AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಗಂದೂರು ಪೂರ್ಣ: ಹಸಿರುಮಕ್ಕಿ ಸೇತುವೆ ಲೋಕಾರ್ಪಣೆ ಯಾವಾಗ? ಶುರುವಾಯ್ತು ಚರ್ಚೆ!

ಶರಾವತಿ ಹಿನ್ನೀರಿನ ಭಾಗದ ಜನರ ಕಷ್ಟ ಕೇಳತೀರದು. ಸಿಗಂದೂರು ಸೇತುವೆ ಈಗಾಗಲೇ ಲೋಕಾರ್ಪಣೆಯಾಗಿದೆ. ಈ ನಡುವೆ ಶರಾವತಿ ಹಿನ್ನೀರಿನಲ್ಲೇ ಇರುವ ಮತ್ತೊಂದು ಮಹತ್ವದ ಸೇತುವೆ ಕಾಮಗಾರಿ ನಡೆಯುತ್ತಿದೆ. ದಶಕಗಳಿಂದ ಈ ಸೇತುವೆಗಾಗಿ ದ್ವೀಪದ ಕುಗ್ರಾಮದ ಗ್ರಾಮಸ್ಥರು ಕಾಯುತ್ತಿದ್ದಾರೆ. ಸದ್ಯ ಹಸಿರುಮಕ್ಕಿ ಸೇತುವೆ ಕಾಮಗಾರಿ ಪೂರ್ಣಗೊಳ್ಳುವುದು ಎಂಬ ಚರ್ಚೆ ಶುರುವಾಗಿದೆ.

ಸಿಗಂದೂರು ಪೂರ್ಣ: ಹಸಿರುಮಕ್ಕಿ ಸೇತುವೆ ಲೋಕಾರ್ಪಣೆ ಯಾವಾಗ? ಶುರುವಾಯ್ತು ಚರ್ಚೆ!
ಹಸಿರುಮಕ್ಕಿ ಸೇತುವೆ
Basavaraj Yaraganavi
| Updated By: ವಿವೇಕ ಬಿರಾದಾರ|

Updated on: Jul 18, 2025 | 6:01 PM

Share

ಶಿವಮೊಗ್ಗ, ಜುಲೈ 18: ಇಡೀ ದೇಶವೇ ಗಮನ ಸೆಳೆಯುವ ಹಾಗೆ ಸಾಗರ (Sagara) ತಾಲೂಕಿನ ಅಂಬಾರಗೋಡ್ಲು ಮತ್ತು ಕಳವಸಳ್ಳಿ (ಸಿಗಂದೂರು ಚೌಡೇಶ್ವರಿ) ಸೇತುವೆ (Sigandur Bridge) ನಿರ್ಮಾಣವಾಗಿದೆ. ಸಾಗರ ತಾಲೂಕಿನ ಕರೂರು ಮತ್ತು ಬಾರಂಗಿ ಹೋಬಳಿಯ ಜನರ 60 ವರ್ಷಗಳ ಕನಸು ನನಸಾಗಿದೆ. ಈ ಸೇತುವೆ ಬೆನ್ನಲ್ಲೇ ಈಗ ಸಾಗರ ತಾಲೂಕಿನ ಹಸಿರುಮಕ್ಕಿ ಶರಾವತಿ ಹಿನ್ನೀರಿನ ಸೇತುವೆ ಕಾಮಗಾರಿ ಬೇಗ ಪೂರ್ಣಗೊಳಿಸುವಂತೆ ಒತ್ತಡ ಜಾಸ್ತಿಯಾಗುತ್ತಿದೆ.

