ತಮ್ಮ ಕನಸಿನ ಶಿವಮೊಗ್ಗ ಏರ್​ಪೋರ್ಟ್​ಗೆ ತಾವೇ ಹೊಸ ಹೆಸರು ಘೋಷಿಸಿದ ಯಡಿಯೂರಪ್ಪ, ಎಲ್ಲ ಗೊಂದಲಗಳಿಗೆ ತೆರೆ

ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ದಶಕಗಳ ಕನಸು ಕೊನೆಗೂ ನನಸಾಗಿದೆ. ಶಿವಮೊಗ್ಗ ಏರ್ ಪೋರ್ಟ್​​ನ ಕಾಮಗಾರಿ ಪೂರ್ಣವಾಗಿದೆ. ಇದೇ ತಿಂಗಳು (ಫೆ.27) ಬಿಜೆಪಿ ನಾಯಕ ಬಿ ಎಸ್​ ಯಡಿಯೂರಪ್ಪ ಅವರ ಹುಟ್ಟಿದ ಹಬ್ಬದ ದಿನದಂದೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ತಮ್ಮ ಕನಸಿನ ಶಿವಮೊಗ್ಗ ಏರ್​ಪೋರ್ಟ್​ಗೆ ತಾವೇ ಹೊಸ ಹೆಸರು ಘೋಷಿಸಿದ ಯಡಿಯೂರಪ್ಪ, ಎಲ್ಲ ಗೊಂದಲಗಳಿಗೆ ತೆರೆ
ಶಿವಮೊಗ್ಗ ಏರಪೋರ್ಟ್​ (ಎಡಚಿತ್ರ) ಬಿಎಸ್​ ಯಡಿಯೂರಪ್ಪ (ಬಲಚಿತ್ರ)
Follow us
TV9 Web
| Updated By: ವಿವೇಕ ಬಿರಾದಾರ

Updated on:Feb 12, 2023 | 4:02 PM

ಶಿವಮೊಗ್ಗ: ಬಿಎಸ್ ಯಡಿಯೂರಪ್ಪ (BS Yadiyurappa) ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಶಿವಮೊಗ್ಗ (Shivamogga) ತಾಲೂಕಿನ ಸೋಗಾನೆಯಲ್ಲಿ ಏರ್ ಪೋರ್ಟ್ (Air Port) ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಶಿವಮೊಗ್ಗ ಏರ್ ಪೋರ್ಟ್ ಕಾಮಗಾರಿಯು ಸ್ಥಗಿತಗೊಂಡಿತ್ತು. ಮತ್ತೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ನೆನಗುದಿಗೆ ಬಿದ್ದಿದ್ದ ಏರ್ ಪೋರ್ಟ್ ಕಾಮಗಾರಿಗೆ ಮರುಚಾಲನೆ ಕೊಟ್ಟರು. ಅವರು ಮುಖ್ಯಮಂತ್ರಿಯಾಗಿದ್ದಾಗ ನಿರಂತರವಾಗಿ ಏರ್ ಪೋರ್ಟ್​ಗೆ ಅನುದಾನ ಮತ್ತು ಅವರೇ ಪ್ರತಿಸಾರಿ ಶಿವಮೊಗ್ಗ ಬಂದಾಗ ಏರ್ ಪೋರ್ಟ್ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದರು. ಪುತ್ರ ಸಂಸದ ಬಿ. ವೈ ರಾಘವೇಂದ್ರಗೆ ಏರ್ ಪೋರ್ಟ್ ಕಾಮಗಾರಿ ಪೂರ್ಣಗೊಳಿಸಿ ಮಲೆನಾಡಿನಲ್ಲಿ ವಿಮಾನ ಹಾರಾಟಕ್ಕೆ ಟಾರ್ಗೇಟ್ ಕೊಟ್ಟಿದ್ದರು.

