ಪಿಎಫ್​ಐ ಜೀವಂತವಿದೆ ಎಂದು ತೋರಿಸಲು ಹೀಗೆಲ್ಲಾ ಮಾಡ್ತಿದ್ದಾರೆ: ಶಿವಮೊಗ್ಗ ಗಲಭೆ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ

ಕೆಲವರು ಶಿವಮೊಗ್ಗದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಇಂಥದ್ದಕ್ಕೆ ಅವಕಾಶ ನೀಡಬಾರದು ಎಂದು ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ಪಿಎಫ್​ಐ ಜೀವಂತವಿದೆ ಎಂದು ತೋರಿಸಲು ಹೀಗೆಲ್ಲಾ ಮಾಡ್ತಿದ್ದಾರೆ: ಶಿವಮೊಗ್ಗ ಗಲಭೆ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ
ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ
Edited By:

Updated on: Oct 25, 2022 | 12:19 PM

ಶಿವಮೊಗ್ಗ: ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮದಲ್ಲಿ ಗೊಂದಲವಾಗಿಲ್ಲ. ಆದರೆ ಮುಸ್ಮಿಂ ಗೂಂಡಾಗಳಿಗೆ ಇನ್ನೂ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಸಾರ್ವಕರ್ ಮೊಮ್ಮಗ ಎಲ್ಲೂ ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗ ಗಲಭೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಕಾಶ್​ ಎಂಬಾತನ ವಿನಾಕಾರಣ ಹಲ್ಲೆ ನಡೆದಿದೆ. ಈ ಮೂಲಕ ಪಿಎಫ್​ಐ ಜೀವಂತವಿದೆ ಎಂದು ತೋರಿಸಲು ಇವರು ಹೊರಟಿದ್ದಾರಾ ಎಂದು ಪ್ರಶ್ನಿಸಿದರು. ಇಂಥ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಕೆಲವರು ಶಿವಮೊಗ್ಗದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಇಂಥದ್ದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಪೊಲೀಸರು ಇಂಥ ವಿಚಾರಗಳಲ್ಲಿ ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಮುಸ್ಲಿಂ ಸಮಾಜದ ಹಿರಿಯರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಬೇಕು. ಇಲ್ಲದಿದ್ದಲ್ಲಿ ಅವರ ಮಕ್ಕಳು ಜೈಲುಪಾಲಾಗುವುದರಲ್ಲಿ ಅನುಮಾನವೇ ಇಲ್ಲ. ದೇಶದ ಬೇರೆಡೆ ನಡೆಯುತ್ತಿದ್ದ ಭಯೋತ್ಪಾದನಾ ಚಟುವಟಿಕೆಗಳು ಇಂದು ಶಿವಮೊಗ್ಗದಲ್ಲಿ ನಡೆಯುತ್ತಿವೆ. ಇಲ್ಲಿ ಆರ್​ಎಸ್​ಎಸ್, ಬಜರಂಗದಳದ ಬೆಳವಣಿಗೆ ಸಹಿಸಲು ಆಗದ ಕೆಲ ದೇಶದ್ರೋಹಿಗಳು ಕೈಕೈ ಹಿಸುಕಿಕೊಳ್ಳುತಿದ್ದಾರೆ. ರಾತ್ರಿ ವೇಳೆ ಕೆಲ ದೇಶದ್ರೋಹಿಗಳು ತಮ್ಮ ಕಾರ್ಯಚಟುವಟಿಕೆ ಮುಂದುವರಿಸಿದ್ದಾರೆ. ಜನಾಂಗದ ಹಿರಿಯರು ಎಚ್ಚೆತ್ತುಕೊಂಡು ಇಂಥವರಿಗೆ ಬುದ್ಧಿ ಹೇಳಬೇಕಿದೆ ಎಂದು ಸಲಹೆ ಮಾಡಿದರು.

ಮುಸ್ಲಿಂ ಗೂಡಾಂಗಳಿಗೆ ಶಿವಮೊಗ್ಗದಲ್ಲಿ ಪೊಲೀಸರದ್ದಾಗಲಿ, ಸರ್ಕಾರದ್ದಾಗಲಿ ಭಯ ಇಲ್ಲ. ಹರ್ಷನ ಕೊಲೆಯಾದ ಬಳಿಕ ಈ ಪ್ರಕರಣದ ತನಿಖೆ ಹೊಣೆಯನ್ನು ಎನ್​ಐಎಗೆ ವಹಿಸಲಾಯಿತು. ಬಳಿಕ ಹಲವು ರಾಷ್ಟ್ರದ್ರೋಹಿ ಸಂಘಟನೆಗಳು ಬೆಳಕಿಗೆ ಬಂದಿವೆ ಎಂದರು. ನಿನ್ನೆ ಯುವಕನ‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿಲ್ಲ. ಬದಲಿಗೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಪಿಎಫ್​ಐಗೆ ಸಂಬಂಧಿಸಿದವರು ಈ ಕೃತ್ಯ ನಡೆಸಿದ್ದಾರೆಯೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಲಿದೆ. ಹರ್ಷನ ಮನೆ ಎದುರು ಹರ್ಷನ ಸಹೋದರಿ ಮನೆಯಲ್ಲಿರುವಾಗ ಬೆದರಿಕೆ ಹಾಕಿದ್ದಾರೆ. ಬಳಿಕ ಯುವಕನ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಜೊತೆಗೆ ಆರ್​ಎಸ್​ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದರು.

ನಾವು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕಿದೆ. ಅವರ ರೀತಿಯಂತೆ ಮಚ್ಚು ಲಾಂಗ್ ಹಿಡಿದುಕೊಂಡು ಗಲಾಟೆಗೆ ಹೋಗಲು ಸಾಧ್ಯವಿಲ್ಲ. ಕೂಡಲೇ ಪೊಲೀಸರು ಹರ್ಷನ ಮನೆ ಮುಂದೆ ನಡೆದ ಗಲಭೆ ಮತ್ತು ಪ್ರಕಾಶ್ ಮೇಲಿನ ಹಲ್ಲೆ ಪ್ರಕರಣಗಳನ್ನು ಭೇದಿಸಬೇಕು. ಎನ್​ಕೌಂಟರ್​ ಮಾಡುವ ಬಗ್ಗೆ ನಾನು ಏನೂ ಹೇಳಲಾರೆ. ಅಂಥ ವಿಚಾರಗಳ ಬಗ್ಗೆ ನಾನು ಮಾತನಾಡಬಾರದು. ಮೃತ ಹರ್ಷನ ಸಹೋದರಿ ಅಶ್ವಿನಿ ನೊಂದುಕೊಂಡು ಈ ರೀತಿ ಮಾತನಾಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮುಸ್ಲಿಮರ ದಬ್ಬಾಳಿಕೆ ಬಗ್ಗೆ ಬಾಯಿ ಬಿಡುವುದೇ ಇಲ್ಲ ಎಂದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಮತ್ತೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣ; ಮೃತ ಹರ್ಷ ಕುಟುಂಬಸ್ಥರಿಗೆ ದುಷ್ಕರ್ಮಿಗಳಿಂದ ಬೆದರಿಕೆ‌