ಮಲೆನಾಡು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಎಲ್ಲೆಡೆ ಹಚ್ಚ ಹಸಿರು, ಗುಡ್ಡ ಬೆಟ್ಟಗಳ ರಮ್ಯ ತಾಣಗಳು ಮನಸ್ಸಿಗೆ ಮುದ ನೀಡತ್ತವೆ. ಈ ಪ್ರಕೃತಿಯ ಅಗಾಧ ವನರಾಶಿ ನಡುವೆ ಶರಾವತಿ ಹಿನ್ನೀರಿನ ಪ್ರದೇಶ ಕಣ್ಣಿಗೆ ಹಬ್ಬ. ಆದರೆ, ಇದರ ನಡುವೆ ಬದುಕುವ ಜನರಿಗೆ ಸಮಸ್ಯೆಗಳ ಸರಮಾಲೆ ತಪ್ಪಿದ್ದಲ್ಲ. ಅದರಲ್ಲೂ ದ್ವೀಪಗಳ ನಡುವೆ ಬದುಕುವ ಜನರು ಸಂಪರ್ಕಕ್ಕೆ ರಸ್ತೆ, ಸೇತುವೆ ಇಲ್ಲದೇ ಲಾಂಚ್ ನಂಬಿಯೇ ಬದುಕು ಕಟ್ಟಿಕೊಂಡಿದ್ದಾರೆ.

ಮಲೆನಾಡಿನ ಪ್ರಕೃತಿ ಶ್ರೀಮಂತಿಕೆ ಕಣ್ಣಿಗೆ ರಾಚುವಂತಿರುವ ಪ್ರದೇಶದ ನಡುವೆ ಬದುಕುವ ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಹಿನ್ನೀರವಾಸಿಗಳ ಗೋಳು ಹೇಳತೀರದು. ಸಂಪರ್ಕ ರಸ್ತೆಯಿಲ್ಲದೇ ನೂರಾರು ಕಿ.ಮೀ ಸುತ್ತಿ ಇಲ್ಲವೇ, ಲಾಂಚ್​ನಲ್ಲಿ ಹಿನ್ನೀರು ದಾಟಿ ಸಾಗರ ತಾಲೂಕು ಅಥವಾ ಶಿವಮೊಗ್ಗ ಜಿಲ್ಲಾ ಕೇಂದ್ರಕ್ಕೆ ಬರಬೇಕು. ಸಂಜೆಯಾದರೇ ಹೊರ ಜಗತ್ತಿನ ಸಂಪರ್ಕ ಸಿಗಲ್ಲ.

ಇದನ್ನೂ ಓದಿ
Image
ಸೇತುವೆ ಬಹಳ ಸುಂದರವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಿರ್ಮಿಸಲಾಗಿದೆ: ಭಕ್ತರು
Image
ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ
Image
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
Image
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ

ಇದಕ್ಕೆಲ್ಲ ಮುಕ್ತಿ ನೀಡುವ ಸಲುವಾಗಿ ರಾಜ್ಯ ಸರ್ಕಾರ ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ 2018 ರಲ್ಲಿ ಚಾಲನೆ ನೀಡಿತ್ತು. ಶಿವಮೊಗ್ಗದ ಸಾಗರ ತಾಲೂಕಿನ ಹುಲಿದೇವರ ಭಾಗದಿಂದ ಹೊಸನಗರದ ಆಡುಗೋಡಿ-ಕೆಇಬಿ ಸರ್ಕಲ್ ನಡುವೆ ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣದ ಕಾಮಗಾರಿ ಆರಂಭವಾಗಿದೆ. ಹಸಿರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿ 8 ವರ್ಷ ಕಳೆದರೂ ಇನ್ನು ಸಹ ಪೂರ್ಣಗೊಂಡಿಲ್ಲ.