ಅದರಂತೆ ಬಿಎಸ್ ಯಡಿಯೂರಪ್ಪ ಕನಸನ್ನು ಪುತ್ರ, ಸಂಸದ ಬಿ.ವೈ ರಾಘವೇಂದ್ರ ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ನಿರಂತರ ಒತ್ತಡ ಹಾಕಿ ಕೊನೆಗೂ ಏರ್ ಪೋರ್ಟ್ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಂಡಿದ್ದಾರೆ. ಈಗ ಫೆ. 27 ರಂದು ಪ್ರಧಾನಿ ಮೋದಿ ಬಿಎಸ್ ಯಡಿಯೂರಪ್ಪ ಕನಸಿನ ಕೂಸು ಶಿವಮೊಗ್ಗ ಏರ್ ಫೋರ್ಟ್​ನನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪಿಎಂ ಉದ್ಘಾಟನೆಗೆ ಬರುವುದು ಪಕ್ಕಾ ಆಗಿರುವ ಕುರಿತು ಬಿಎಸ್ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಇನ್ನೂ ಕಳೆದ ಎರಡು ತಿಂಗಳನಿಂದ ಶಿವಮೊಗ್ಗ ಏರ್ ಪೋರ್ಟ್​ಗೆ ಬಿಎಸ್ ಯಡಿಯೂರಪ್ಪ ಅವರ ಹೆಸರು ಸೇರಿದಂತೆ ಕುವೆಂಪು, ಎಸ್ ಬಂಗಾರಪ್ಪ, ಶಿವಪ್ಪ ನಾಯಕ, ಶಾಂತವೇರಿ ಗೋಪಾಲ್ ಗೌಡರು ಸೇರಿದಂತೆ ಗಣ್ಯರ ಹೆಸರು ನಾಮಕರಣ ಮಾಡಬೇಕೆನ್ನುವ ಚರ್ಚೆ ಶುರುವಾಗಿದ್ದವು. ಈ ನಡುವೆ ಎಲ್ಲ ಗೊಂದಲಕ್ಕೆ ಸ್ವತಃ ಬಿಎಸ್ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ತಮ್ಮ ಹೆಸರು ಏರ್ ಪೋರ್ಟ್​​ಗೆ ಇಡುವುದು ಬೇಡ. ಇದಕ್ಕೆ ಸೂಕ್ತ ಹೆಸರು ಅಂದರೇ ರಾಷ್ಟ್ರಕವಿ ಕುವೆಂಪು. ಹೀಗಾಗಿ ಅವರ ಹೆಸರೇ ಶಿವಮೊಗ್ಗ ಏರ್ ಪೋರ್ಟ್ ಇಡಲಾಗುತ್ತಿದೆ. ಈ ಕುರಿತು ಅಧಿವೇಶನದಲ್ಲಿ ನಾನೇ ಪ್ರಸ್ತಾಪ ಮಾಡಿ ಒಮ್ಮತ ನಿರ್ಧಾರದಿಂದ ಕೇಂದ್ರಕ್ಕೆ ರವಾನೆ ಮಾಡುತ್ತೇನೆ. ಫೆ.27ಕ್ಕೆ ಮೋದಿ ಅವರೇ ಕುವೆಂಪು ಹೆಸರು ಘೋಷಣೆ ಮಾಡಲಿದ್ದಾರೆ ಎಂದು ಹೇಳುವ ಮೂಲಕ ಚರ್ಚೆಗಳಿಗೆ ಪೂರ್ಣ ವಿರಾಮ ನೀಡಿದ್ದಾರೆ. ಮೊನ್ನೆಯಷ್ಟೇ ಮುಖ್ಯಮಂತ್ರಿ ಬೊಮ್ಮಾಯಿ ಶಿವಮೊಗ್ಗಕ್ಕೆ ಬಂದ ಸಂದರ್ಭದಲ್ಲಿ ಶಿವಮೊಗ್ಗ ಏರ್ ಪೋರ್ಟ್ ಬಿಎಸ್ ಯಡಿಯೂರಪ್ಪ ಅವರ ಹೆಸರು ಇಡುವುದಾಗಿ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಈಗ ಬಿಎಸ್ ಯಡಿಯೂರಪ್ಪ ತಮ್ಮ ಹೆಸರು ಬೇಡ ಎನ್ನುವ ಮೂಲಕ ರಾಜಕೀಯ ಮುತ್ಸದ್ಧಿತನ ತೋರುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

