
ಶಿವಮೊಗ್ಗ, ನವೆಂಬರ್ 21: ವಿದೇಶದಲ್ಲಿ ವ್ಯಾಪಾರ ಮಾಡುವ ಅವಕಾಶದ ಆಮಿಷವೊಡ್ಡಿ ಏಜೆಂಟರಿಂದ ವಂಚನೆಗೊಳಗಾದ ಕರ್ನಾಟಕದ 95 ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಜನರು ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DR Congo) ದೇಶದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಶಿವಮೊಗ್ಗದ ಹಕ್ಕಿಪಿಕ್ಕಿ ಕ್ಯಾಂಪ್‌ನ 70 ಮಂದಿ ಹಾಗೂ ಚನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಯ 25 ಜನರನ್ನು ಅಲ್ಲಿನ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಬೆನಿ ಮತ್ತು ಕಿಸಂಗಾನಿ ನಗರಗಳಿಂದ ರಾಜಧಾನಿ ಕಿನ್ಶಾಸಾಗೆ ಕರೆತಂದು ಇರಿಸಲಾಗಿದ್ದು, ಗಡೀಪಾರು ಪ್ರಕ್ರಿಯೆ ಆರಂಭಿಸಲಾಗಿದೆ.
ವಿದೇಶದಲ್ಲಿ ವ್ಯಾಪಾರ ನಡೆಸಲು ಉತ್ತಮ ಅವಕಾಶವಿದೆ ಎಂದು ನಂಬಿಸಿದ ಏಜೆಂಟರು ಪ್ರತಿಯೊಬ್ಬರಿಂದ ತಲಾ ₹5 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪ ಇದೆ. ಆದರೆ, ಹಣ ಪಡೆದ ಬಳಿಕ ಏಜೆಂಟರು ಪರಾರಿಯಾಗಿದ್ದು, ವಿದೇಶಕ್ಕೆ ತೆರಳಿದ ಹಕ್ಕಿಪಿಕ್ಕಿ ಸಮುದಾಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಕಲಿ ದಾಖಲೆಗಳನ್ನು ಬಳಸಿರುವುದು ಹಾಗೂ ಪ್ರವಾಸಿ ವೀಸಾದಲ್ಲಿ ವ್ಯಾಪಾರ ಚಟುವಟಿಕೆ ನಡೆಸಿರುವುದು ಬಂಧನಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
95 ಮಂದಿ ಬಂಧನದ ಸುದ್ದಿ ಹೊರಬೀಳುತ್ತಿದ್ದಂತೆಯೇ ಕಾಂಗೋದ ವಿವಿಧ ನಗರಗಳಲ್ಲಿ ನೆಲೆಸಿರುವ ಇನ್ನೂ 200ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಸಮುದಾಯದವರಲ್ಲಿ ಆತಂಕ ಮನೆಮಾಡಿದೆ. ಜೀವಭಯದಿಂದ ಕಾಂಗೋ ದೇಶ ತೊರೆದು ಭಾರತಕ್ಕೆ ಮರಳಲು ಅವರು ಹರಸಾಹಸ ಪಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಬಂಧಿತರಷ್ಟೇ ಅಲ್ಲದೆ, ಅಲ್ಲಿರುವ ಇತರ ಕನ್ನಡಿಗರ ಸುರಕ್ಷತೆಯ ಬಗ್ಗೆಯೂ ಕುಟುಂಬಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಂಧಿತರನ್ನು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತಕ್ಷಣ ಭೇಟಿ ಮಾಡಿ ನೆರವು ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಬಂಧಿತರಿಗೆ ಅಗತ್ಯ ಕಾನೂನು ನೆರವು, ಆಹಾರ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಅಲ್ಲದೆ, ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಕುಟುಂಬಗಳು ಮನವಿ ಮಾಡಿವೆ.
ವಿದೇಶದಲ್ಲಿ ಉದ್ಯೋಗ ಅಥವಾ ವ್ಯಾಪಾರದ ಆಮಿಷವೊಡ್ಡಿ ಹಣ ಪಡೆದು ಪರಾರಿಯಾಗಿರುವ ಏಜೆಂಟರ ವಿರುದ್ಧ ವಂಚನೆ ಹಾಗೂ ಮಾನವ ಕಳ್ಳಸಾಗಣೆ ಆರೋಪಗಳಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಆರೋಪಿತ ಏಜೆಂಟರ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ವಂಚನೆಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಬುಡಕಟ್ಟು ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂಬ ಬೇಡಿಕೆಯೂ ವ್ಯಕ್ತವಾಗಿದೆ.
ಇದನ್ನೂ ಓದಿ: ಹರಿದ ಬಟ್ಟೆಯ ಗುಡಿಸಲೇ ಇವರ ಅರಮನೆ; ಕತ್ತಲ ಕೂಪದಲ್ಲಿ ಹಕ್ಕಿಪಿಕ್ಕಿ ಸಮುದಾಯ
ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ರಾಜ್ಯಾಧ್ಯಕ್ಷ ಪುನೀತ್ ಕುಮಾರ್ ಅವರು ಈ ಪ್ರಕರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಾಂಗೋದಲ್ಲಿ ಬಂಧನಕ್ಕೊಳಗಾಗಿರುವ 95 ಜನರನ್ನು ಮಾತ್ರವಲ್ಲದೆ, ಅಲ್ಲಿರುವ ಎಲ್ಲ ಭಾರತೀಯರ ಸುರಕ್ಷತೆಯನ್ನೂ ಖಚಿತಪಡಿಸಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