಾಖಲು
ಮೊದಲನೇ ದೂರು
ತಮ್ಮ ಮನೆಯ ಮಹಿಳಾ ಕೆಲಸದಾಳಿಗೆ ಲೈಂಗಿಕ ದೌರ್ಜನ್ಯ, ಕಿರುಕುಳ ನೀಡಿದ ಆರೋಪದ ಮೇರೆಗೆ ಹೊಳೆನರಸೀಪುರ ಠಾಣೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ತಂದೆ-ಮಗನಿಗೆ ಎಸ್ಐಟಿ ನೋಟಿಸ್ ನೀಡಿದೆ. ಆದರೆ ಎಸ್ಐಟಿ ವಿಚಾರಣೆಗೆ ಹಾಜರಾಗದೆ ಕಾಲಾವಕಾಶ ಕೋರಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಎರಡನೇ ದೂರು ದಾಖಲಾಗಿರುವುದು ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ ತಂದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 8:38 am, Fri, 3 May 24