ಭದ್ರಾ ಜಲಾಶಯದಿಂದ ನೀರು ಬಿಡುಗಡೆ: ನಾಲೆಯ 100 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಪ್ರಸಕ್ತ ಮುಂಗಾರು ಮತ್ತು ಹಿಂಗಾರು ಸಂಪೂರ್ಣ ಕೈಕೊಟ್ಟು ನದಿಯಲ್ಲಿ ನೀರು ಬತ್ತಿ ಹೋಗಿದೆ. ಬೇಸಿಗೆ ದಿನಗಳಲ್ಲಿ ಕುಡಿವ ನೀರಿಗೂ ತತ್ವಾರ ಬರುವ ಆತಂಕವಿದೆ. ಈ ಹಿನ್ನೆಲೆ ಹಾವೇರಿ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಗೆ ಭದ್ರಾ ಜಲಾಶಯ(Bhadra Dam)ದಿಂದ ನೀರು ಬಿಡುಗಡೆ ಮಾಡಲಾಗಿದೆ.

ಶಿವಮೊಗ್ಗ, ಫೆ.20: ಭದ್ರಾ ಜಲಾಶಯ(Bhadra Dam)ದಿಂದ ನೀರು ಬಿಡುಗಡೆ ಹಿನ್ನೆಲೆ ನಾಲೆಯ 100 ಮೀ ವ್ಯಾಪ್ತಿಯಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ಹಾವೇರಿ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಗೆ ಶಿವಮೊಗ್ಗ(Shivamogga) ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿರುವ ಭದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ನಾಲೆಗೆ ರೈತರು ಪಂಪ್ ಸೆಟ್ ಅಳವಡಿಸಿದ್ದು, ಕೊನೆಯ ಭಾಗದ ರೈತರಿಗೆ ಕುಡಿಯುವ ನೀರು ತಲುಪದ ಹಿನ್ನೆಲೆ ಭದ್ರಾ ನಾಲೆಯ ಮೇಲೆ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ನದಿ ಮತ್ತು ಕಾಲುವೆಗಳ ಪ್ರದೇಶದಲ್ಲಿ ಅನಧಿಕೃತವಾಗಿ ರೈತರು ಹೊಲಗಳಿಗೆ ನೀರನ್ನು ಹರಿಸುವುದಾಗಲೀ ಅಥವಾ ಪಂಪ್ ಸೆಟ್ ಮತ್ತು ತೂಬುಗಳ ಮೂಲಕ ನೀರನ್ನು ಎತ್ತುವಳಿ ಮಾಡುವುದನ್ನು ನಿಷೇಧಿಸಿದೆ. ಐದು ಮತ್ತು ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ. ಇನ್ನು ನಿಷೇಧಾಜ್ಞೆ ಸಮಯದಲ್ಲಿ ಶಸ್ತ್ರ, ಬಡಿಗೆ,ಬರ್ಜಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಟಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದಂತಹ ಯಾವುದೇ ಮಾರಕಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ನಿಷೇಧಿಸಿದೆ.
ಇದನ್ನೂ ಓದಿ:4 ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಕೇವಲ 24 ಗಂಟೆಯಲ್ಲಿ ಹರಿದುಬಂತು 5 TMC ನೀರು
ಜೊತೆಗೆ ಕಲ್ಲುಗಳನ್ನು ಇಲ್ಲವೇ ಸ್ಫೋಟಕ ವಸ್ತುಗಳು, ಇತ್ಯಾದಿಗಳನ್ನು ತೆಗೆದುಕೊಂಡು ಓಡಾಡುವುದು ಹಾಗೂ ಶೇಖರಿಸುವ ಹಾಗಿಲ್ಲ. ಬಹಿರಂಗವಾಗಿ ಘೋಷಣೆಗಳನ್ನು ಕೂಗುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಮಾಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನಗಳನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಅಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಿದೆ. ಯಾರದರೂ ಇದನ್ನು ಅನುಸರಿಸಿದೆ ಇದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