ಶಿವಮೊಗ್ಗ, ಜುಲೈ 05: ಅನ್ಯಕೋಮಿನ ವ್ಯಕ್ತಿ ನಾಗರ ವಿಗ್ರಹವನ್ನು (Nagara statue) ಚರಂಡಿಗೆ ಎಸೆದಿರುವ ಆರೋಪ ಕೇಳಿಬಂದಿದೆ. ಶಿವಮೊಗ್ಗ (Shivamogga) ಪಟ್ಟಣದ ಶಾಂತಿನಗರದ ಬಂಗಾರಪ್ಪ ಬಡಾವಣೆಯಲ್ಲಿ ಘಟನೆ ನಡೆದಿದೆ. ಅನ್ಯಕೋಮಿನ ವ್ಯಕ್ತಿ ಗಣೇಶನ ಮೂರ್ತಿಗೆ (Ganesh Statue) ಒದ್ದು, ಅವಮಾನ ಮಾಡಿದ್ದಾನೆ. ಬಳಿಕ ಅಲ್ಲೇ ಇದ್ದ ನಾಗರ ವಿಗ್ರಹ ಚರಂಡಿಗೆ ಎಸೆದು ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಸಂಜೀವ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಬಡಾವಣೆಯ ಮುಖ್ಯ ರಸ್ತೆಯಲ್ಲಿ ಇತ್ತೀಚೆಗೆ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಬಡಾವಣೆ ಜನರು ಅನ್ಯಕೋಮಿನ ವ್ಯಕ್ತಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಘಟನೆ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ಸಂಜೆ ಸಮಯದಲ್ಲಿ ಈ ಘಟನೆ ನಡೆದಿದೆ. ಬಡಾವಣೆಯಲ್ಲಿ ಪಾರ್ಕ್ಗೆ ಮೀಸಲು ಇರಿಸಲಾಗಿದ್ದ ಜಾಗದಲ್ಲಿ ಗಣಪತಿ ವಿಗ್ರಹ ಮತ್ತು ನಾಗ ದೇವರ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ. ಓರ್ವ ವ್ಯಕ್ತಿ ಬಂದು ದೇವರ ಮೂರ್ತಿ ಎಸೆದು ಅವಮಾನ ಮಾಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ ಎಂದರು.
ಇದನ್ನೂ ಓದಿ: ಮೇಯಲು ಬಿಟ್ಟಿದ್ದ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಕಿಡಿಗೇಡಿಗಳು
ಪ್ರಕರಣದ ತನಿಖೆಯನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ನಡೆಸುತ್ತಿದ್ದಾರೆ. ಕೃತ್ಯ ಎಸಗಿದವನನ್ನು ಪತ್ತೆ ಮಾಡಲಾಗುವುದು. ಘಟನೆ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಯಾವ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನುವುದು ಪತ್ತೆ ಮಾಡಬೇಕಿದೆ ಎಂದು ಹೇಳಿದರು.
Published On - 9:21 pm, Sat, 5 July 25