ಕರ್ನಾಟಕ ಉದ್ಯಾನವನ ವಿಧೇಯಕ ವಾಪಸ್ ಕಳಿಸಲು ರಾಜ್ಯಪಾಲರಿಗೆ ತೇಜಸ್ವಿ ಸೂರ್ಯ ಮನವಿ

ಕರ್ನಾಟಕ ಉದ್ಯಾನವನಗಳ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯಪಾಲ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ. ಪಾರ್ಕ್‌ನ ಶೇ 5ರಷ್ಟು ಭೂಮಿ ಪರಭಾರೆ ಮಾಡಲು ಅವಕಾಶ ನೀಡುವ ಈ ವಿಧೇಯಕವನ್ನು ಸರ್ಕಾರಕ್ಕೆ ಮರುಪರಿಶೀಲನೆಗಾಗಿ ಹಿಂದಿರುಗಿಸುವಂತೆ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ವಿಪಕ್ಷಗಳು ಕೂಡ ಈ ವಿಧೇಯಕವನ್ನು ತೀವ್ರವಾಗಿ ವಿರೋಧಿಸುತ್ತಿವೆ.

ಕರ್ನಾಟಕ ಉದ್ಯಾನವನ ವಿಧೇಯಕ ವಾಪಸ್ ಕಳಿಸಲು ರಾಜ್ಯಪಾಲರಿಗೆ ತೇಜಸ್ವಿ ಸೂರ್ಯ ಮನವಿ
ಕರ್ನಾಟಕ ಉದ್ಯಾನವನ ವಿಧೇಯಕ ವಾಪಸ್ ಕಳಿಸಲು ರಾಜ್ಯಪಾಲರಿಗೆ ತೇಜಸ್ವಿ ಸೂರ್ಯ ಮನವಿ
Image Credit source: tv9

Updated on: Aug 25, 2026 | 2:49 PM

ಬೆಂಗಳೂರು, ಆಗಸ್ಟ್ 25: ಕರ್ನಾಟಕ ಉದ್ಯಾನವನಗಳ ವಿಧೇಯಕಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ವಿಧೇಯಕವನ್ನು ಸರ್ಕಾರಕ್ಕೆ ಮರುಪರಿಶೀಲನೆಗಾಗಿ ವಾಪಸ್ ಕಳುಹಿಸುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ಪತ್ರ ಬರೆದು ಮನವಿ ಮಾಡಿದ್ದಾರೆ. ಈ ವಿಧೇಯಕದಲ್ಲಿ ಪಾರ್ಕ್‌ಗಳ ಶೇ 5ರಷ್ಟು ಭೂಮಿಯನ್ನು ಪರಭಾರೆ ಮಾಡಲು ಅವಕಾಶ ನೀಡುವ ಪ್ರಸ್ತಾಪವಿದೆ. ಸರ್ಕಾರದ ಈ ನಿರ್ಧಾರದಿಂದ ಸಾರ್ವಜನಿಕ ಉದ್ಯಾನವನಗಳ ಸ್ವರೂಪಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಪತ್ರದಲ್ಲಿ ತೇಜಸ್ವಿ ಸೂರ್ಯ ವಿವರಿಸಿದ್ದಾರೆ. ಪಾರ್ಕ್‌ಗಳ ಭೂಮಿ ಪರಭಾರೆಗೆ ಅವಕಾಶ ಕಲ್ಪಿಸುವ ಈ ವಿಧೇಯಕವನ್ನು ರಾಜ್ಯಪಾಲರು ಒಪ್ಪಬಾರದು ಮತ್ತು ಅದನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ಅವರು ಕೋರಿದ್ದಾರೆ.

ಉದ್ಯಾನವನಗಳು ಕೇವಲ ಸರ್ಕಾರಿ ಭೂಮಿ ಅಲ್ಲ; ಅವು ಪರಿಸರ, ಸಾರ್ವಜನಿಕ ಆರೋಗ್ಯ, ಜೀವವೈವಿಧ್ಯ, ಶುದ್ಧ ಗಾಳಿ, ಮನರಂಜನೆ ಮತ್ತು ಭವಿಷ್ಯದ ಪೀಳಿಗೆಗಳಿಗಾಗಿ ಸಂರಕ್ಷಿಸಬೇಕಾದ ಸಾರ್ವಜನಿಕ ಆಸ್ತಿಗಳು ಎಂದು ತೇಜಸ್ವಿ ಸೂರ್ಯ ಉಲ್ಲೇಖಿಸಿದ್ದಾರೆ.

