ಹಾವು, ನಾಯಿ ಕಡಿತ ಹೆಚ್ಚಳ: ಸುಪ್ರೀಂ ಸೂಚನೆ ಬೆನ್ನಲ್ಲೇ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಸುತ್ತೋಲೆ
ಕರ್ನಾಟಕದಲ್ಲಿ ಬೀದಿನಾಯಿ ಮತ್ತು ಹಾವು ಕಡಿತ ಪ್ರಕರಣಗಳು ಹೆಚ್ಚಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಜನ ಭಯಭೀತರಾಗಿದ್ದಾರೆ. ಸುಪ್ರೀಂ ಕೋರ್ಟ್ ಎಚ್ಚರಿಕೆಯ ನಂತರ ಸರ್ಕಾರವು ನಾಯಿ, ಹಾವು ಕಡಿತಕ್ಕೆ ಉಚಿತ ತುರ್ತು ಚಿಕಿತ್ಸೆ, ಆ್ಯಂಟಿ-ರೇಬೀಸ್ ಲಸಿಕೆ ಮತ್ತು ಪ್ರಥಮ ಚಿಕಿತ್ಸೆ ನೀಡಲು ಹೊಸ ಸುತ್ತೋಲೆ ಹೊರಡಿಸಿದೆ.

ಬೆಂಗಳೂರು, ನವೆಂಬರ್ 15: ಸಿಲಿಕಾನ್ ಸಿಟಿ ಸೇರಿದ್ದಂತೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳ (Stray dogs) ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಪಟಾಣಿ ಮಕ್ಕಳು, ಮಹಿಳೆಯರ ಮೇಲೆಯೇ ಬೀದಿನಾಯಿಗಳು ಉಪಟಳ ಇಡುತ್ತಿದ್ದು ಮಕ್ಕಳನ್ನ ಶಾಲೆಗೆ ಒಂಟಿಯಾಗಿ ಕಳಸಲು ಪೋಷಕರು ಭಯ ಬೀಳುತ್ತಿದ್ದಾರೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲಿಯೇ ನಾಯಿಗಳ ಕಡಿತ ಹೆಚ್ಚಾಗಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್ ವರದಿ ಸಲ್ಲಿಸದ ಕರ್ನಾಟಕಕ್ಕೂ ಛೀಮಾರಿ ಹಾಕಿತ್ತು. ಈ ಬೆನ್ನಲ್ಲೇ ಇದೀಗ ಸರ್ಕಾರ ಅಲರ್ಟ್ ಆಗಿದ್ದು, ರಾಜ್ಯದಲ್ಲಿ ನಾಯಿ ಹಾಗೂ ಹಾವು ಕಡಿತದ (Snake bite) ಸಾವು ತಡೆಯಲು ಮುಂದಾಗಿದೆ.
ರಾಜ್ಯದಲ್ಲಿ ಒಂದಡೇ ಹಿಂಡು ಹಿಂಡಾಗಿ ಬೀದಿನಾಯಿಗಳು ದಾಂಗುಡಿ ಇಡುತ್ತಿದ್ದು, ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರ ಮೇಲೆ ಅಟ್ಯಾಕ್ ಮಾಡುತ್ತಿವೆ. ಕಳೆದ ಕೆಲವು ದಿನಗಳಿಂದ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಿಟಿ ಜನರು ಪರದಾಡುವಂತಾಗಿದೆ. ಕೇವಲ ಬೆಂಗಳೂರು, ಕರ್ನಾಟಕ ಮಾತ್ರವಲ್ಲ ದೇಶದಲ್ಲಿಯೇ ಬೀದಿನಾಯಿಗಳ ಹಾವಳಿ ಪ್ರಕರಣಗಳು ಹೆಚ್ಚಿರುವುದನ್ನು ಮನಗಂಡ ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ನಡೆಸತ್ತಿದೆ.
ಇದನ್ನೂ ಓದಿ: ಬೀದಿನಾಯಿ ದಾಳಿಗೆ ವ್ಯಕ್ತಿ ಬಲಿ: ಕಣ್ಣುಗುಡ್ಡೆಯನ್ನೇ ಕಿತ್ತು ಹಾಕಿದ ಡೆಡ್ಲಿ ಶ್ವಾನ
ಬೀದಿನಾಯಿಗಳ ಕಡಿವಾಣಕ್ಕೆ ರಾಜ್ಯಗಳು ಕೈಗೊಂಡ ಕ್ರಮಗಳ ಬಗ್ಗೆ ವರದಿ ಕೇಳಿತ್ತು. ಈ ಬಗ್ಗೆ ಮಾಹಿತಿ ನೀಡದ ಕಾರಣ ರಾಜ್ಯದ ಮೇಲೇ ಕೋರ್ಟ್ ಗರಂ ಆಗಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರ ಹಾಗೂ ಆರೋಗ್ಯ ಇಲಾಖೆ ನಾಯಿ ಕಡಿತಕ್ಕೆ ಆಸ್ಪತ್ರೆಗಳ ತುರ್ತು ಚಿಕಿತ್ಸೆ ಕ್ರಮಗಳಿಗೆ ಹೊಸ ಸುತ್ತೋಲೆ ಹೊರಡಿಸಿದೆ.
