ಸೋಮವಾರ ಸಿಗಂದೂರು ಸೇತುವೆ ಲೋಕಾರ್ಪಣೆ, ದಶಕಗಳ ಕನಸು ನನಸು, ಹಿನ್ನೀರಿನ ಗ್ರಾಮಸ್ಥರ ವನವಾಸ ಅಂತ್ಯ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಪ್ರವಾಸಿ ತಾಣದ ಮುಕಟವೊಂದು ಸೇರ್ಪಡೆಯಾಗಲಿದ್ದು, ಸೋಮವಾರ (ಜು. 14) ಐತಿಹಾಸಿಕ ಕ್ಷೇತ್ರ ಸಿಗಂದೂರು ಸೇತುವೆ ಲೋಕಾರ್ಪಣೆಗೊಳ್ಳಲಿದೆ. ಇದರೊಂದಿಗೆ ಇದೀಗ ಶರಾವತಿ ಹಿನ್ನೀರಿನಲ್ಲಿ ದಶಕಗಳಿಂದ ಗ್ರಾಮಸ್ಥರ ವನವಾಸ ಅಂತ್ಯವಾಗಿದ್ದು, ಸೇತುವೆ ಬಳಿಕ ಈ ಭಾಗದ ಚಿತ್ರಣವೇ ಬದಲಾಗಲಿದೆ.

ಶಿವಮೊಗ್ಗ, (ಜುಲೈ 13): ಆರು ದಶಕಗಳಿಂದ ಸಿಗಂದೂರು ಸೇತುವೆಗಾಗಿ (Sigandur bridge) ಸಾಗರ ತಾಲೂಕಿನ ಶರಾವತಿಯ ಹಿನ್ನೀರಿನ 40ಕ್ಕೂ ಹೆಚ್ಚು ಗ್ರಾಮಸ್ಥರು 60 ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಲಿಂಗಮನಕ್ಕಿ ಜಲಾಶಯದ ಬಳಿಕ ಸಾಗರ ತಾಲೂಕಿನ ತುಮರಿ ಗ್ರಾ.ಪಂ. ಅನೇಕ ಹಳ್ಳಿಗಳಿಗೆ ಲಾಂಚ್ ಗಳೇ ಸಂಪರ್ಕ ಸಾಧನೆಯಾಗಿದ್ದವು. ಬೆಳಗ್ಗೆಯಿಂದ ಸಂಜೆಯವರೆಗೆ ಮಾತ್ರ ಲಾಂಚ್ ಸೇವೆ. ಸಂಜೆ ನಂತರ ಈ ಗ್ರಾಮಗಳಿಗೆ ಸಂಪರ್ಕ ಕೊಂಡಿ ಸಾಗರಕ್ಕೆ ಇರಲಿಲ್ಲ. ಏನಾದ್ರೂ ತುರ್ತು ಪರಿಸ್ಥಿತಿಯಲ್ಲಿ ಸುತ್ತು ಬೆಳೆಸಿ ಗ್ರಾಮಸ್ಥರು ಸಾಗರಕ್ಕೆ ಬರಬೇಕಿತ್ತು. ಈ ನರಕಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಶಂಕುಸ್ಥಾಪನೆ 2018 ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾಡಿದ್ದರು. ಈ ಈ ಸೇತುವೆಯನ್ನು ಅವರೇ ಲೋಕಾರ್ಪಣೆ ಮಾಡುತ್ತಿರುವುದು ವಿಶೇಷವಾಗಿದೆ. ಜುಲೈ.14 ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಸಿಗಂದೂರಿನಲ್ಲಿ ನೆರವೇರಿಸಲಿದ್ದಾರೆ.
ಸಿಗಂದೂರು ಸೇತುವೆಯ ಲೋಕಾರ್ಪಣೆ ಬಳಿಕ ಮಧ್ಯಾಹ್ನ 12 ಗಂಟೆಗೆ ಸಾಗರದ ನೆಹರು ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಂಜೂರಾಗಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಕೇಂದ್ರ ಸಚಿವ ಗಡ್ಕರಿ ಅವರು ಚಾಲನೆ ಕೂಡ ನೀಡಲಿದ್ದಾರೆ. 625 ರೂ. ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ 369 ಇ -ಸಾಗರದಿಂದ ಮರುಕುಟಿಕದ ವರೆಗೆ ಸಾಗರ ನಗರದ ಬೈಪಾಸ್ ಸೇರಿ ದ್ವಿಪಥ ಸಂಪರ್ಕ ರಸ್ತೆಯ ಶಂಕು ಸ್ಥಾಪನಾ ಸಮಾರಂಭ ಸಹ ಜು. 14 ರಂದು ನಡೆಯಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ರೂ,2056 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ ಹೆಸರಿಡುವ ಬಗ್ಗೆ ಅನೇಕ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಹೆಸರಿಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಸರ್ಕಾರಕ್ಕೆ ನಮ್ಮ ಅಭಿಪ್ರಾಯವನ್ನು ಸಂಸದರು ಸರ್ಕಾರಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಗಂದೂರು ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂಗಿಲ್ಲ ಆಹ್ವಾನ; ಮಧು ಬಂಗಾರಪ್ಪಗೆ ಅಸಮಾಧಾನ
ಶಿವಮೊಗ್ಗ, ಉಡುಪಿ ಜಿಲ್ಲೆಗಳ ಸಂಪರ್ಕ ಕೊಂಡಿ.
