ಶಿರಸಿಯಲ್ಲಿ ಅದ್ದೂರಿ ಮಾರಿಕಾಂಬಾ ಜಾತ್ರೆ; ಜನಸಾಗರದ ನಡುವೆ ರಾರಾಜಿಸಿದ ಅಪ್ಪು ಭಾವಚಿತ್ರವಿರುವ ಬಾವುಟ
ಒಂದು ಕಡೆ ಶಿರಸಿ ದೇವಿಯನ್ನ ನೋಡುವ ಸೌಭಾಗ್ಯ, ಇನ್ನೊಂದೆಡೆ ಜಾತ್ರಾ ಮಹೋತ್ಸವದಲ್ಲಿ ಅಷ್ಟಾಭರಗಳಿಂದ ಅಲಂಕೃತಗೊಂಡ ರಥಾರೋಹಣದಲ್ಲಿ ಆಸಿನಳಾದ ತಾಯಿಯನ್ನ ನೋಡುವುದೇ ಒಂದು ಚೆಂದ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬೆ (Marikamba) ದೇವಿಯನ್ನ ರಥಾರೋಹಣ ನೆರವೇರಿಸಿ, ನಗರದ ಬೀದಿ ಬೀದಿಯಲ್ಲಿ ಮೆರವಣಿಗೆ ಮೂಲಕ ನಗರದ ಹೃದಯ ಭಾಗದಲ್ಲಿರುವ ಬಿಡುಕಿ ಬೈಲಿನ ಗದ್ದುಗೆಗೆ ತರಲಾಯಿತು. ಭಕ್ತಾದಿಗಳ (Devotees) ಭಕ್ತಿ ಘೋಷದೊಂದಿಗೆ ದೇವಿ ರಥದಲ್ಲಿ ಕೂತು ಇಡೀ ಭಕ್ತ ಸಮೂಹಕ್ಕೆ ದರ್ಶನ ತೋರಿದಳು. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಧಾರ್ಮಿಕ ಪರಂಪರೆಯಂತೆ ಪೂಜಾ ಉತ್ಸವಗಳೊಂದಿಗೆ ಶ್ರೀ ಮಾರಿಕಾಂಬಾ ಜಾತ್ರೆಯನ್ನ ಅತಿ ವಿಜೃಂಭಣೆಯಿಂದ ನಡೆಸಲಾಯಿತು. ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾಧಿಗಳು ದೇವಿಯ ದರ್ಶನ ಪಡೆದು ಪುನೀತರಾದರು.
ಒಂದು ಕಡೆ ಶಿರಸಿ ದೇವಿಯನ್ನ ನೋಡುವ ಸೌಭಾಗ್ಯ, ಇನ್ನೊಂದೆಡೆ ಜಾತ್ರಾ ಮಹೋತ್ಸವದಲ್ಲಿ ಅಷ್ಟಾಭರಗಳಿಂದ ಅಲಂಕೃತಗೊಂಡ ರಥಾರೋಹಣದಲ್ಲಿ ಆಸಿನಳಾದ ತಾಯಿಯನ್ನ ನೋಡುವುದೇ ಒಂದು ಚೆಂದ. ಅಷ್ಟ ಹಸ್ತಗಳಲ್ಲಿ ವಿಶೇಷ ಆಯುಧಗಳನ್ನ ಹಿಡಿದು ಸಿಂಹಾರೂಢಳಾಗಿ ಸರ್ವಾಭರಣ ಸಹಿತ ಇರುವ ಮಾರಿಕಾಂಬೆಯನ್ನ ನೋಢಿದರೆ ಭಕ್ತಿಭಾವ ಹೆಚ್ಚಾಗುತ್ತದೆ. ಶಿಷ್ಟ ಭಕ್ತರಿಗೆ ಮಾರಿಕಾಂಬೆಯಾಗಿ, ಜನ ಸಾಮಾನ್ಯರಿಗೆ ಮಾರೆಮ್ಮನಾಗಿ, ಅಸಹಾಯಕರಿಗೆ ತಾಯಿಯಾಗಿರುವ ದೇವಿ ನವ ದುರ್ಗೆಯರ ಏಕ ರೂಪವಾಗಿ ನೆಲೆ ನಿಂತಿದ್ದಾಳೆ.