ಟಿವಿ9 ಬಿಗ್ ಇಂಪ್ಯಾಕ್ಟ್: ನಾಯಿ, ಹಾವು ಕಡಿತಕ್ಕೆ ಚಿಕಿತ್ಸೆ ಉಚಿತ
ಬೆಂಗಳೂರು ಸೇರಿದ್ದಂತೆ ರಾಜ್ಯದ್ಯಲ್ಲಿ ಪ್ರತಿ ತಿಂಗಳು 40 ಸಾವಿರ ನಾಯಿ ಕಡಿತ ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿ ತಿಂಗಳು ಎರಡು ಸಾವಿರ ಹಾವು ಕಡಿತ ಪ್ರಕರಣಗಳು ದಾಖಲಾಗುತ್ತಿವೆ. ಈ ಬಗ್ಗೆ ಕಳೆದ ವಾರ ಟಿವಿ9 ಕೂಡ ಸುದ್ದಿ ಪ್ರಸಾರ ಮಾಡುವ ಮೂಲಕ ಸರ್ಕಾರವನ್ನ ಎಚ್ಚರಿಸುವ ಕೆಲಸ ಮಾಡಿತ್ತು. ಈ ಬೆನ್ನಲ್ಲೇ ಸರ್ಕಾರ ಅಲರ್ಟ್ ಆಗಿದ್ದು, ನಾಯಿ, ಹಾವು ಹಾಗೂ ಇತರೆ ಪ್ರಾಣಿಗಳ ಕಡಿತದ ಚಿಕಿತ್ಸಾ ಕ್ರಮಗಳ ಸುಧಾರಣೆಗೆ ಆರೋಗ್ಯ ಇಲಾಖೆ ಮುಂದಾಗಿದೆ.
ನಾಯಿ, ಹಾವು ಕಡಿತಕ್ಕೆ ಸರ್ಕಾರದಿಂದ ಸುತ್ತೋಲೆ
ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಆ್ಯಂಟಿ-ರೇಬೀಸ್ ಲಸಿಕೆಗಳು ಮತ್ತು ರೇಬೀಸ್ ಇಮ್ಯುನೊಗ್ಲೋಬುಲಿನ್‌ಗಳ ಕಡ್ಡಾಯ ಸಂಗ್ರಹ ಹೊಂದಿರಬೇಕು. ನಾಯಿ, ಹಾವು ಸೇರಿದಂತೆ ಇತರೆ ಪ್ರಾಣಿಗಳು ಕಚ್ಚಿದವರಿಗೆ ಉಚಿತ ಪ್ರಾಥಮಿಕ ತಪಾಸಣೆ ಹಾಗೂ ಪ್ರಥಮ ಚಿಕಿತ್ಸೆ ಕಡ್ಡಾಯ ನೀಡಬೇಕು. ಯಾವುದೇ ಆಸ್ಪತ್ರೆ ಮುಂಗಡ ಹಣ ಕೇಳದೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು.
ಸೌಲಭ್ಯ ಇಲ್ಲದ ಆಸ್ಪತ್ರೆಗಳು ಪ್ರಥಮ ಚಿಕಿತ್ಸೆ ನೀಡಿ ಸಮೀಪದ ಆಸ್ಪತ್ರೆಗೆ ಸುರಕ್ಷಿತ ರವಾನೆ ಮಾಡಬೇಕು. ಆಸ್ಪತ್ರೆಯ ವೆಚ್ಚವನ್ನ ಜಿಲ್ಲಾ ನೋಂದಣಿ ಮತ್ತು ಅಹವಾಲು ಪರಿಹಾರ ಪ್ರಾಧಿಕಾರ ಮರಳಿ ಪಾವತಿಸಲಿದೆ. ಚಿಕಿತ್ಸೆ ನೀಡದೆ ವೈದ್ಯಕೀಯ ನಿರ್ಲಕ್ಷ್ಯಕ್ಕೆ 2 ವರ್ಷ ಜೈಲು ಶಿಕ್ಷೆ ಸಾಧ್ಯತೆ. ಗಂಭೀರ ನಿರ್ಲಕ್ಷ್ಯ ಕಂಡುಬಂದರೆ ಆಸ್ಪತ್ರೆಯ ಪರವಾನಗಿ ರದ್ದು ಮಾಡಲಾಗುವುದು.
