ದರ್ಶನ್ ಗ್ಯಾಂಗ್ ಚಿತ್ರಹಿಂಸೆಯ ವಿವರ ಕೇಳಿ ಸಿಎಂ ಶಾಕ್; ಇಂಥಾ ಕ್ರೌರ್ಯ ನೋಡೇ ಇಲ್ಲವೆಂದ ಸಿದ್ದರಾಮಯ್ಯ

| Updated By: ಗಣಪತಿ ಶರ್ಮ

Updated on: Jun 21, 2024 | 6:50 AM

ನಟ ದರ್ಶನ್ ಹಾಗೂ ಗ್ಯಾಂಗ್​ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚೆಗೆ ಬಂದಿದೆ. ಈ ಪ್ರಕರಣದಲ್ಲಿ ನಡೆದಿರುವ ಕ್ರೌರ್ಯದ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಆಘಾತ ವ್ಯಕ್ತಪಡಿಸಿದ್ದು, ಪ್ರಕರಣ ಸಂಬಂಧ ಸಚಿವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಡಿ ಗ್ಯಾಂಗ್​ನ ಕ್ರೌರ್ಯದ ಬಗ್ಗೆ ಸಿಎಂ ಹೇಳಿದ್ದೇನು? ಸಚಿವರಿಗೆ ನೀಡಿದ ವಾರ್ನಿಂಗ್ ಏನು? ಇಲ್ಲಿದೆ ವಿವರ.

ದರ್ಶನ್ ಗ್ಯಾಂಗ್ ಚಿತ್ರಹಿಂಸೆಯ ವಿವರ ಕೇಳಿ ಸಿಎಂ ಶಾಕ್; ಇಂಥಾ ಕ್ರೌರ್ಯ ನೋಡೇ ಇಲ್ಲವೆಂದ ಸಿದ್ದರಾಮಯ್ಯ
ದರ್ಶನ್ ಗ್ಯಾಂಗ್ ಚಿತ್ರಹಿಂಸೆಯ ವಿವರ ಕೇಳಿ ಸಿಎಂ ಶಾಕ್
Follow us on

ಬೆಂಗಳೂರು, ಜೂನ್ 21: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ನಟ ದರ್ಶನ್​​ (Darshan) ಹಾಗೂ ನಾಲ್ವರು ಆರೋಪಿಗಳನ್ನು ಪೊಲೀಸರು ಗುರುವಾರ ಮತ್ತೆ ಎರಡು ದಿನ ಕಸ್ಟಡಿಗೆ ಪಡೆದಿದ್ದಾರೆ. ದರ್ಶನ್ ಸೇರಿದಂತೆ ನಾಲ್ವರ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಲಿದ್ದಾರೆ. ಈ ಮಧ್ಯೆ ಈ ಕೊಲೆ ಪ್ರಕರಣವನ್ನ ಸರ್ಕಾರ ಅದೆಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ, ಗುರುವಾರ ಖುದ್ದು ಸಿಎಂ ಸಿದ್ದರಾಮಯ್ಯ (Siddaramaiah) ಸಚಿವ ಸಂಪುಟ ಸಭೆಯಲ್ಲಿ ಆಡಿರುವ ಮಾತೇ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ಕೊಲೆ ಪ್ರಕರಣದ ಮಾಹಿತಿ ಪಡೆದಿರುವ ಸಿದ್ದರಾಮಯ್ಯ, ಆ ಕ್ರೌರ್ಯದ ವರದಿ ಕೇಳಿ ಶಾಕ್​ ಆಗಿದ್ದಾರೆ.

ಅಕ್ಷರಶಃ ನರಕ ಹೇಗಿರುತ್ತದೆ ಎಂಬುದನ್ನು ರೇಣುಕಾಸ್ವಾಮಿಗೆ ಭೂಮಿಯ ಮೇಲೆಯೇ ತೋರಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯೇ ಪೊಲೀಸ್ ಮೂಲಗಳಿಂದ ಸಿಕ್ಕಿರುವ, ಎದೆನಡುಗಿಸುವ ಈ ಚಿತ್ರಗಳು. ಈ ಕ್ರೂರತೆಗೆ ಸಿದ್ದರಾಮಯ್ಯ ಸಹ ಒಂದು ಕ್ಷಣ ಆಘಾತ ವ್ಯಕ್ತಪಡಿಸಿದ್ದಾರೆ.

