ಭದ್ರಾವತಿಯಲ್ಲಿ ಫುಡ್ ಪಾಯಿಸನಿಂಗ್ ಶಂಕೆ; ವಿಶೇಷ ಶಾಲೆಯ 15 ಮಕ್ಕಳು ಸೇರಿದಂತೆ ಹಲವರು ಆಸ್ಪತ್ರೆಗೆ ದಾಖಲು
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ವೇಲೂರ್ ಶೆಡ್‌ನಲ್ಲಿ ನಡೆದ ತಿಥಿ ಕಾರ್ಯಕ್ರಮದ ಊಟ ಸೇವಿಸಿ ತರಂಗ ಶಾಲೆಯ 15 ವಿಶೇಷ ಚೇತನ ಮಕ್ಕಳು ಸೇರಿದಂತೆ ಹಲವರು ಅಸ್ವಸ್ಥಗೊಂಡಿದ್ದಾರೆ. ವಾಂತಿ, ಭೇದಿಯಿಂದ ಬಳಲುತ್ತಿದ್ದವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಸದ್ಯ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ಇಂಧನದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದಾರೆ.

ಮುಖ್ಯಾಂಶಗಳು
- ಭದ್ರಾವತಿಯಲ್ಲಿ ತಿಥಿ ಊಟ ಸೇವಿಸಿ 15 ಶಾಲಾ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥ.
- ಅಸ್ವಸ್ಥಗೊಂಡ ವಿಶೇಷ ಚೇತನ ಮಕ್ಕಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ.
- ಇಲಾಖೆಯಿಂದ ಆಹಾರದ ಸ್ಯಾಂಪಲ್ ಜಪ್ತಿ ಮಾಡಲಾಗಿದ್ದು ತನಿಖೆ ತೀವ್ರಗೊಂಡಿದೆ.
ಶಿವಮೊಗ್ಗ, ಆಗಸ್ಟ್ 08: ಜಿಲ್ಲೆಯ ಭದ್ರಾವತಿ (Shivamogga) ತಾಲೂಕಿನಲ್ಲಿ ಭೀಕರ ಆಹಾರ ವಿಷಬಾಧೆ (Food Poisoning) ಪ್ರಕರಣ ಬೆಳಕಿಗೆ ಬಂದಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಿದ್ಧಪಡಿಸಲಾಗಿದ್ದ ಭೋಜನವನ್ನು ಸೇವಿಸಿದ ತರಂಗ ವಸತಿ ಶಾಲೆಯ 15ಕ್ಕೂ ಹೆಚ್ಚು ವಿಶೇಷ ಚೇತನ ವಿದ್ಯಾರ್ಥಿಗಳು ಹಾಗೂ 8 ಮಂದಿ ಸಾರ್ವಜನಿಕರು ಹಠಾತ್ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥರಾದ ಎಲ್ಲರನ್ನೂ ತಕ್ಷಣವೇ ಸ್ಥಳೀಯ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ಖಚಿತಪಡಿಸಿವೆ.
ನಡೆದಿದ್ದೇನು?
ಭದ್ರಾವತಿಯ ವೇಲೂರ್ ಶೆಡ್ ಪ್ರದೇಶದ ಮನೆಯೊಂದರಲ್ಲಿ ತಿಥಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ನಿಮಿತ್ತ ಸಿದ್ಧಪಡಿಸಲಾಗಿದ್ದ ಊಟವನ್ನು ನ್ಯೂಟೌನ್‌ನ ತರಂಗ ಕಿವುಡು ಮತ್ತು ಮೂಗರ ವಸತಿ ಶಾಲೆಯ ಮಕ್ಕಳು ಸೇವಿಸಿದ್ದರು. ಭೋಜನ ಸವಿದ ಕೆಲವೇ ಗಂಟೆಗಳಲ್ಲಿ ಮಕ್ಕಳಿಗೆ ತೀವ್ರ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದೆ. ಮಕ್ಕಳಷ್ಟೇ ಅಲ್ಲದೆ ಇದೇ ಆಹಾರ ಸೇವಿಸಿದ್ದ ಮೃತರ ಕುಟುಂಬದ ಸಂಬಂಧಿಕರು ಹಾಗೂ ಸ್ಥಳೀಯರು ಸೇರಿ 7-8 ಸಾರ್ವಜನಿಕರ ಆರೋಗ್ಯದಲ್ಲೂ ಏರುಪೇರಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ
ಬಾಧಿತ ಮಕ್ಕಳನ್ನು ತಕ್ಷಣವೇ ಭದ್ರಾವತಿ ತಾಲೂಕು ಆಸ್ಪತ್ರೆಗೆ ತರಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾರನ್ನೂ ಜಿಲ್ಲಾ ಕೇಂದ್ರವಾದ ಶಿವಮೊಗ್ಗ ಆಸ್ಪತ್ರೆಗೆ ರವಾನಿಸುವ ಅಗತ್ಯ ಬಂದಿಲ್ಲ. ಆದರೆ, ಮಕ್ಕಳು ವಿಶೇಷಚೇತನರಾದ್ದರಿಂದ ಮುಂದಿನ 2-3 ದಿನಗಳ ಕಾಲ ವೈದ್ಯರ ಕಠಿಣ ನಿಗಾದಲ್ಲಿಯೇ ಇಟ್ಟು ಚಿಕಿತ್ಸೆ ಮುಂದುವರಿಸಲು ನಿರ್ಧರಿಸಲಾಗಿದೆ.
ತನಿಖೆ ಚುರುಕುಗೊಳಿಸಿದ ಆಹಾರ ಸುರಕ್ಷತಾ ಇಲಾಖೆ
ಒಂದೇ ಕಾರ್ಯಕ್ರಮದ ಊಟ ತಿಂದ ಹಲವರು ಒಟ್ಟಿಗೆ ಅಸ್ವಸ್ಥರಾಗಿರುವುದರಿಂದ ಆಹಾರ ಕಲುಷಿತಗೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕಾರ್ಯಕ್ರಮ ಮುಗಿದ ನಂತರ ಉಳಿದಿದ್ದ ಹಳಸಿದ ಆಹಾರವನ್ನು ಮಕ್ಕಳಿಗೆ ನೀಡಲಾಗಿತ್ತೇ ಅಥವಾ ತಯಾರಿಕೆಯಲ್ಲೇ ದೋಷವಿತ್ತೇ ಎಂಬ ಆಯಾಮದಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿರುವ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಇಲಾಖೆಯ ಅಧಿಕಾರಿಗಳು ಭೋಜನದ ಸ್ಯಾಂಪಲ್‌ಗಳನ್ನು ವಶಕ್ಕೆ ಪಡೆದು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