ಪ್ರಸಿದ್ಧವಾದ ಜಾತ್ರೆಗಳಲ್ಲಿ ಒಂದು: ಜಾತಿ, ಮತ, ಪಂಥಗಳ ಬೇದವಿಲ್ಲದೆ ಎಲ್ಲಾ ಧರ್ಮಿಯರಿಂದಲೂ ಪೂಜಿಸಲ್ಪಡುವ ಮಾರಿಕಾಂಬೆ ಭಕ್ತರ ಪೊರೆಯುವ ಜಗನ್ಮಾತೆಯಾಗಿದ್ದಾಳೆ. ಎಲ್ಲರಿಗೂ ತಿಳಿದಿರುವಂತೆ ಶಿರಸಿಯ ಮಾರಿಕಾಂಬಾ ಜಾತ್ರೆಯೆಂದರೆ ಅದು ಕರ್ನಾಟಕದಲ್ಲಿಯೇ ಅತೀ ಪ್ರಸಿದ್ಧವಾದ ಜಾತ್ರೆಗಳಲ್ಲಿ ಒಂದು. ಸುಮಾರು ಮುನ್ನೂರು ವರ್ಷಗಳ ಹಿಂದೆಯೇ ಶಿರಸಿಯಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ಮಾರಿಕಾಂಬೆ ಅತ್ಯಂತ ಜಾಗೃತ ಶಕ್ತಿದೇವತೆಯೆಂದು ಪ್ರಸಿದ್ದಳು.
ಜಾತ್ರೆ ಎಂದಕೂಡಲೇ ಅಲ್ಲಿ ಜನಸಾಗರ ಸಾಮಾನ್ಯ. ಆದರೆ ಎರಡು ಸಂವತ್ಸರಕ್ಕೊಮ್ಮೆ ನಡೆಯುವ ಮಾರಮ್ಮನ ಜಾತ್ರೆಯೆಂದರೆ ಇಲ್ಲಿ ಭಾರೀ ವೈಭವ. ಒಂದು ತಿಂಗಳಿರುವಾಗಲೇ ಜಾತ್ರಾ ಸಿದ್ಧತೆಗಳು ಶುರುವಾಗಿ ಹಂತಹಂತವಾಗಿ ಕ್ಷಿಪ್ರಗತಿಯನ್ನು ಪಡೆದುಕೊಳ್ಳುತ್ತದೆ. ಬರೋಬ್ಬರಿ ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಶಿರಸಿಯ ಜಾತ್ರೆಯೆಂದರೆ ಕೇವಲ ಸೀಮಿತ ಪ್ರದೇಶದ ಜನರಷ್ಟೇ ಅಲ್ಲ, ಇಡೀ ಉತ್ತರ ಕನ್ನಡದಿಂದ, ದಕ್ಷಿಣ ಕನ್ನಡ, ಉಡುಪಿ, ಮಂಗಳೂರು, ಉತ್ತರ ಕರ್ನಾಟಕ, ಹೊ ರರಾಜ್ಯಗಳಾದ ಕೇರಳ, ಆಂಧ್ರ, ಮಹಾರಾಷ್ಟ್ರ, ತಮಿಳುನಾಡುಗಳಿಂದ ಭಕ್ತಸಾಗರವೇ ಹರಿದುಬರುತ್ತದೆ.
ಅಪ್ಪುಗೆ ಜೈಕಾರ: ಒಂದು ಕಡೆ ದೇವಿ ರಥೋತ್ಸವ ಸಾಗುತ್ತಿದ್ದರೆ, ಇನ್ನೊಂದು ಕಡೆ ಅಪ್ಪು ಭಾವಚಿತ್ರ ಹಿಡಿದು ಅಭಿಮಾನಿಗಳು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಅಪ್ಪುಗೆ ಜೈಕಾರ ಹಾಕಿದರು.