ಇದನ್ನೂ ಓದಿ: Viral: ಬೆಂಗಳೂರಿನಲ್ಲಿ ವಿದೇಶಿ ಉದ್ಯಮಿ ಮೇಲೆ ನಾಯಿ ದಾಳಿ, ಬೆಡ್ ಮೇಲೆ ಮಲಗಿ ಶ್ವಾನಗಳನ್ನು ಪ್ರೀತಿಸುವೆ ಎಂದು ವ್ಯಂಗ್ಯ ಪೋಸ್ಟ್
ಇನ್ನು 2030ರೊಳಗೆ ನಾಯಿ ಕಚ್ಚುವಿಕೆ ಹಾಗೂ ರೇಬೀಸ್‌ನಿಂದ ಶೂನ್ಯ ಸಾವು ಸಾಧಿಸುವ ಗುರಿ ಇದೆ. ಹಾವು ಕಚ್ಚಿದವರಿಗೂ ಸಮೀಪದ ಆರೋಗ್ಯ ಕೇಂದ್ರದಲ್ಲಿ ತಕ್ಷಣದ ತುರ್ತು ಚಿಕಿತ್ಸೆ ಸಿಗಬೇಕು. ಜಿಲ್ಲಾ ನೋಂದಣಿ ಮತ್ತು ಅಹವಾಲು ಪ್ರಾಧಿಕಾರದ ಮೂಲಕ ಚಿಕಿತ್ಸಾ ವೆಚ್ಚ ನೀಡಲಾಗುವುದು. SAST ಯೋಜನೆಯ ಅಡಿಯಲ್ಲಿ ರೋಗಿಗಳಿಗೆ ದಾಖಲಾತಿ ಮಾಡಬೇಕು ಎಂದು ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಜನವರಿಯಿಂದ ನವೆಂಬರ್ 2ರ ವರೆಗೆ 4,10,152 ಜನರ ಮೇಲೆ ನಾಯಿಗಳು ದಾಳಿ ಮಾಡಿದ್ದು, ರಾಜ್ಯದಲ್ಲಿ 34 ಜನರು ಬಲಿ ಆಗಿದ್ದಾರೆ. ಒಂದೇ ವಾರದಲ್ಲಿ 12,257 ಹೆಚ್ಚು ಜನರ ಮೇಲೆ ಬೀದಿನಾಯಿ ಅಟ್ಯಾಕ್ ಮಾಡಿವೆ. ಕಳೆದ ಒಂದು ವಾರದಲ್ಲಿ ನಾಯಿ ಕಡಿತದಿಂದ 3 ಜನರು ಸಾವನ್ನಪ್ಪಿದ್ದಾರೆ.
2024 ನಾಯಿ ಕಡಿದ ಪ್ರಕರಣಗಳ ಅಂಕಿ-ಸಂಖ್ಯೆ
- ನಾಯಿ ಕಡಿತ: 3,61622
- ನಾಯಿ ಕಡಿತದಿಂದ ಸಾವು: 42
2025 ಜನವರಿಯಿಂದ ನವೆಂಬರ್ 2ರವರೆಗೆ
- ನಾಯಿ ಕಡಿತ: 4,10,152
- ನಾಯಿ ಕಡಿತದಿಂದ ಸಾವು: 34
ಕಳೆದ ಮೂರು ವರ್ಷಗಳಲ್ಲಿ ಹಾವು ಕಡಿತದ ಪ್ರಕರಣ ಹಾಗೂ ಸಾವಿನ ಸಂಖ್ಯೆ
- 2021: 950 ಕಡಿತ, ಸಾವು- 0
- 2022: 3439 ಕಡಿತ, ಸಾವು- 17
- 2023: 6596 ಕಡಿತ, ಸಾವು – 19
- 2024: 13,235 ಸಾವಿರಕ್ಕೂ ಹೆಚ್ಚು ಕಡಿತ- 95 ಸಾವು
- ಜನವರಿಯಿಂದ ನವೆಂಬರ್ 2ರವರೆಗೆ 18246 ಕಡಿತ, ಸಾವು- 125
ಒಟ್ಟಿನಲ್ಲಿ ಸರ್ಕಾರ ಕೊನೆಗೂ ಎಲ್ಲಾ ಇಲಾಖೆ ಜೊತೆಗೂಡಿ ಬೀದಿನಾಯಿಗಳ ಕಡಿತ, ಹಾವು ಹಾಗೂ ಪ್ರಾಣಿ ಕಡಿತದ ಸಾವು ತಡೆಯಲು ಕ್ರಮವಹಿಸಿದೆ. ಈಗ ನಾಯಿಗಳ ಕಚ್ಚುವಿಕೆ ನಿಯಂತ್ರಣಗಳ ಬಗ್ಗೆಯೂ ಕ್ರಮಕ್ಕೆ ಮುಂದಾಗಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:36 pm, Sat, 15 November 25



