ಲೋಕಸಭಾ ಚುನಾವಣೆ 2024: 2 ದಿನ ಬಾರ್ ಬಂದ್ ಆಗಿದ್ದಕ್ಕೆ ಕೋಟಿ-ಕೋಟಿ ಲಾಸ್
ಕರ್ನಾಟಕದಲ್ಲಿ ಮೊನ್ನೆ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎರಡು ದಿನ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಏಪ್ರಿಲ್ 24ರ ಸಂಜೆಯಿಂದ ಏ.26ರ ವರೆಗೆ ಮದ್ಯ ಮಾರಾಟ ಬ್ಯಾನ್ ಮಾಡಲಾಗಿತ್ತು. ಇದರಿಂದ ಬಾರ್ ಮಾಲೀಕರಿಗೆ ಕೋಟ್ಯಾಂತರ ರೂ, ನಷ್ಟವಾಗಿದೆ. ಅಲ್ಲದೇ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಹೊಡೆತಬಿದ್ದಿದೆ.
ಬೆಂಗಳೂರು, (ಏಪ್ರಿಲ್ 28): ಶುಕ್ರವಾರ ಅಷ್ಟೇ ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮುಗಿದಿದ್ದು ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದೆ.ಚುನಾವಣಾ ಆಯೋಗ ಎರಡನೇ ಹಂತದ ಚುನಾವಣೆಗೆ ಲೆಕ್ಕಾಚಾರ ಹಾಕುತ್ತಿದ್ದರೆ, ಇತ್ತ ಡ್ರೈ ಡೇ ಎಫೆಕ್ಟ್ ನಿಂದ (ಚುನಾವಣೆಯಿಂದ ಮದ್ಯ ಮಾರಾಟ ನೀಷೇಧ) ಕಂಗಾಲಾದ ಬಾರ್ ಮಾಲೀಕರು ಲಾಭ-ನಷ್ಟದ ಲೆಕ್ಕ ಹಾಕಿದ್ದಾರೆ. ಎಲೆಕ್ಷನ್ ಹಿನ್ನೆಲೆಯಲ್ಲಿ ಬಾರ್ ಬಂದ್ ಮಾಡಿದ್ದರಿಂದ ಎರಡೇ ದಿನಕ್ಕೆ ಬರೋಬ್ಬರಿ 300 ಕೋಟಿ ರೂಪಾಯಿ ನಷ್ಟವಾಗಿದೆ.
ಎರಡು ದಿನ ಬಾರ್ ಬಂದ್ನಿಂದ 300 ಕೋಟಿ ರೂ. ಲಾಸ್
ಲೋಕಸಭಾ ಚುನಾವಣೆ ಹಿನ್ನೆಲೆ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎರಡು ದಿನ ರಾಜ್ಯದ ಬಾರ್ ಗಳನ್ನ ಬಂದ್ ಮಾಡಲಾಗಿತ್ತು, ಏಪ್ರಿಲ್ 24ರ ಸಂಜೆಯಿಂದ ಏ.26ರ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾರ್ ಮಾಲೀಕರಿಗೆ ಕೋಟಿ ಕೋಟಿ ಲಾಸ್ ಆಗಿದೆ. ಇದರಿಂದ ರಾಜ್ಯ ಸರ್ಕಾರದ ರಾಜಸ್ವ ಬೊಕ್ಕಸಕ್ಕೂ ಹೊಡೆತ ಬಿದ್ದಿದೆ
ಇನ್ನು ಎರಡನೇ ಹಂತದ ಎಲೆಕ್ಷನ್ ಗೆ ಮತ್ತೆ ನಷ್ಟದ ಭೀತಿ ಎದುರಾಗಿದ್ದು, ಚುನಾವಣೆ ಎರಡು ದಿನ ಎಂದು ಬಾರ್ ಬಂದ್ ಮಾಡೋ ಬದಲು ಚುನಾವಣೆ ದಿನ ಮಾತ್ರ ಬಾರ್ ಬಂದ್ ಮಾಡಿ ಎಂದು ಬಾರ್ ಮಾಲೀಕರ ಸಂಘ ಚುನಾವಣಾ ಆಯೋಗಕ್ಕೂ ಮನವಿ ಮಾಡಿದೆ. ಇತ್ತ ಎರಡೆರಡು ದಿನ ಬಾರ್ ಬಂದ್ ಮಾಡೋದರಿಂದ ಬಾರ್ ಮಾಲೀಕರು ಕದ್ದುಮುಚ್ಚಿ ದುಪ್ಪಟ್ಟು ಹಣಕ್ಕೆ ಮದ್ಯ ಮಾರಾಟ ಮಾಡುತ್ತಾರೆ, ಬರೀ ಎಲೆಕ್ಷನ್ ದಿನ ಮಾತ್ರ ಬೇಕಿದ್ರೆ ಬಂದ್ ಮಾಡಿ ಎಂದು ಮದ್ಯಪ್ರಿಯರು ಆಗ್ರಹಿಸಿದ್ದಾರೆ.
ಸದ್ಯ ರಾಜ್ಯದಲ್ಲಿ 12 ಸಾವಿರಕ್ಕೂ ಹೆಚ್ಚು ಬಾರ್ ಸನ್ನದುದಾರರಿದ್ದು, ಎರಡನೇ ಹಂತದ ಚುನಾವಣೆ ಮತ್ತು ಮತಎಣಿಕೆ ದಿನದಂದ ಮತ್ತೆ ಬಾರ್ ಬಂದ್ ಆಗಲಿದೆ. ಇದರಿಂದ ಬಾರ್ ಮಾಲೀಕರು ಆತಂಕಗೊಂಡಿದ್ದಾರೆ. ಬರೀ ಚುನಾವಣೆ ದಿನ ಮಾತ್ರ ಬಾರ್ ಬಂದ್ ಮಾಡುವ ಮನವಿಗೆ ಮುಂದಿನ ಬಾರಿಯಾದ್ರೂ ಸ್ಪಂದನೆ ಸಿಗುತ್ತಾ ಎಂದು ಕಾದುಕುಳಿತಿದ್ದಾರೆ.
ಶಾಂತಮೂರ್ತಿ,ಟಿವಿ9,ಬೆಂಗಳೂರು