ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಮಗಳಿಗೆ ಕೊಲೆ ಬೆದರಿಕೆ; ಸಾಗರದಲ್ಲಿ ಕೇಸ್ ದಾಖಲು

ರಾಜನಂದಿನಿ ಇತ್ತೀಚೆಗೆ ಬಹಳ ಹಾರಾಡುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ ನಾನು ಸುಮ್ಮನೆ ಬಿಡುವುದಿಲ್ಲ. ನನ್ನೊಂದಿಗೆ ಇನ್ನೂ ಬಹಳ ಜನರಿದ್ದಾರೆ. ನಾವೆಲ್ಲ ಸೇರಿ ಅವರ ಕೊಲೆ ಮಾಡುತ್ತೇವೆ ಎಂದು ಕಾಗೋಡು ತಿಮ್ಮಪ್ಪನವರ ಮಗಳಿಗೆ ಮಂಜು ಎಂಬಾತ ಬೆದರಿಕೆ ಹಾಕಿದ್ದಾನೆ.

ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರ ಮಗಳಿಗೆ ಕೊಲೆ ಬೆದರಿಕೆ; ಸಾಗರದಲ್ಲಿ ಕೇಸ್ ದಾಖಲು
ಕಾಗೋಡು ತಿಮ್ಮಪ್ಪ- ಡಾ. ರಾಜನಂದಿನಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: May 04, 2022 | 7:07 PM

ಸಾಗರ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ (Kagodu Thimmappa) ಅವರ ಮಗಳು ಡಾ. ರಾಜನಂದಿನಿ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಈ ಘಟನೆಯ ಕುರಿತು ಶಿವಮೊಗ್ಗ ಜಿಲ್ಲೆಯ ಸಾಗರ (Sagara) ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ ತಾಲೂಕು ತ್ಯಾಗರ್ತಿ ಗ್ರಾಮದ ಮಾರಿಗುಡಿಯ ಸಮೀಪದಲ್ಲಿ ಕಾಗೋಡು ತಿಮ್ಮಪ್ಪನವರ ಮಗಳು ಡಾ. ರಾಜನಂದಿನಿ ಅವರ ಕಾರನ್ನು ಅಡ್ಡಗಟ್ಟಿಕೊಲೆ  ಬೆದರಿಕೆ (Murder Threat) ಹಾಕಲಾಗಿದೆ. ಈ ಪ್ರಕರಣದ ಸಂಬಂಧ ರಾಜನಂದಿನಿ ಅವರ ಕಾರು ಚಾಲಕ ಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಾಗರ ತಾಲೂಕಿನ ವಿವಿಧೆಡೆ ಕಾಗೋಡು ತಿಮ್ಮಪ್ಪ ಫೌಂಡೇಶನ್ ವತಿಯಿಂದ ಆರೋಗ್ಯ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಮೇ 2ರಂದು ತ್ಯಾಗರ್ತಿಯಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಡಾ. ರಾಜನಂದಿನಿ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಹ್ನದ ವೇಳೆ ಸಾಗರಕ್ಕೆ ಅವರು ಹಿಂತಿರುಗುತ್ತಿದ್ದಾಗ ಯುವಕನೊಬ್ಬ ಡಾ. ರಾಜನಂದಿನಿ ಅವರ ಕಾರು ಅಡ್ಡಗಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಡಾ. ರಾಜನಂದಿನಿ ತಮ್ಮ ಕಾರನ್ನು ಬಿಟ್ಟು ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಡಾ. ರಾಜನಂದಿನಿ ಅವರ ಕಾರಿನಲ್ಲಿ ಫೌಂಡೇಶನ್‌ನ ಇತರ ಪ್ರಮುಖರು ಸಾಗರಕ್ಕೆ ತೆರಳುತ್ತಿದ್ದರು. ತ್ಯಾಗರ್ತಿಯ ಮಾರಿಗುಡಿಯ ಬಳಿ ಮಂಜು ಎಂಬಾತ ಡಾ. ರಾಜನಂದಿನಿ ಅವರ ಕಾರನ್ನು ಅಡ್ಡಗಟ್ಟಿ ಬೆದರಿಕೆ ಹಾಕಿದ್ದಾನೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಂಜು, ಕಾರಿನಲ್ಲಿ ಯಾರೆಲ್ಲ ಇದ್ದಾರೆ, ಎಲ್ಲಿಗೆ ಹೊರಟಿದ್ದೀರಿ ಎಂದು ವಿಚಾರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆ ಕಾರಿನಲ್ಲಿ ಡಾ. ರಾಜನಂದಿನಿ ಅವರು ಇರಲಿಲ್ಲ. ಕಾಗೋಡು ತಿಮ್ಮಪ್ಪ ಫೌಂಡೇಷನ್​ನ ಇತರೆ ಸಿಬ್ಬಂದಿ ಆ ಕಾರಿನಲ್ಲಿದ್ದರು.

ಈ ವೇಳೆ ಡಾ. ರಾಜನಂದಿನಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆ ಮಂಜು ಎಂಬ ವ್ಯಕ್ತಿ, ‘ರಾಜನಂದಿನಿ ದೊಡ್ಡ ಕೋಲಾ? ಅವರು ಇತ್ತೀಚೆಗೆ ಬಹಳ ಹಾರಾಡುತ್ತಿದ್ದಾರೆ. ಇದು ಹೀಗೇ ಮುಂದುವರಿದರೆ ನಾನು ಸುಮ್ಮನೆ ಬಿಡುವುದಿಲ್ಲ. ನಾನು ಒಬ್ಬನೇ ಎಂದು ತಿಳಿದುಕೊಳ್ಳಬೇಡ. ನನ್ನೊಂದಿಗೆ ಇನ್ನೂ ಬಹಳ ಜನರಿದ್ದಾರೆ. ನಾವೆಲ್ಲ ಸೇರಿ ಅವರ ಕೊಲೆ ಮಾಡುತ್ತೇವೆ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಡಾ. ರಾಜನಂದಿನಿ ಅವರ ಕಾರನ್ನು ಬೈಕಿನಲ್ಲಿ ಫಾಲೋ ಮಾಡಿದ ಮಂಜು ಆ ಕಾರಿನ ಚಾಲಕ ಪ್ರಕಾಶ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದರಿಂದ ಕಾರಿನಲ್ಲಿದ್ದ ಫೌಂಡೇಶನ್ ಪ್ರಮುಖರು ಕೂಗಾಡಿದ್ದಾರೆ. ಈ ವೇಳೆ ಚಾಲಕ ಪ್ರಕಾಶ್ ಆರೋಪಿ ಮಂಜುವಿನಿಂದ ತಪ್ಪಿಸಿಕೊಂಡು ಸಾಗರದ ಕಡೆಗೆ ಕಾರು ಚಲಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಆರೋಪಿಯನ್ನು ಹಿಡಿಯಲು ಯತ್ನಿಸಿದಾಗ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಮುಳ್ಳಾಕ್ರಾಸ್ ವರೆಗೂ ತಮ್ಮ ಕಾರನ್ನು ಹಿಂಬಾಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