ಶಿವಮೊಗ್ಗ ಏರ್​ಪೋರ್ಟ್​ ವಿಶೇಷತೆ

ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದಲ್ಲಿ ಸರ್ವೇ ನಂ. 120 ರಲ್ಲಿ 775 ಎಕರೆ ಭೂಮಿಯಲ್ಲಿ ಏರ್ ಪೋರ್ಟ್ ಕಾಮಗಾರಿಯು 384 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡಿದೆ. ಈ ನಡುವೆ 2008ರಲ್ಲಿ ಆರಂಭವಾದ ಈ ಏರ್ ಪೋರ್ಟ್ ಕಾಮಗಾರಿಯು 2023ರಲ್ಲಿ ಪೂರ್ಣಗೊಂಡಿದೆ. ಕೊನೆಗೂ ಜನರು ಸಂಸತಸ ಪಡುವಂತಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ನೂತನ ಏರ್ ಪೋರ್ಟ್ ವೀಕ್ಷಣೆ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ಶಿವಮೊಗ್ಗ ಏರ್ ಪೋರ್ಟ್ ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ಏರ್ ಪೋರ್ಟ್​​ಗೆ ಭೇಟಿ ನೀಡುವುದು. ಸೇಲ್ಫಿ ಮತ್ತು ಫ್ಯಾಮಿಲಿ ಫೋಟೋ ತೆಗೆದುಕೊಳ್ಳುತ್ತಿದ್ದಾರೆ. ಇನ್ನೇನು ಫೆ. 27ಕ್ಕೆ ಏರ್ ಪೋರ್ಟ್ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಯ ಆದ ಕೆಲವೇ ದಿನಗಳಲ್ಲಿ ಮಲೆನಾಡಿನಲ್ಲಿ ಲೋಹದ ಹಕ್ಕಿಗಳ ಹಾರಾಟ ಆಗಲಿದೆ. ಮಲೆನಾಡಿನ ಜನರು ಇನ್ನೂ ವಿಮಾನಯಾನದ ಮೂಲಕ ದೇಶ ವಿದೇಶ ಸುತ್ತಲಿದ್ದಾರೆ. ಮಲೆನಾಡಿಗೆ ಏರ್ ಪೋರ್ಟ್ ಕೂಡ ಸೇರ್ಪಡೆಯಾಗುವ ಮೂಲಕ ಪ್ರವಾಸಿ ತಾಣಕ್ಕೆ ಮತ್ತಷ್ಟು ಬಲಬಂದಂತಾಗಿದೆ. ವಿದೇಶಿಗರು ಇನ್ನು ಸುಲಭವಾಗಿ ಮಲೆನಾಡಿನ ಪ್ರವಾಸಿ ತಾಣ ನೋಡಬಹುದಾಗಿದೆ. ಬಿಎಸ್ ಯಡಿಯೂರಪ್ಪ ಏರ್ ಪೋರ್ಟ್ ಕಾಮಗಾರಿ ಪೈನಲ್ ಟಚ್ ವೀಕ್ಷಣೆ ವೇಳೆ ಜನರು ಬಿಎಸ್ ಯಡಿಯೂರಪ್ಪ ಜೊತೆ ಸೇಲ್ಫಿ ತೆಗೆದುಕೊಂಡು ಸಂತಸ ಪಡುತ್ತಿದ್ದರು. ದಶಕಗಳಿಂದ ನೆನಗುದಿಗೆ ಬಿದ್ದಿದ್ದ ಏರ್ ಪೋರ್ಟ್ ಕೊನೆಗೂ ಬಿಎಸ್ ಯಡಿಯೂರಪ್ಪ ಅವರ ನಿರಂತರ ಪರಿಶ್ರಮದಿಂದ ಪೂರ್ಣಗೊಂಡಿದೆ. ಚುನಾವಣೆ ದಿನಾಂಕ ಘೋಷಣೆ ಆಗುವ ಮೊದಲೇ ಮೋದಿಯಿಂದಲೇ ಬಿಎಸ್ ಯಡಿಯೂರಪ್ಪ ಅವರ ಜನ್ಮದಿನದಂದೇ ಫೆ. 27 ರಂದು ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ ಆಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣದ ವಿವರ:

1. ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ & ಇನ್‍ಫ್ರಾಸ್ಟ್ರಕ್ಚರ್ ಡೆವಲಪ್‍ಮೆಂಟ್ ಕಾರ್ಪೊರೇಷನ್ ಲಿ. (ಕೆಎಸ್‍ಐಐಡಿಸಿ) ಯಿಂದ ಸೋಗಾನೆ ಸಮೀಪ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒಟ್ಟು ರೂ.384.00 ಕೋಟಿ ಮಂಜೂರಾಗಿರುತ್ತದೆ.

2. ಲೋಕೋಪಯೋಗಿ ಇಲಾಖೆಯು ವಿಮಾನ ನಿಲ್ದಾಣ ಕಾರ್ಯ ನಿರ್ವಹಣೆ ಮಾಡುತ್ತಿದೆ.

3. ಶಿವಮೊಗ್ಗ ವಿಮಾನ ನಿಲ್ದಾಣವು 775 ಎಕರೆ ಪ್ರದೇಶ ವ್ಯಾಪ್ತಿಯಲ್ಲಿದೆ.

4. ಸುಮಾರು ರೂ.216 ಕೋಟಿ ವೆಚ್ಚದಲ್ಲಿ ಪ್ಯಾಕೇಜ್ 1 ರಲ್ಲಿ 3050 ಮೀ ಉದ್ದ, 45 ಮೀ ಅಗಲದ ರನ್‍ವೇ, ಆರ್‍ಇಎಸ್‍ಎ, ಬಾಹ್ಯ(ಪೆರಿಫಿರಲ್) ರಸ್ತೆ, ಎಪ್ರಾನ್, ಟ್ಯಾಕ್ಸಿ ವೇ, ಕಾಂಪೌಂಡ್, ಕಾರ್ ಪಾರ್ಕಿಂಗ್ ಏರಿಯಾ, ಇತರೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

5. ಸುಮಾರು ರೂ.112 ಕೋಟಿ ವೆಚ್ಚದಲ್ಲಿ ಪ್ಯಾಕೇಜ್ 2 ರಲ್ಲಿ 4340 ಚದುರ ಮೀಟರ್ ಅಳತೆಯಲ್ಲಿ ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, 2347 ಚದುರ ಮೀಟರ್ ಅಳತೆಯಲ್ಲಿ ಎಟಿಸಿ ಕಟ್ಟಡ, 02 ಎಲೆಕ್ಟ್ರಿಕ್ ಸಬ್ ಸ್ಟೇಷನ್, 01 ಫೈರ್ ಸ್ಟೇಷನ್ ಇತರೆ ಕಾಮಗಾರಿಗಳ ನ್ನು ಕೈಗೊಳ್ಳಲಾಗಿದೆ.

