ಮೈಸೂರು ಮುಡಾದಲ್ಲಿ ಹಗರಣ: ನಿವೇಶನಗಳ ಹಂಚಿಕೆ ರದ್ದು, ಅಧಿಕಾರಿಗಳ ತಲೆದಂಡ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಅನುಪಾತದಲ್ಲಿ ಬಹುಕೋಟಿ ಹಗರಣ ಆರೋಪ ಕೇಳಿಬಂದಿದೆ. ನಿಯಮಬಾಹಿರವಾಗಿ ಹಂಚಿಕೆ ಮಾಡಲಾಗಿರುವ ಮುಡಾ ನಿವೇಶನಗಳನ್ನು ಕರ್ನಾಟಕ ಸರ್ಕಾರ ರದ್ದು ಮಾಡಿದ್ದು, ತನಿಗೆ ಆದೇಶಿಸಲಾಗಿದೆ. ಮುಡಾ ಆಯುಕ್ತ ದಿನೇಶ್ ಕುಮಾರ್, ಕಾರ್ಯದರ್ಶಿ ಮತ್ತು ಎಇಇ ಅನ್ನು ವರ್ಗಾವಣೆ ಮಾಡಿ ಸಚಿವ ಭೈರತಿ ಸುರೇಶ್ ಆದೇಶ ಹೊರಡಿಸಿದ್ದಾರೆ.
ಮೈಸೂರು, ಜುಲೈ 01: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (Muda) ಬಹುಕೋಟಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಮುಡಾ ಆಯುಕ್ತ ದಿನೇಶ್ ಕುಮಾರ್, ಕಾರ್ಯದರ್ಶಿ ಮತ್ತು ಎಇಇ ವರ್ಗಾವಣೆ ಮಾಡಿ ಕೂಡಲೇ ಜಾರಿಗೆ ಬರುವಂತೆ ಸೋಮವಾರ ಸಚಿವ ಭೈರತಿ ಸುರೇಶ್ (Byrathi Suresh) ಮೌಖಿಕ ಆದೇಶ ಹೊರಡಿಸಿದ್ದಾರೆ. ಹಂಚಿಕೆ ಆಗಿರುವ ಎಲ್ಲಾ ಸೈಟ್ಗಳನ್ನು ತಡೆಹಿಡಿಯಲಾಗಿದೆ. 50:50 ಅನುಪಾತದಲ್ಲಿ ನಿವೇಶನ ಹಂಚಿಕೆ ಸಂಬಂಧ ಐಎಎಸ್ ಅಧಿಕಾರಿಗಳಾದ ವೆಂಕಟಚಲಪತಿ, ಕವಳಗಿ ನೇತೃತ್ವದಲ್ಲಿ ತನಿಖೆ ನಡೆಸಿ 4 ವಾರಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.
ಮುಡಾ ನಿವೇಶನಗಳ ಹಂಚಿಕೆ ಹಗರಣ: ತನಿಖೆಗೆ ಆದೇಶ
ನಿಯಮಬಾಹಿರವಾಗಿ ಹಂಚಿಕೆ ಮಾಡಲಾಗಿರುವ ಮುಡಾ ನಿವೇಶನಗಳನ್ನು ಕರ್ನಾಟಕ ಸರ್ಕಾರ ರದ್ದು ಮಾಡಿದೆ. ಆ ಮೂಲಕ ಮುಡಾ ನಿವೇಶನಗಳ ಹಂಚಿಕೆ ಹಗರಣವನ್ನು ತನಿಖೆಗೆ ಆದೇಶಿಸಲಾಗಿದೆ. ಈ ಕುರಿತಾಗಿ ತನಿಖಾ ತಂಡವನ್ನು ರಚಿಸಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕೆ. ಲತಾ ಆದೇಶ ಹೊರಡಿಸಿದ್ದಾರೆ.
ಸಚಿವ ಭೈರತಿ ಸುರೇಶ್ ಹೇಳಿದ್ದಿಷ್ಟು
ಈ ಕುರಿತಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಮುಡಾದಲ್ಲಿ ಹಗರಣ ನಡೆದಿದೆ ಅಂತಾ ಮಾಧ್ಯಮಗಳಲ್ಲಿ ಬರುತ್ತಿದೆ. ಈ ವಿಚಾರ ನಿನ್ನೆಯಷ್ಟೇ ಗಮನಕ್ಕೆ ಬಂದಿದೆ. ಹಗರಣ ಆರೋಪ ಕೇಳಿಬಂದ ಹಿನ್ನೆಲೆ ಇಂದು ಸಭೆ ನಡೆಸಿದ್ದೇನೆ. ಸಭೆಯಲ್ಲಿ ಹಲವಾರು ವಿಚಾರ ಚರ್ಚೆಯಾಗಿದೆ ಎಂದರು.
