
ಶಿವಮೊಗ್ಗ, ಅಕ್ಟೋಬರ್ 08: ಲಾಡ್ಜ್‌ನಲ್ಲಿ ಗಾಂಜಾ ಸೇವಿಸುತ್ತಿದ್ದ ಯುವತಿ ಸೇರಿ ನಾಲ್ವರನ್ನು ಟೌನ್ ಪೊಲೀಸರು ಬಂಧಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಜೋಗ ರಸ್ತೆಯ ಲಾಡ್ಜ್‌ನಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಲಾಡ್ಜ್ ಮೇಲೆ ದಾಳಿ ಮಾಡಿದ ಪೊಲೀಸರು, ಶಿವಮೊಗ್ಗದ ಕಾರ್ತಿಕ್(19), ಬೆಂಗಳೂರಿನ ಶಶಾಂಕ್(26), ಸಾಗರದ ನಿಶಾಂತ್(25) ಹಾಗೂ ಯುವತಿಯನ್ನ ಬಂಧಿಸಿದ್ದಾರೆ.
ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಮಿತಿಮೀರಿದೆ ಎನ್ನುವುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಸಾಗರದ ಜೋಗ ರಸ್ತೆಯ ಲಾಡ್ಜ್ ಒಂದರಲ್ಲಿ ಯುವತಿ ಸೇರಿ ನಾಲ್ವರು ಗಾಂಜಾ ಸೇವಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಎಎಸ್ಪಿ ನಿರ್ದೇಶನದಂತೆ ಪಿಎಸ್‌ಐ ಶಾಂತರಾಜ್ ಹೆಚ್.ಜಿ. ಹಾಗೂ ಸಿಬ್ಬಂದಿ ಲಾಡ್ಜ್ ಮೇಲೆ ದಿಢೀರ್ ದಾಳಿ ಮಾಡಿ ಕೊಠಡಿ ಪರಿಶೀಲಿಸಿದ್ದು, ಈ ವೇಳೆ ಮೂವರು ಯುವಕರು ಹಾಗೂ ಓರ್ವ ಯುವತಿ ಸಿಗರೇಟ್‌ನಲ್ಲಿ ಗಾಂಜಾ ತುಂಬಿ ಸೇವಿಸುತ್ತಿರುವುದು ಪತ್ತೆ ಆಗಿದೆ. ಕೂಡಲೇ ಎಲ್ಲರನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ವೈದ್ಯಕೀಯ ಪರೀಕ್ಷೆಯಲ್ಲಿ ಕಾರ್ತಿಕ್, ಶಶಾಂಕ್ ಹಾಗೂ ಯುವತಿ ಗಾಂಜಾ ಸೇವಿಸಿರುವುದು ದೃಢ ಪಟ್ಟಿದೆ. ಸಾಗರದ ಮನು ಹೆಗಡೆ ಎಂಬಾತ ಗಾಂಜಾ ಸರಬರಾಜು ಮಾಡಿರುವುದಾಗಿ ವಿಚಾರಣೆ ವೇಳೆ ಯುವತಿ ಸ್ಫೋಟಕ ಹೇಳಿಕೆ ನೀಡಿದ್ದಾಳೆ. ಸದ್ಯ ಸಾಗರ ಟೌನ್ ಠಾಣೆಯಲ್ಲಿ ಒಟ್ಟು ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮಾದಕ ವಸ್ತುಗಳ ಅಕ್ರಮ ಮಾರಾಟ ವಿರುದ್ಧ ಕೆಜಿಎಫ್ ಪೊಲೀಸರು ವಿಶೇಷ ಅಭಿಯಾನ ಆರಂಭಿಸಿದ್ದಾರೆ. ಅದರ ಪ್ರತಿಫಲವಾಗಿ ಕಳೆದ 15 ದಿನಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳನ್ನ ದಾಖಲು ಮಾಡಿ ಲಕ್ಷಾಂತರ ರೂ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ಗಾಂಜಾ ಅಭಿಯಾನ ಆರಂಭಿಸಿರುವ ಪೊಲೀಸರು, 15 ಕ್ಕೂ ಹೆಚ್ಚು ಪ್ರಕರಣಗಳನ್ನ ಭೇದಿಸಿದ್ದಾರೆ. ಅದರಂತೆ ಜಿಲ್ಲೆಯ ಬಂಗಾರಪೇಟೆ, ರಾಬರ್ಟ್ ಸನ್ ಪೇಟೆ, ಕಾಮಸಮುದ್ರ, ಊರಿಗಾಂ, ಬೇತಮಂಗಲದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಸಂಬಂಧ ಹಲವು ಪ್ರಕರಣಗಳು ದಾಖಲಾಗಿವೆ.
ಅದರಂತೆ ಇಂದು ಸಹ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಬೇತಮಂಗಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 289 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದು, ಸುಮಾರು 20 ಸಾವಿರ ರೂ ಬೆಲೆಬಾಳುವ ಗಾಂಜಾ ವಶಕ್ಕೆ ಪಡೆಯಲಾಗಿದೆ. ಮುಳಬಾಗಿಲು ಮೂಲದ ಶಮೀರ್ ಮತ್ತು ಬಿಲ್ಲೇರಹಳ್ಳಿಯ ಸುಧಾಕರ್ ಬಂಧಿತರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಮಿತಿಮೀರಿದ ಗಾಂಜಾ ಹಾವಳಿ: ಕೇವಲ 500 ರೂ.ಗಾಗಿ ಕಾರ್ಮಿಕನ ಕೊಲೆ
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಇನ್ನೂ ಕೆಜಿಎಫ್ ವ್ಯಾಪ್ತಿಯಲ್ಲಿ ವಿಶೇಷ ಅಭಿಯಾನ ಆರಂಭಿಸಿದ್ದು, ಅದರಂತೆ ನಿರಂತರವಾಗಿ ಗಾಂಜಾ ಪ್ರಕರಣಗಳು ಪತ್ತೆಯಾಗುತ್ತಿವೆ ಎನ್ನುವುದು ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ ಅವರ ಮಾತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:52 pm, Thu, 8 October 26