ಶಿವಮೊಗ್ಗ, ಜನವರಿ 05: ಹೊಸವರ್ಷಕ್ಕೆ ಶುಭಾಶಯ ಕೋರುವ ನೆಪದಲ್ಲಿ ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ (Dhananjaya Sarji) ಹೆಸರಿನಲ್ಲಿ ನಗರದ ಮೂವರು ಗಣ್ಯ ವ್ಯಕ್ತಿಗಳಿಗೆ ವಿಷಪೂರಿತ ಸ್ವೀಟ್ ಬಾಕ್ಸ್ಗಳನ್ನು (Sweet Box) ಡಿಟಿಡಿಸಿ ಕೋರಿಯರ್ ಮೂಲಕ ಕಳುಹಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಡಿಟಿಡಿಸಿ ಕೋರಿಯರ್ ಮೂಲಕ ಭದ್ರಾವತಿಯಿಂದ ಈ ಪಾರ್ಸೆಲ್ ಕಳುಹಿಸಲಾಗಿದೆ. ಒಬ್ಬರು ಇದನ್ನು ಬಾಯಲ್ಲಿ ಹಾಕಿಕೊಂಡ ತಕ್ಷಣ ಕಹಿ ಅಂಶ ಪತ್ತೆಯಾಗಿದೆ. ಕೂಡಲೇ ಪ್ರಕರಣ ಬೆಳಕಿಗೆ ಬಂದಿದ್ದು, ದೊಡ್ಡ ಗಂಡಾಂತರ ತಪ್ಪಿದಂತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಎಂಎಲ್ಸಿ ಧನಂಜಯ ಸರ್ಜಿ ಅವರು ಸ್ವೀಟ್ ಅನ್ನು ಲ್ಯಾಬ್ಗೆ ರವಾನೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದಾರೆ. ಸ್ವೀಟ್ ಬಾಕ್ಸ್ ಕಳುಹಿಸಿದ ಅನಾಮಧೇಯ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮೆಗ್ಗಾನ್ ಆಸ್ಪತ್ರೆಯಲ್ಲೂ ಬಾಣಂತಿ ಸಾವು, ಜಿಲ್ಲೆಯಲ್ಲಿ ಹೆಚ್ಚಿದ ಆತಂಕ
ನನ್ನ ಹೆಸರಿನಲ್ಲಿ ಅನಾಮಧೇಯ ವ್ಯಕ್ತಿ ಕಹಿ ಅಂಶ ಇರುವ ಸ್ವೀಟ್ ಬಾಕ್ಸ್ ಕೋರಿಯರ್ ಮಾಡಿದ್ದಾನೆ. ಈ ಬಗ್ಗೆ ಎಸ್ಪಿ ಅವರಿಗೆ ದೂರು ನೀಡಿದ್ದೇವೆ. ಅನಾಮಧೇಯ ವ್ಯಕ್ತಿಯನ್ನು ಪತ್ತೆ ಹಚ್ಚಿ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇವೆ. ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವ ಭರವಸೆ ಎಸ್ಪಿ ನೀಡಿದ್ದಾರೆ ಎಂದು ಎಂಎಲ್ಸಿ ಡಾ.ಧನಂಜಯ ಸರ್ಜಿ ಹೇಳಿದರು.
ಈ ಕಹಿಭರಿತ ಸ್ವೀಟ್ ಬಾಕ್ಸ್ಅನ್ನು ಮಕ್ಕಳು ತಿಂದಿದ್ದರೆ ದೊಡ್ಡ ಅನಾವುತ ಆಗುತಿತ್ತು. ಇಂತಹ ಘಟನೆ ಮತ್ತೆ ಮರುಕಳಿಸಬಾರದು ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಡಾ.ಧನಂಜಯ ಸರ್ಜಿ ಅವರು ಹಬ್ಬ ಹರಿದಿನಗಳಲ್ಲಿ ಬೇವು-ಬೆಲ್ಲ, ಎಳ್ಳು-ಬೆಲ್ಲ ಹಂಚುತ್ತಾರೆ. ಆದರೆ, ಈಗ ಅವರ ಹೆಸರಿನಲ್ಲಿ ಕಹಿ ಭರಿತ ಸ್ವೀಟ್ ಬಾಕ್ಸ್ ಬೇರೆ ಯಾರೋ ಹಂಚಿದ್ದಾರೆ. ಈ ಕಹಿ ಘಟನೆ ಅವರ ಮನಸ್ಸಿಗೆ ಆಘಾತ ಉಂಟು ಮಾಡಿದೆ. ಈ ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಕಿಡಿಗೇಡಿಯನ್ನು ಪತ್ತೆ ಹಚ್ಚಿ ಬಂಧಿಸಬೇಕು. ಕಿಡಿಗೇಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:42 am, Sun, 5 January 25