ಶಿವಮೊಗ್ಗ: ನೆಟ್ವರ್ಕ್ ಸಮಸ್ಯೆ, ಟವರ್ ಏರಿ ಪ್ರತಿಭಟಿಸಿದ ಗ್ರಾಮಸ್ಥರು

ಬಿ.ಎಸ್. ಎನ್.ಎಲ್ ಮತ್ತು ಅರಣ್ಯ ಇಲಾಖೆಯ ಜಟಾಪಟಿಯಲ್ಲಿ ಕೆಲವು ಟವರ್​ಗಳು ಆ್ಯಕ್ಟಿವ್ ಆಗಿಲ್ಲ. ವರ್ಕ್ ಫ್ರಾಂ ಹೋಮ್​ನಲ್ಲಿರುವ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ಆಕ್ರೋಶಗೊಂಡ ಮಲೆನಾಡಿನ ಗ್ರಾಮಸ್ಥರು ಟವರ್ ಏರಿ ಪ್ರತಿಭಟನೆ ನಡೆಸಿದರು. ಮುಂದೆನಾಯ್ತು ಅಂತಿರಾ? ಈ ಸ್ಟೋರಿ ಓದಿ.

ಶಿವಮೊಗ್ಗ: ನೆಟ್ವರ್ಕ್ ಸಮಸ್ಯೆ, ಟವರ್ ಏರಿ ಪ್ರತಿಭಟಿಸಿದ ಗ್ರಾಮಸ್ಥರು
ಶಿವಮೊಗ್ಗದಲ್ಲಿ ನೆಟ್ವರ್ಕ್ ಸಮಸ್ಯೆ ಹಿನ್ನಲೆ ಟವರ್ ಏರಿ ಪ್ರತಿಭಟಿಸಿದ ಗ್ರಾಮಸ್ಥರು
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on: May 28, 2024 | 7:46 PM

ಶಿವಮೊಗ್ಗ, ಮೇ.28: ನೆಟ್ವರ್ಕ್ ಸಮಸ್ಯೆ(Network problem)  ಹಿನ್ನಲೆ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಟವರ್ ಏರಿ ಪ್ರತಿಭಟಿಸಿದ ಘಟನೆ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಹೌದು, ಹೊಸನಗರ(Hosanagar)ತಾಲೂಕು ಎಂದರೆ ಅದೊಂದು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ತಾಲೂಕು ಎಂದರೂ ತಪ್ಪಾಗುವುದಿಲ್ಲ. ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನು ತ್ಯಾಗಮಾಡಿದ ಶರಾವತಿ ಮುಳುಗಡೆ ಸಂತ್ರಸ್ಥರೇ ಹೆಚ್ಚಿರುವ ತಾಲೂಕಿನಲ್ಲಿ ನೂರೆಂಟು ಸಮಸ್ಯೆಗಳು ಮನೆ ಮಾಡಿದೆ. ಅಂತಹ ಸಮಸ್ಯೆಗಳ ಮಧ್ಯೆಯೂ ಆಧುನಿಕತೆಯ ಕಾಲಘಟ್ಟಕ್ಕೆ ಹೊಂದಿಕೊಂಡು ಬದುಕುತ್ತಿರುವ ಜನರು ತಂತ್ರಜ್ಞಾನಕ್ಕೂ ಒಗ್ಗಿಕೊಂಡಿದ್ದಾರೆ.