ಇದನ್ನೂ ಓದಿ: ಸಿಎಂ ತವರು ಜಿಲ್ಲೆಯಲ್ಲಿ ಭ್ರಷ್ಟಾಚಾರ: ಮೂಡಾ ವಿರುದ್ಧ 2.5 ಸಾವಿರ ಕೋಟಿಗೂ ಹೆಚ್ಚು ಅವ್ಯವಹಾರ ಆರೋಪ
ತುಂಡು ಭೂಮಿಯನ್ನು ಹಂಚಿಕೆ ಮಾಡದಂತೆ ಆದೇಶ ಮಾಡಿದ್ದೇನೆ. 7 ತಿಂಗಳ ಹಿಂದೆ ನಾನೇ ಆದೇಶ ಮಾಡಿದ್ದೇನೆ. ಬಿಜೆಪಿ ಇದ್ದಾಗ ಮಾಡಿರುವ ಆದೇಶ ರದ್ದುಪಡಿಸಲು ಸೂಚಿಸಿದ್ದೇನೆ. ಇಬ್ಬರು ಅಧಿಕಾರಿಗಳ ಮೂಲಕ ಹಗರಣದ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ನೇಮಕಾತಿಯಲ್ಲಿ ಗೋಲ್ ಮಾಲ್: ಕೋರ್ಟ್ ಮೊರೆ ಹೋದ ಉದ್ಯೋಗ ವಂಚಿತರು
1 ತಿಂಗಳು ಸೈಟ್ ಹಂಚಿಕೆ, ಮುಡಾ ಸಭೆ ಮಾಡುವಂತಿಲ್ಲ. ಹಂಚಿಕೆ ಆಗಿರುವ ಎಲ್ಲಾ ಸೈಟ್ಗಳನ್ನು ಕೂಡ ತಡೆಹಿಡಿಯಲಾಗಿದೆ. ವರ್ಗಾವಣೆಗೊಳಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಅಲ್ಲ, ನಿಷ್ಪಕ್ಷಪಾತ ತನಿಖೆ ಹಿನ್ನೆಲೆ ಅಧಿಕಾರಿಗಳ ವರ್ಗಾವಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ನಮ್ಮ ಅವಧಿಯಲ್ಲಿ ಯಾವುದೇ ಅಕ್ರಮವಾಗಿಲ್ಲ
ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 87ರ ಅನ್ವಯ ರದ್ದು ಪಡಿಸಲು ಆದೇಶ ಮಾಡಲಾಗಿದೆ. 27-10-2023ರಲ್ಲಿ ಈ ಆದೇಶ ಮಾಡಲಾಗಿದೆ. 50-50 ಅನುಪಾತ ಜಾರಿಗೆ ಬಂದಿದ್ದ 2020ನೇ ಇಸವಿಯಲ್ಲಿ. ಜಾಗ ನೀಡಲು ಕ್ಯಾಬಿನೆಟ್ ಸಮ್ಮತಿ ಬೇಕೆಂದಿರುವ ನಿಯಮ. ಆದರೆ ಈವರೆಗೆ ಮೂಡಾ ನೀಡಿರುವ ಜಾಗಕ್ಕೆ ಯಾವುದೇ ಕ್ಯಾಬಿನೆಟ್ ತೀರ್ಮಾನ ಆಗಿಲ್ಲ. ಈ ವರೆಗೆ ಇದೇ ನಿಯಮದಲ್ಲಿ ಮೂಡಾ ಅಧಿಕಾರಿಗಳು ಸಾಕಷ್ಟು ಸೈಟ್ ನೀಡಿದ್ದಾರೆ. ಇಲ್ಲಿ ಎಷ್ಟು ಅಕ್ರಮ ಆಗಿದೆ ಅಂತ ಗೊತ್ತಿಲ್ಲ. ಇದನ್ನು ತಿಳಿದುಕೊಳ್ಳುವ ಸಲುವಾಗಿಯೇ ತನಿಖೆ ನಡೆಸಲಾಗುತ್ತಿದೆ. ನಮ್ಮ ಅವಧಿಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ಕೊಟ್ಟಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಈ ನಿಯಮ ಜಾರಿಗೆ ತಂದಿದೆ. ಅಲ್ಲಿಂದ ಏನು ಆಗಿದೆ ಎಂಬುದನ್ನು ತಿಳಿಯಬೇಕಿದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:16 pm, Mon, 1 July 24