6. ರನ್‍ವೇ ಕೆಲಸ ಮುಗಿದಿದ್ದು ಬಣ್ಣ ಮಾಡಲಾಗುತ್ತಿದೆ. 08 ಮತ್ತು 26 ಎಂಡ್ ಆರ್‍ಇಎಸ್‍ಎ ಕೆಲಸ ಮುಗಿದಿದೆ, ಎಪ್ರಾನ್, ಐಸೊಲೇಷನ್ ಬೇ ವರ್ಕ್, ಕಾಂಪೌಂಡ್, ಇತರೆ ಕೆಲಸಗಳು ಮುಗಿದಿವೆ

7. ಪ್ಯಾಸೆಂಜರ್ ಟರ್ಮಿನಲ್ ಕಟ್ಟಡದಲ್ಲಿ ಫ್ಲೋರಿಂಗ್, ಪ್ಲಂಬಿಂಗ್ ಕೆಲಸ ಮುಗಿದಿದ್ದು, ಗ್ಲಾಸ್ ಫಿಕ್ಸಿಂಗ್, ಸೀಲಿಂಗ್ ಇತರೆ ಕೆಲಸ ಪ್ರಗತಿಯಲ್ಲಿದೆ. ಎಟಿಸಿ ಕಟ್ಟಡದಲ್ಲಿ ಫ್ಲೋರಿಂಗ್, ಪೈಂಟಿಂಗ್ ಮುಗಿದಿದ್ದು, ಗ್ಲೇಜಿಂಗ್, ಫೈರ್ ವರ್ಕ್ ಇತರೆ ಕೆಲಸ ಪ್ರಗತಿಯಲ್ಲಿದೆ. ಓವರ್ ಹೆಡ್ ಟ್ಯಾಂಕ್, ಎಲೆಕ್ಟ್ರಿಕಲ್ ಸಬ್ ಸ್ಟೇಷನ್ ಕೆಲಸ ಮುಗಿದಿದೆ.

8. ಇತರೆ ಇಲಾಖೆಗಳಿಗೆ ಸಂಬಂಧಿಸಿದಂತೆ ಮೆಸ್ಕಾಂ ಯಿಂದ ಸಿಂಗಲ್ ಲೈನ್ ಸಂಪರ್ಕ ಕೆಲಸ ಮುಗಿದಿದೆ. ಯು ಜಿ ಕೇಬಲ್ ಕೆಲಸ ಪ್ರಗತಿಯಲ್ಲಿದೆ. ಪೈಪ್ ಲೈನ್ ಕೆಲಸ ಮುಗಿದಿದೆ. 2ನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ.

9. 2022 ರ ಅಂತ್ಯದ ವೇಳೆಗೆ ಪ್ಯಾಕೇಜ್ 1, 2 ಮತ್ತು ಇತರೆ ಕಾಮಗಾರಿಗಳಿಗೆ ಒಟ್ಟು 363.78 ಕೋಟಿ ವೆಚ್ಚ ಮಾಡಲಾಗಿದೆ.

ಅನೇಕ ವರ್ಷಗಳಿಂದ ಸಾಕಷ್ಟು ವಿವಾದಗಳ ನಡುವೆ ಶಿವಮೊಗ್ಗ ಏರ್ ಪೊರ್ಟ್ ಕಾಮಗಾರಿಯು ಪೂರ್ಣಗೊಂಡಿರಲಿಲ್ಲ. ಕೊನೆಗೂ ಬಿಎಸ್ ಯಡಿಯೂರಪ್ಪ ಅವರು ಹಠ ಹಿಡಿದು ಶಿವಮೊಗ್ಗ ಏರ್ ಪೋರ್ಟ್ ಪೂರ್ಣಗೊಳಿಸಿದ್ದಾರೆ. ಕೆಲವೇ ದಿನಗಳಲ್ಲಿ ಮಲೆನಾಡಿನಲ್ಲಿ ಲೋಹದ ಹಕ್ಕಿಗಳ ಹಾರಾಟ ಶುರುವಾಗಲಿದೆ. ಜನರು ಲೋಹದ ಹಕ್ಕಿಯಲ್ಲಿ ಪಯಣಕ್ಕೆ ಕಾತುರದಿಂದ ಕಾಯುತ್ತಿದ್ದಾರೆ.

ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Sun, 12 February 23