ಟವರ್ ಏರಿ ಪ್ರತಿಭಟನೆ

ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಅವರು ಬದುಕು ಕಟ್ಟಿಕೊಳ್ಳಬೇಕು ಎಂದರೆ, ಮೊಬೈಲ್ ಸೇವೆಗಳು ಅತ್ಯಗತ್ಯವಾಗಿದೆ. ಆನ್ ಲೈನ್ ಕ್ಲಾಸ್​ಗಳು, ವರ್ಕ್ ಫ್ರಾಂ ಹೋಮ್ ವ್ಯವಸ್ಥೆಯಲ್ಲಿ ಮನೆಯಲ್ಲಿಯೇ ಕೆಲಸ ಮಾಡುತ್ತಿರುವ ಟೆಕ್ಕಿಗಳು ಮೊಬೈಲ್ ಸೇವೆಗಾಗಿ ಪರಿತಪಿಸುವಂತಾಗಿದೆ. ಮಳೆಗಾಲ ಆರಂಭವಾಯ್ತು ಅಂದರೆ ಹೊಸನಗರ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಎದುರಾಗುತ್ತದೆ. ಅದರಲ್ಲೂ ಮತ್ತಿಮನೆ ಗ್ರಾಮ ಪಂಚಾಯಿತಿಯ ನಗರ, ಸಂಪೇಕಟ್ಟೆ, ನಿಟ್ಟೂರು ಮತ್ತು ಸುತ್ತಮುತ್ತಲ ಭಾಗದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ ಕಟ್ಟಿಟ್ಟ ಬುತ್ತಿ. ಪದೇ ಪದೆ ಎದುರಾಗುತ್ತಿರುವ ಸಮಸ್ಯೆಯಿಂದ ರೊಚ್ಚೆಗೆದ್ದ ಗ್ರಾಮಸ್ಥರು ಈಗ ಟವರ್ ಏರಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ನೋ ನೆಟ್ವರ್ಕ್, ನೋ ವೋಟಿಂಗ್; ಮಲೆನಾಡಿನಲ್ಲಿ ಅಭಿಯಾನ ಆರಂಭ

ಷರತ್ತಿನ ಮೇರೆಗೆ ಪ್ರತಿಭಟನೆ ಹಿಂದಕ್ಕೆ

ಇನ್ನು ಬಿ.ಎಸ್.ಎನ್.ಎಲ್​ನವರು ಗ್ರಾಮಸ್ಥರಿಗೆ ಸರಿಯಾದ ಟವರ್ ಸೇವೆಯನ್ನು ಒದಗಿಸುತ್ತಿಲ್ಲ. ಟವರ್​ಗಳ ನಿರ್ವಹಣೆಯ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಯವರಿಗೆ ನೀಡಲಾಗಿದ್ದು, ಅವರುಗಳು ಟವರ್ ಬಳಿ ಸುಳಿಯುವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಗ್ರಾಮಸ್ಥರು ಟವರ್ ಏರಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಸೂಕ್ತ ಭರವಸೆ ನೀಡುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ವಿದ್ಯುತ್‌ ಇಲ್ಲದಿದ್ದರೂ ಜನರೇಟರ್‌ ಮೂಲಕ ನೆಟ್‌ವರ್ಕ್‌ ಇರುವಂತೆ ನೋಡಿಕೊಳ್ಳಬೇಕು ಎಂದು ಜನರು ಪಟ್ಟು ಹಿಡಿದಿದ್ದು, ಅಧಿಕಾರಿಗಳು ಆರು ದಿನಗಳ ಕಾಲಾವಕಾಶ ಕೇಳಿದ ನಂತರ ಷರತ್ತಿನ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಒಟ್ಟಾರೆ ಮಲೆನಾಡು ಭಾಗದಲ್ಲಿ ತಲೆದೊರಿರುವ ಮೊಬೈಲ್ ನೆಟ್ವರ್ಕ್ ಸಮಸ್ಯೆಯನ್ನ ಕೂಡಲೇ ಸಂಬಂಧಪಟ್ಟಂತ ಅಧಿಕಾರಿಗಳು ಬಗೆಹರಿಸಬೇಕಿದೆ. ಇಲ್ಲಿನ ಜನರಿಗೆ ನೆಟ್ ವರ್ಕ್ ಸಮಸ್ಯೆ ಶಾಪದಿಂದ ಮುಕ್ತಿ ನೀಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