ರೇಣುಕಾಸ್ವಾಮಿ ಮೈ ಮೇಲೆ ಆಗಿರೋ ಗಾಯಗಳು, ಅದೆಂಥಾ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿ ಹೇಳುತ್ತಿವೆ. ಕೈ ಮೇಲಿದ್ದ ಹಚ್ಚೆ ಕಿತ್ತು ಬರುವಂತೆ ಸುಟ್ಟಿದ್ದಾರೆ. ಎದೆ ಮೇಲೆ, ಕಾಲಿನ ಮೇಲೂ ಸುಟ್ಟ ಗಾಯಗಳಿವೆ. ಇನ್ನು ಬೆನ್ನ ತುಂಬಾ ರಕ್ತ ಹೆಪ್ಪುಗಟ್ಟುವಂತೆ, ಬಾಸುಂಡೆ ಬರುವಂತೆ ಹಲ್ಲೆ ನಡೆಸಲಾಗಿದೆ. ತಲೆಗೂ ರಕ್ತ ಬರುವಂತೆ ಹೊಡೆಯಲಾಗಿದೆ. ಇಷ್ಟೇ ಅಲ್ಲ. ಮರ್ಮಾಂಗಕ್ಕೆ ಹೊಡೆದಿರುವ ಫೋಟೋ ಕೂಡ ಇದೆ. ಆದರೆ, ಅದನ್ನು ತೋರಿಸಲಾಗದು, ಅಷ್ಟೊಂದು ಭಯಾನಕವಾಗಿದೆ ಎಂದು ಸಿಎಂಗೆ ಮಾಹಿತಿ ನೀಡಲಾಗಿದೆ.

ಪೊಲೀಸರಿಂದ ಈ ಬಗ್ಗೆ ಮಾಹಿತಿ ಪಡೆದಿರುವ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಸಭೆಯಲ್ಲಿ ಸಚಿವರ ಮುಂದೆ ಆ ಕ್ರೂರತೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಂಪುಟ ಸಭೆ ಆರಂಭದಲ್ಲೇ ಮಾತನಾಡಿರುವ ಸಿಎಂ ಈ ಕೊಲೆಯಂತ ಕ್ರೂರತನವನ್ನು ನಾನೂ ನೋಡಿಯೇ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಸಚಿವರಿಗೂ ಈ ಬಗ್ಗೆ ಮಾತಾಡದಂತೆ ಎಚ್ಚರಿಕೆ ನೀಡಿದ್ದಾರೆ

ಸಚಿವರಿಗೆ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

ಇದರಂತಹ ಕ್ರೂರತನ ನಾನು ನೋಡಿಯೇ ಇಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಯಾರೂ ಮಾತಾಡಬೇಡಿ. ಅನಗತ್ಯವಾಗಿ ಯಾರೂ ತುಟಿ ಬಿಚ್ಚಬೇಡಿ. ಪರ-ವಿರೋಧ ಚರ್ಚೆಯನ್ನೂ ಮಾಡಬೇಡಿ. ಕಾನೂನು, ಪೊಲೀಸರು ತಮ್ಮ ಕೆಲಸ ಮಾಡುತ್ತಾರೆ. ನೀವು ಯಾರೂ ಕೊಲೆ ಬಗ್ಗೆ ಯಾವುದೇ ಚರ್ಚೆ ಮಾಡಬೇಡಿ ಎಂದು ಖುದ್ದು ಸಿಎಂ ಹೇಳಿದ್ದಾರೆ. ಈ ಮೂಲಕ ಸರ್ಕಾರ ಯಾರ ರಕ್ಷಣೆಗೂ ಇಲ್ಲ ಎಂಬ ಸಂದೇಶವನ್ನ ಸಿಎಂ ಕೊಟ್ಟಿದ್ದಾರೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್​​ನಿಂದ ಪೊಲೀಸ್ ಪೇದೆ ಮೇಲೆ ನಡೆದಿತ್ತು ಹಲ್ಲೆ? ಕಾಂಗ್ರೆಸ್ ಶಾಸಕನ ಗನ್ ಮ್ಯಾನ್ ಮೇಲೆ ದರ್ಪ

ದರ್ಶನ್ ತಮ್ಮ ಪ್ರಭಾವ ಹಾಗೂ ಸಂಪರ್ಕಗಳನ್ನು ಬಳಸಿ ಕಂಬಿ ಎಣಿಸೋ ಸ್ಥಿತಿಯಿಂದ ಹೊರ ಬರಲು ಸಾಕಷ್ಟು ಕಸರತ್ತು ಮಾಡಿದ್ದರು. ಆಪ್ತರಾದ ಸಚಿವರು ಶಾಸಕರು ಕೂಡ ಸಿಎಂ ಮೇಲೆ ಭಾರೀ ಒತ್ತಡ ತಂದಿದ್ದರು. ಅಲ್ಲದೆ, ಎಸ್​ಪಿಪಿ ಪ್ರಸನ್ನ ಕುಮಾರ್ ಅವರನ್ನೂ ಬದಲಿಸಬೇಕೆಂದು ಸಚಿವರು ಒತ್ತಡ ಹೇರಿದ್ದರು. ಈ ಬಗ್ಗೆ ಮೊನ್ನೆ ಪ್ರತಿಕ್ರಿಯೆಸಿದ್ದ ಸಿಎಂ, ಎಸ್​ಪಿಪಿ ಬದಲಾವಣೆ ಇಲ್ಲ ಎಂದಿದ್ದರು.

ಇದೀಗ ನಿನ್ನೆ ರೇಣುಕಾಸ್ವಾಮಿ ದೇಹದ ಫೋಟೋ ಕಂಡು, ದರ್ಶನ್​ನ ಕ್ರೌರ್ಯದ ವರದಿ ಕೇಳಿದ ನಂತರ ಸಚಿವರಿಗೆ ಈ ಕೇಸ್​ನಿಂದ ದೂರವಿರಿ ಎಂದು ತಾಕೀತು ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