ಶರಾವತಿ ನದಿಯ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಬಹುನಿರೀಕ್ಷಿತ ಸಿಗಂದೂರು ಸೇತುವೆ ಇದೀಗ ಲೋಕಾರ್ಪಣೆಗೆ ಸಿದ್ಧವಾಗಿದೆ. ಸುಮಾರು 423 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಸೇತುವೆಯು, ಈ ಭಾಗದ ಜನರ ದಶಕಗಳ ಕನಸನ್ನು ನನಸಾಗಿಸಿದೆ. ಇದು ಕರ್ನಾಟಕದ ಅತಿ ಉದ್ದದ ಒಳನಾಡು ಕೇಬಲ್-ಸ್ಟೇಯ್ಡ್ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 2.25 ಕಿಲೋಮೀಟರ್ ಉದ್ದದ ಈ ಸೇತುವೆ ಶರಾವತಿ ನದಿಯ ಭೋರ್ಗರೆವ ಪ್ರವಾಹವನ್ನು ತಡೆದುಕೊಳ್ಳುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿ ಕೂಡ ಆಗಲಿದೆ.
ಈ ಸೇತುವೆಯು ಸಾಗರ ತಾಲೂಕಿನ ಅಂಬಾರಗೋಡ್ಲು ಮತ್ತು ಕಳಸವಳ್ಳಿ (ತುಮರಿ) ಗ್ರಾಮಗಳನ್ನು ಸಂಪರ್ಕಿಸಲಿದೆ. ಇಷ್ಟು ದಿನ ಶರಾವತಿ ಹಿನ್ನೀರನ್ನು ದಾಟಲು ಲಾಂಚ್‌ಗಳನ್ನೇ ಅವಲಂಬಿಸಬೇಕಾಗಿದ್ದು, ಇದು ಹೆಚ್ಚು ಸಮಯ ತೆಗೆದುಕೊಳ್ಳುವ ಮತ್ತು ತುರ್ತು ಸಂದರ್ಭಗಳಲ್ಲಿ ಇಲ್ಲಿ ಸಂಚಾರ ಮಾಡುವುದು ಸಮಸ್ಯೆಯಾಗಿತ್ತು. ಈಗ ಈ ಸೇತುವೆ ಸಂಚಾರಕ್ಕೆ ಮುಕ್ತವಾಗುವುದರೊಂದಿಗೆ, ಸಾಗರದಿಂದ ಸಿಗಂದೂರಿಗೆ ಪ್ರಯಾಣದ ಸಮಯ ಸುಮಾರು ಒಂದು ಗಂಟೆ ಕಡಿಮೆಯಾಗಲಿದೆ. ಇದು ಸ್ಥಳೀಯ ನಿವಾಸಿಗಳಿಗೆ, ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಅಪಾರ ಅನುಕೂಲವನ್ನು ಕಲ್ಪಿಸಲಿದೆ.
ಸಿಗಂದೂರು ಸೇತುವೆಯ ವಿಶೇಷ
ಸೇತುವೆಯು ಸುಮಾರು 2.25 ಕಿಲೋಮೀಟರ್ ಉದ್ದವಿದ್ದು, 11 ಮೀಟರ್ ರಸ್ತೆ ಅಗಲವಾಗಿದೆ. ಒಟ್ಟು 17 ಪಿಲ್ಲರ್ ಗಳನ್ನು ಹೊಂದಿರುವ ಈ ಸೇತುವೆಯು, ಕೇಬಲ್-ಸ್ಟೇಡ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ. ಇದು ಎಕ್‌ಸಟ್ರಾಡೋಸ್ಡ್ ಬ್ಯಾಲೆನ್‌ಸ್ಡ ಕ್ಯಾಂಟಿಲಿವರ್ ಸೇತುವೆ ವಿನ್ಯಾಸವನ್ನು ಹೊಂದಿದೆ. ದೇಶದಲ್ಲೇ ಮೊದಲನೆ ಅತಿ ದೊಡ್ಡ ಕೇಬಲ್ ಹಿಡಿತದ ಸೇತುವೆ ಗುಜರಾತ್ ನ ದ್ವಾರಕಾದಲ್ಲಿದೆ. ಇದರ ಉದ್ದ 2.32 ಕಿ.ಮೀ ಇದೆ. ಇದರ ನಂತರ ಶಿವಮೊಗ್ಗದ ಸಾಗರದ ಸಿಗಂದೂರು ಸೇತುವೆ 2.14 ಕಿ.ಮೀ ಉದ್ದದಿಂದ ಕೂಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ದಶಕಗಳ ಕನಸು ನನಸು
ಸಿಗಂದೂರು ಸೇತುವೆ ಕಾಮಗಾರಿಯು 2019ರಲ್ಲಿ ಪ್ರಾರಂಭವಾಗಿದ್ದು, ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಇಚ್ಛಾಶಕ್ತಿ ಮತ್ತು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪ್ರಯತ್ನಗಳು ಮುಖ್ಯ ಕಾರಣವಾಗಿವೆ. ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ಅವರ ನಿರಂತರ ಪ್ರಯತ್ನದ ಫಲವಾಗಿ ಈ ಯೋಜನೆ ಪೂರ್ಣಗೊಂಡಿದ್ದು ದಶಕಗಳ ಕನಸು ನನಸಾಗಿದೆ.
ನೂರೆಂಟು ಅಡತಡೆಗಳ ನಡುವೆ ಸೇತುವೆ ಕಾಮಗಾರಿಯು ಫೂರ್ಣಗೊಂಡಿದೆ. ಕೇಬಲ್ ಆಧಾರಿತ ಸೇತುವೆ ಆಗಿರುವುದು ವಿಶೇಷ. ಹಚ್ಚು ಹಸಿರಿನ ಪರಿಸರದೊಳಗೆ ಈಗ ಹೈಟೆಕ್ ತಂತ್ರಜ್ಷಾನದೊಂದಿಗೆ ನೂತನ ಸೇತುವೆ ಎಲ್ಲರ ಗಮನ ಸೆಳೆಯುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.