ತೇಜಸ್ವಿ ಸೂರ್ಯ ಎಕ್ಸ್ ಸಂದೇಶ

ಲಾಲ್‌ಬಾಗ್‌, ಹೆಬ್ಬಾಳ ಕೆರೆ ಯೋಜನೆಗಳ ಉಲ್ಲೇಖ

ಪತ್ರದಲ್ಲಿ ಬೆಂಗಳೂರಿನ ಟನಲ್ ರೋಡ್ ಯೋಜನೆ ಹಾಗೂ ಹೆಬ್ಬಾಳ ಶಾರ್ಟ್ ಟನಲ್ ಯೋಜನೆಗಳನ್ನೂ ಉದಾಹರಣೆಯಾಗಿ ನೀಡಲಾಗಿದೆ. ಟನಲ್ ರೋಡ್ ಯೋಜನೆಗೆ ಲಾಲ್‌ಬಾಗ್‌ನ ಸುಮಾರು 1.92 ಹೆಕ್ಟೇರ್ (ಸುಮಾರು 5 ಎಕರೆ) ಪ್ರದೇಶ ಬೇಕಾಗಬಹುದು ಎಂದು ಉಲ್ಲೇಖಿಸಲಾಗಿದೆ. ಹೆಬ್ಬಾಳ ಶಾರ್ಟ್ ಟನಲ್‌ಗೆ ಸುಮಾರು 3.45 ಎಕರೆ ಹೆಬ್ಬಾಳ ಕೆರೆ ಪ್ರದೇಶ ಬೇಕಾಗಬಹುದು ಎಂದು ಪತ್ರದಲ್ಲಿ ಹೇಳಲಾಗಿದೆ. ಲಾಲ್‌ಬಾಗ್‌ನಲ್ಲಿ ಸುಮಾರು 3 ಬಿಲಿಯನ್ ವರ್ಷಗಳಷ್ಟು ಹಳೆಯ ಪೆನಿನ್ಸುಲರ್ ಗ್ನೈಸ್ ಇರುವುದರಿಂದ ಅದು ಪ್ರಮುಖ ಭೌಗೋಳಿಕ ಮತ್ತು ಪರಿಸರ ಪರಂಪರೆಯ ತಾಣವಾಗಿದೆ ಎಂದು ಸೂರ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರಿನ ಉದ್ಯಾನಗಳ ಅಂಕಿ-ಅಂಶ

Tejaswi Surya Letter To Governor: ಕರ್ನಾಟಕ ಉದ್ಯಾನವನಗಳ ವಿಧೇಯಕ ಸರ್ಕಾರಕ್ಕೆ ವಾಪಸ್ ಕಳುಹಿಸುವಂತೆ ಮನವಿ
ಬೆಂಗಳೂರಿನಲ್ಲಿ ಒಟ್ಟು 1,353 ಉದ್ಯಾನಗಳು ಸುಮಾರು 1,308 ಎಕರೆ ಪ್ರದೇಶದಲ್ಲಿ ಹರಡಿಕೊಂಡಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನಗರದಲ್ಲಿನ ವಿವಿಧ ಪಾಲಿಕೆ ವ್ಯಾಪ್ತಿಗಳ ಉದ್ಯಾನಗಳ ಸಂಖ್ಯೆಯನ್ನೂ ಅವರು ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪುಗಳ ಉಲ್ಲೇಖ

ಸಾರ್ವಜನಿಕ ಉದ್ಯಾನಗಳು ಮತ್ತು ತೆರೆದ ಪ್ರದೇಶಗಳ ಸಂರಕ್ಷಣೆಯ ಮಹತ್ವವನ್ನು ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳು ಒತ್ತಿಹೇಳಿವೆ ಎಂದು ತೇಜಸ್ವಿ ಸೂರ್ಯ ಪತ್ರದಲ್ಲಿ ಹೇಳಿದ್ದಾರೆ. ಉದ್ಯಾನಗಳ ಸಾರ್ವಜನಿಕ ಹಿತಾಸಕ್ತಿಯನ್ನು ಬದಿಗೊತ್ತಿ ಅವುಗಳನ್ನು ಬೇರೆ ಉದ್ದೇಶಗಳಿಗೆ ಬಳಸುವುದು ಸೂಕ್ತವಲ್ಲ ಎಂಬ ಅಂಶವನ್ನೂ ಪ್ರಸ್ತಾಪಿಸಿದ್ದಾರೆ.

ರಾಜ್ಯಪಾಲರಿಗೆ ತೇಜಸ್ವಿ ಸೂರ್ಯ ಮನವಿ ಏನು?

ಒಟ್ಟಾರೆ, ಉದ್ಯಾನವನಗಳ ಶೇ 5ರಷ್ಟು ಪ್ರದೇಶವನ್ನು ಬೇರೆ ಸಾರ್ವಜನಿಕ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವ ತಿದ್ದುಪಡಿಯಿಂದ ಬೆಂಗಳೂರಿನ ಹಸಿರು ಪ್ರದೇಶಗಳಿಗೆ ದೀರ್ಘಕಾಲೀನ ಹಾಗೂ ಸರಿಪಡಿಸಲಾಗದ ಹಾನಿಯಾಗಬಹುದು ಎಂಬ ಆತಂಕವನ್ನು ತೇಜಸ್ವಿ ಸೂರ್ಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಈ ವಿಧೇಯಕಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಅನೇಕ ರಾಜಕೀಯ ನಾಯಕರು ಮತ್ತು ಸಾರ್ವಜನಿಕ ಸಂಘಟನೆಗಳು ಸಹ ಈ ಕಾಯ್ದೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಉದ್ಯಾನವನಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರ ಈ ನಡೆ, ಕರ್ನಾಟಕದ ಪ್ರಮುಖ ರಾಜಕೀಯ ಬೆಳವಣಿಗೆಯಾಗಿದ್ದು, ಇದಕ್ಕೆ ರಾಜ್ಯಪಾಲರ ಕಚೇರಿಯಿಂದ ಏನು ಪ್ರತಿಕ್ರಿಯೆ ಬರಲಿದೆ ಎಂಬ ಕುತೂಹಲ ಮೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:59 am, Tue, 25 August 26

Loading...
Unable to load recommendations.
Follow Us