ಶಿವಮೊಗ್ಗ: ಮೇಯಲು ಬಿಟ್ಟಿದ್ದ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಕಿಡಿಗೇಡಿಗಳು
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವಿಜಾಪುರ ಗ್ರಾಮದಲ್ಲಿ ಮತ್ತೊಂದು ಹೇಯ ಕೃತ್ಯ ನಡೆದಿದೆ. ಮೇಯಲು ಹೋಗಿದ್ದಾಗ ಕಿಡಿಗೇಡಿಗಳು ಹಸುವಿನ ಕೆಚ್ಚಲು ಕೊಯ್ದಿರುವಂತಹ ಘಟನೆ ನಡೆದಿದೆ. ಸದ್ಯ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇತ್ತ ಹಸುವನ್ನು ಮನೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ.

ಶಿವಮೊಗ್ಗ, ಜೂನ್ 29: ಕರ್ನಾಟಕದಲ್ಲಿ (Karnataka) ಜಾನುವಾರುಗಳ ಮೇಲಿನ ಕ್ರೌರ್ಯ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಹಲವೆಡೆ ಹಸುವಿನ (cow) ಕೆಚ್ಚಲು ಕೊಯ್ದು ದುಷ್ಕರ್ಮಿಗಳು ವಿಕೃತಿ ಮೆರೆಯುತ್ತಿದ್ದಾರೆ. ಗೋವಿನ ಮೇಲಿನ ದಾಳಿ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಹೀಗಿದ್ದರು ಇದೀಗ ಮತ್ತೊಂದು ಹಸುವಿನ ಕೆಚ್ಚಲು ಕೊಯ್ದು ಕಿಡಿಗೇಡಿಗಳು ವಿಕೃತಿ ಮೆರೆದಿರುವಂತಹ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ವಿಜಾಪುರದಲ್ಲಿ ನಡೆದಿದೆ. ಈ ಕುರಿತಾಗಿ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಡಿಗೇಡಿಗಳು ಗ್ರಾಮದ ವಿಜಯಕುಮಾರ್ ಎಂಬುವರಿಗೆ ಸೇರಿದ ಹಸುವಿನ ಕೆಚ್ಚಲು ಕೊಯ್ದಿದ್ದಾರೆ. ಶನಿವಾರ ಹಸು ಮೇಯಲು ಹೋಗಿದ್ದಾಗ ಕೃತ್ಯವೆಸಗಿ ವಿಕೃತಿ ಮೆರೆದಿದ್ದಾರೆ. ಸ್ಥಳೀಯರ ಸಹಾಯದಿಂದ ಹಸುವನ್ನು ಮನೆಗೆ ಕರೆತಂದ ವಿಜಯಕುಮಾರ್, ಚಿಕಿತ್ಸೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಜಾನುವಾರುಗಳ ಮೇಲೆ ಕ್ರೌರ್ಯ ಹೆಚ್ಚಳ: ರಾಮನಗರದಲ್ಲಿ ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು
ಇತ್ತ ಇತ್ತೀಚೆಗೆ ಜಿಲ್ಲೆಯಲ್ಲಿ ಹಸುಗಳ ಮಾರಣ ಹೋಮ ನಡೆದಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ಭದ್ರಾವತಿಯ ಹಳೆ ಸಿಗೇಬಾಗಿ ನದಿಯ ತಟದಲ್ಲಿ ರಾಶಿರಾಶಿ ಗೋವಿನ ಮೂಳೆ, ಕೊಂಬು ಪತ್ತೆಯಾಗಿದ್ದವು. ಉದ್ದೇಶ ಪೂರ್ವಕವಾಗಿ ನದಿಗೆ ಗೋವಿನ ತ್ಯಾಜ್ಯ ಎಸೆಯಲಾಗಿದೆ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಕೇಸ್ ಕರ್ನಾಟಕದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಬಾಗಲಕೋಟೆ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕೆಲವೆಡೆ ಮೂಕ ಪ್ರಾಣಿ ಮೇಲೆ ದುಷ್ಕರ್ಮಿಗಳು ಕೌರ್ಯ ಎಸಗಿದ್ದರು.
ಇದನ್ನೂ ಓದಿ: ಚಾಮರಾಜಪೇಟೆ ಬೆನ್ನಲ್ಲೇ ಮೈಸೂರಿನಲ್ಲಿ ಕರುವಿನ ಮೇಲೆ ದಾಳಿ: ಮಾರಕಾಸ್ತ್ರದಿಂದ ಬಾಲ ತುಂಡರಿಸಿ ದುಷ್ಕರ್ಮಿಗಳು ಪರಾರಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಭ ಧರಿಸಿದ್ದ ಹಸುವಿನ ತಲೆಯನ್ನೇ ಕಡೆಯಲಾಗಿತ್ತು. ಹೊಟ್ಟೆಯೊಳಗಿದ್ದ ಕರುವನ್ನ ಹೊರತೆಗೆದು ಹಸುವಿನ ದೇಹ ಎತ್ಕೊಂಡು ಹೋಗಿದ್ದರು. ಇತ್ತೀಚೆಗೆ ಬೆಂಗಳೂರು ದಕ್ಷಿಣ ತಾಲೂಕಿನ ಸೂಲಿವಾರ ಗ್ರಾಮದಲ್ಲಿ ಹಾಲಿನ ಡೈರಿ ಅಧ್ಯಕ್ಷರಿಗೆ ಸೇರಿದ್ದ ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಕ್ರೌರ್ಯ ಮೆರೆದಿರುವಂತಹ ಘಟನೆ ನಡೆದಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.