ಹಾವೇರಿ, ಅಕ್ಟೋಬರ್ 25: ಶಿಗ್ಗಾಂವಿ ಬೈ ಎಲೆಕ್ಷನ್ಗೆ ಕಾಂಗ್ರೆಸ್ (congress) ಟಿಕೆಟ್ ಅನ್ನು ಹೈಕಮಾಂಡ್ ಸ್ವಲ್ಪ ಅಳೆದು ತೂಗಿ ಯಾಸೀರ್ ಖಾನ್ ಪಠಾಣ್ ನೀಡಲಾಗಿದೆ. ಆ ಮೂಲಕ ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಇಂದು ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದು, ತಮ್ಮ ಆಸ್ತಿ ವಿವರವನ್ನು ಅಫಿಡೆವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.
ಇನ್ನು ಕಾಂಗ್ರೆಸ್ ಟಿಕೆಟ್ ಸಿಗದ್ದರಿಂದ ಬಂಡಾಯವಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರವನ್ನು ಸಲ್ಲಿಸಿದ್ದಾರೆ. ತಮ್ಮ ಆಸ್ತಿ ವಿವರವನ್ನು ಅಫಿಡೆವಿಟ್‌ನಲ್ಲಿ ಘೋಷಿಸಿಕೊಂಡಿದ್ದು, 1.15 ಕೋಟಿ ಮೌಲ್ಯದ ರೂ. ಆಸ್ತಿ ಹೊಂದಿದ್ದಾರೆ.
ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಅವರ ಕೈಯಲ್ಲಿ 50 ಸಾವಿರ ರೂ. ನಗದು ಹಣವಿದ್ದು, 30 ಲಕ್ಷ ರೂ. ಮೌಲ್ಯದ ಟೊಯೊಟಾ ಕಾರು ಸೇರಿ 30.50 ಲಕ್ಷ ರೂ. ಮೌಲ್ಯದ ಚರಾಸ್ತಿಯಿದೆ. ಬೆಂಗಳೂರಿನಲ್ಲಿ ಬಿಡಿಎ ನಿವೇಶನ ಸೇರಿದಂತೆ 84 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇವರ ಪತ್ನಿ ಬಳಿ 10 ಸಾವಿರ ರೂ. ನಗದು, 1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ.
ಇದನ್ನೂ ಓದಿ: ಚನ್ನಪಟ್ಟಣ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕೋಟ್ಯಾಧಿಪತಿ: ಪುತ್ರ ಲಕ್ಷಾಧಿಪತಿ..!
ಕ್ಯಾಲಕೊಂಡ ಗ್ರಾಮದಲ್ಲಿ 25 ಲಕ್ಷ ಮೌಲ್ಯದ 17 ಎಕರೆ ಕೃಷಿ ಭೂಮಿ. ಹುಲಗೂರು ಗ್ರಾಮದಲ್ಲಿ ಮನೆ, ಹುಬ್ಬಳ್ಳಿಯಲ್ಲಿ ಪ್ಲಾಟ್, 16 ಲಕ್ಷ ರೂ. ಸಾಲವನ್ನು ಹೊಂದಿದ್ದು, ಹುಲಗೂರು ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಒಂದು ಅಪರಾಧಿ ಪ್ರಕರಣ ದಾಖಲಾಗಿದ್ದು, ಸದ್ಯ ಜನಪ್ರತಿನಿಧಿಗಳ ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲಾಗಿದೆ. ಹುಲಗೂರಿನಲ್ಲಿ ಹಾಕಿದ್ದ ಭಗವಾಧ್ವಜ ತೆರವುಗೊಳಿಸುವ ಕುರಿತು ಮೊಬೈಲ್‌ನಲ್ಲಿ ಸಂಭಾಷಣೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಇವರ ಮೇಲೆ ಕೇಸ್ ದಾಖಲಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.