ಶ್ರೀ ಮಾರಿಕಾಂಬಾ ದೇವಿಯ ಮಹಿಮೆಯೇ ಅಂತದ್ದು. ಭಕ್ತರನ್ನ ತನ್ನಲ್ಲಿಗೆ ಕರೆಸಿಕೊಳ್ಳುತ್ತಾಳೆ. ಸೇವೆ ಪಡೆದು ಅನುಗ್ರಹಿಸಿ ಪುನೀತರಾಗುವಂತೆ ಮಾಡುತ್ತಾಳೆ. ನಂಬಿದ ಭಕ್ತರನ್ನ ಎಂದೂ ಕೈಬಿಟ್ಟವಳಲ್ಲ ಈ ಅಂಬಿಕೆ. ಜಾತ್ರೆಯೆಂದರೆ ಜನಸಂದಣಿ, ರಥಬೀದಿ, ಅಂಗಡಿ ಮುಂಗಟ್ಟುಗಳು, ಒಂದಿಷ್ಟು ಮನರಂಜನೆ ಅಂತ ಎಷ್ಟೋ ಜನರು ಭಾವಿಸಿರುತ್ತಾರೆ. ಆದರೆ ಅದ್ಯಾವುದಕ್ಕೂ ಈ ಜಾತ್ರೆ ಫೇಮಸ್ ಅಲ್ಲ. ಬದಲಾಗಿ ರೋಚಕತೆಯಿಂದ ಕೂಡಿರುವ ಮಾರಿಕಾಂಬಾ ದೇವಿಯ ಚಾರಿತ್ರಿಕ ಹಿನ್ನೆಲೆ ನೋಡಿ ಪ್ರಣಾಮಗಳನ್ನ ಸಲ್ಲಿಸುತ್ತಾರೆ.
ಪ್ರತಿ ಎರಡು ವರ್ಷಕ್ಕೊಮ್ಮೆ ಮಂಗಳವಾರದಂದೇ ಪ್ರಾರಂಭವಾಗುವ ಜಾತ್ರೆ ಹಾಗೂ ಬುಧವಾರದ ರಥೋತ್ಸವದ ನೋಟವೇ ಚಂದ. ನಂತರದ ಒಂದು ವಾರಗಳ ಕಾಲ ದೇವಸ್ಥಾನ ಬಿಟ್ಟು ಶಿರಸಿಯ ಹೃದಯ ಭಾಗವಾದ ಬಿಡ್ಕಿ ಬೈಲಿನಲ್ಲಿ ವಿರಾಜಮಾನಳಾಗುವ ಶಿರಸಿ ಶ್ರೀ ಮಾರಿಕಾಂಬೆಯ ನೋಡುವುದೇ ಒಂದು ಸೊಬಗು. ಅಲ್ಲಿಂದ ಯುಗಾಧಿವರೆಗೆ ದೇವಿಯ ದರ್ಶನ ಅಲ್ಲಿಯೇ ಪಡೆಯಬೇಕಾಗತ್ತೆ. ಮಾರಿ ಜಾತ್ರೆ ಅಂದರೆ ಅಲ್ಲಿ ಪ್ರಾಣಿ ಬಲಿ ಸಾಮಾನ್ಯ. ಆದರೆ ಶಿರಸಿ ಮಾರಿಕಾಂಬೆ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷಿದ್ಧ. ಬದಲಾಗಿ ಇಲ್ಲಿ ಕೇವಲ ಸಾತ್ವಿಕ ಬಲಿ ಮಾತ್ರ ನೀಡಲಾಗುತ್ತೆ.
ವರದಿ: ವಿನಾಯಕ ಬಡಿಗೇರ
ಇದನ್ನೂ ಓದಿ
ಪಕ್ಷ ಒಡೆಯುವುದು ಬೇಡ, ಆದರೆ ಗಾಂಧಿ ಕುಟುಂಬ ನಿಷ್ಠರ ಪದಚ್ಯುತಿಯಾಗಲಿ: ಕಾಂಗ್ರೆಸ್ ಬಂಡಾಯ ನಾಯಕರ ಒತ್ತಾಯ
ಅಪಹೃತ ಮೇಯರ್ ಬಿಡುಗಡೆಗೆ ರಷ್ಯಾದ 9 ಸೈನಿಕರನ್ನು ಬಿಡುಗಡೆ ಮಾಡಿದ ಉಕ್ರೇನ್, ರಂಗಮಂದಿರದ ಮೇಲೆ ರಷ್ಯಾ ಬಾಂಬ್ ದಾಳಿ
Published On - 12:37 pm, Thu, 17 March 22