8 ವರ್ಷದ ಅವಧಿಯಲ್ಲಿ 34 ಪಿಲ್ಲರ್​ಗಳ ಪೈಕಿ ಕೇವಲ 22 ಪಿಲ್ಲರ್ ಮಾತ್ರ ನಿರ್ಮಿಸಲಾಗಿದೆ. ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ ಅವರ ಕನಸು ಹಾಗೂ ಪರಿಶ್ರಮದ ಫಲದಿಂದಾಗಿ ಸೇತುವೆ ಮಂಜೂರಾಗಿತ್ತು. ಸುಮಾರು 115 ಕೋಟಿ ರೂ. ವೆಚ್ಚದಲ್ಲಿ 1.15 ಕಿ.ಮೀ ಉದ್ದ ಹಾಗೂ 8.5 ಮೀ. ಅಗಲದ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೇ, ಸೇತುವೆ ಪೂರ್ಣವಾಗುವ ಬದಲು ಅದರ ಯೋಜನೆ ಅನುದಾನ 125 ಕೋಟಿ ರೂ. ಗೆ ಪರಿಷ್ಕರಣೆ ಆಗಿದೆ.

ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಹಸಿರುಮಕ್ಕಿ ಸೇತುವೆ ಪ್ರಸ್ತುತ ಆಮೆಗತಿಯಲ್ಲಿ ಸಾಗುತ್ತಿದೆ. ಈ ಸೇತುವೆ ವ್ಯಾಪ್ತಿಯಲ್ಲಿ ಐದು ಗ್ರಾ.ಪಂ.ಗಳು ಬರುತ್ತವೆ. ದೇವರಬಣ, ಸಂಪೆಕಟ್ಟೆ,ನಿಟ್ಟೂರು, ಕೋಳೂರು, ಆವಿನಹಳ್ಳಿ ಗ್ರಾ.ಪಂಗಳ ಹತ್ತಾವರು ಹಳ್ಳಿಗಳು ಬರುತ್ತವೆ. ಈ ಗ್ರಾಮಸ್ಥರು ಸಂಚಾರಕ್ಕೆ ಲಾಂಚ್​ ಅನ್ನೇ ಅವಲಂಬಿಸಿದ್ದಾರೆ. ಈ ಹಸಿರುಮಕ್ಕಿ ಸೇತುವೆ ಸಂಚಾರಕ್ಕೆ ಮುಕ್ತವಾದರೇ ಸಾಗರ ತಾಲೂಕಿನಿಂದ ಉಡುಪಿ, ಮಂಗಳೂರು, ಕುಂದಾಪುರ, ಭಟ್ಕಳ ಹಾಗೂ ಕೊಲ್ಲೂರು ಕ್ಷೇತ್ರಗಳಿಗೆ ಕಡಿಮೆ ಅವಧಿಯಲ್ಲಿಯೇ ತಲುಪಲು ಸಹಕಾರಿಯಾಗಲಿದೆ.

ಇದನ್ನೂ ಓದಿ: ಸಿಗಂದೂರು ಸೇತುವೆಗೆ ”ಚೌಡೇಶ್ವರಿ ದೇವಿ” ಹೆಸರು ನಾಮಕರಣ: ನಿತಿನ್​ ಗಡ್ಕರಿ

ಈ ಸೇತುವೆಗಿಂತ ತಡವಾಗಿ ಕಾಮಗಾರಿ ಆರಂಭಿಸಿದ ಸಿಗಂದೂರು ಸೇತುವೆ ಪೂರ್ಣಗೊಂಡು, ಲೋಕಾರ್ಪಣೆ ಕೂಡ ಮುಗಿದಿದೆ. ಆದರೆ, ಹಸಿರುಮಕ್ಕಿ ಸೇತುವೆ ಅಪೂರ್ಣವಾಗಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಹಸಿರುಮಕ್ಕಿ ಸೇತುವೆ ಬಳಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮುಂಬರುವ ಮೇ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದಾರೆ.

ಒಟ್ಟಾರೆಯಾಗಿ125 ಕೋಟಿ ರೂ. ವೆಚ್ಚದಲ್ಲಿ, ದ್ವಿಪಥ ಸಂಚಾರ ಹೊಂದಿರುವ ಹಸಿರುಮಕ್ಕಿ ಸೇತುವೆ ಕಾಮಗಾರಿ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಇನ್ನಾದರೂ ಕಾಮಗಾರಿಗೆ ವೇಗ ನೀಡಿ, ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