ಗಣರಾಜ್ಯೋತ್ಸವ ಸ್ತಬ್ಧಚಿತ್ರದಲ್ಲಿ ಶಿವಮೊಗ್ಗ ರಂಗಾಯಣ ರೆಪರ್ಟರಿ ಕಲಾವಿದರು
‘ಸುಮಾರು 15 ದಿನಗಳ ಕಾಲ ಹಗಲಿರುಳೆನ್ನದೇ ಸ್ತಬ್ಧಚಿತ್ರದ ಕುರಿತೇ ಧ್ಯಾನ ಮಾಡಿದಂತೆ ಕೆಲಸ ನಿರ್ವಹಿಸಿದೆವು. ಇತಿಹಾಸವನ್ನು ಜನರೆದುರು ತೆರೆದಿಡಬೇಕು. ವಿಜಯನಗರ ಸಾಮ್ರಾಜ್ಯದ ವೈಭವವನ್ನು ಪ್ರದರ್ಶಿಸಬೇಕು ಎಂದು ಹಂಬಲಿಸಿದ ಇಡೀ ತಂಡದ ಪ್ರತಿಫಲವೇ ಈ ಸುಂದರ ಸ್ಥಬ್ಧಚಿತ್ರ’ ಎಂದು ಮಹಿಳಾ ತಂಡದ ವಸ್ತ್ರ ವಿನ್ಯಾಸಕಿ ಸಹನಾ ಚೇತನ್ ತಿಳಿಸಿದರು.
ಶಿವಮೊಗ್ಗ: ದೆಹಲಿಯಲ್ಲಿ ನಡೆಯಲಿರುವ 72ನೇ ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ವಿಜಯನಗರ ಸಾಮ್ರಾಜ್ಯದ ವೈಭವ ಪ್ರದರ್ಶನಗೊಳ್ಳಲಿದೆ. ಖ್ಯಾತ ಕಲಾವಿದ, ವಿನ್ಯಾಸಕಾರ ಶಶಿಧರ ಅಡಪ ಅವರ ನೇತೃತ್ವದಲ್ಲಿ ತಯಾರಾದ ಸ್ತಬ್ಧಚಿತ್ರದಲ್ಲಿ ಶಿವಮೊಗ್ಗದ ಕಲಾವಿದರು ಪಾಲ್ಗೊಂಡಿದ್ದಾರೆ.
ವಿಜಯನಗರ ಸಾಮ್ರಾಜ್ಯವನ್ನು ನೆನಪಿಸುವ, ಗತವೈಭವವನ್ನು ಸಾರುವ ಸ್ತಬ್ಧಚಿತ್ರವನ್ನು ವಿನ್ಯಾಸ ಮಾಡಲಾಗಿದೆ. ಸ್ತಬ್ಧಚಿತ್ರ ಮೆರವಣಿಗೆಗೆ ಪ್ರವೀಣ್. ಡಿ.ರಾವ್ ಸಂಗೀತ ಸಂಯೋಜಿಸಿದ್ದಾರೆ. ವಾರಿಜಾಕ್ಷಿ ವೇಣುಗೋಪಾಲ್ ನೇತೃತ್ವದಲ್ಲಿ ಪ್ರಮಥ್ ಕಿರಣ್ ಮತ್ತು ಗೋಪಾಲ್ ಗೋಪಾಲ್ ವೆಂಕಟರಮಣ ಸಂಗೀತಕ್ಕೆ ಜತೆಯಾಗಿದ್ದಾರೆ.
ಪುರುಷೋತ್ತಮ್ ತಲವಾಟ ಮುಖ್ಯ ವಿನ್ಯಾಸಕಾರರಾಗಿ ಜವಾಬ್ದಾರಿ ನಿರ್ವಹಿಸಿದ್ದು, ಖ್ಯಾತ ಭರತನಾಟ್ಯ ಕಲಾವಿದೆ ಸಹನಾ ಚೇತನ್ ಮಹಿಳಾ ತಂಡದ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ್ ಜವಳಿ ರೆಪರ್ಟರಿ ಕಲಾವಿದರ ಬೆನ್ನಿಗೆ ನಿಂತು ಕೆಲಸ ನಿರ್ವಹಿಸಿದ್ದಾರೆ. ಸ್ತಬ್ಧಚಿತ್ರ ರೂಪಿಸುವಲ್ಲಿ ಗುರುಮೂರ್ತಿ ವರದಮೂಲ ಅವರ ಸಹಕಾರವಿದೆ.
ಟಿವಿ9 ಕನ್ನಡ ಡಿಜಿಟಲ್ಗೆ ಜತೆ ಮಾತಿಗೆ ಸಿಕ್ಕ ಮಹಿಳಾ ತಂಡದ ವಸ್ತ್ರ ವಿನ್ಯಾಸಕಿ ಸಹನಾ ಚೇತನ್ ತಮ್ಮ ಅನುಭವ ಹಂಚಿಕೊಂಡರು. ‘ಸುಮಾರು 15 ದಿನಗಳ ಕಾಲ ಹಗಲಿರುಳೆನ್ನದೇ ಸ್ತಬ್ಧಚಿತ್ರದ ಕುರಿತೇ ಧ್ಯಾನ ಮಾಡಿದಂತೆ ಕೆಲಸ ನಿರ್ವಹಿಸಿದೆವು. ಇತಿಹಾಸವನ್ನು ಜನರೆದುರು ತೆರೆದಿಡಬೇಕು. ವಿಜಯನಗರ ಸಾಮ್ರಾಜ್ಯದ ವೈಭವವನ್ನು ಪ್ರದರ್ಶಿಸಬೇಕು ಎಂದು ಹಂಬಲಿಸಿದ ಇಡೀ ತಂಡದ ಪ್ರತಿಫಲವೇ ಈ ಸುಂದರ ಸ್ತಬ್ಧಚಿತ್ರ’ ಎಂದು ಸಹನಾ ಚೇತನ್ ತಿಳಿಸಿದರು.
Published On - 4:55 pm, Mon, 25 January 21