ಪ್ರೇಮಿಗಳಿಗೆ ಸಪೋರ್ಟ್ ಮಾಡಿದ್ದಕ್ಕೆ ಇಬ್ಬರ ಕೊಲೆ: ಜೋಡಿ ಮರ್ಡರ್ಗೆ ಬೆಚ್ಚಿಬಿದ್ದ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜೈ ಭೀಮ್ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದ್ದ ಡಬಲ್ ಮರ್ಡರ್ಗೆ ಇಡೀ ಶಿವಮೊಗ್ಗವೇ ಬೆಚ್ಚಿಬಿದ್ದಿದೆ. ಪ್ರೇಮಿಗಳಿಗೆ ಬೆಂಬಲಿಸದ್ದಾರೆಂದು ಭಾವಿಸಿ ಯುವತಿಯ ಅಣ್ಣ ಮತ್ತು ಆತನ ಸ್ನೇಹಿತರು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಇಬ್ಬರನ್ನು ಕೊಲೆ ಮಾಡಿರುವಂತಹ ಘಟನೆ ನಡೆದಿದೆ.

ಶಿವಮೊಗ್ಗ, ಡಿಸೆಂಬರ್ 13: ಪ್ರೇಮಿಗಳಿಗೆ (lovers) ಬೆಂಬಲಿಸದ್ದಾರೆಂದು ಭಾವಿಸಿ ಇಬ್ಬರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ (murder) ಮಾಡಿರುವಂತಹ ಘಟನೆ ಭದ್ರಾವತಿಯ ಜೈ ಭೀಮ ನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಕಿರಣ್ (25) ಮತ್ತು ಮಂಜುನಾಥ್ (45) ಮೃತರು. ಸದ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯ ಓಲ್ಡ್ ಟೌನ್ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ನಡೆದದ್ದೇನು?
ಡಬಲ್ ಮರ್ಡರ್ಗೆ ಇಡೀ ಶಿವಮೊಗ್ಗ ಜಿಲ್ಲೆಯ ಜನರು ಬೆಚ್ಚಿಬಿದ್ದಿದ್ದಾರೆ. ಭದ್ರಾವತಿ ನಗರದ ಪ್ರೇಮಿಗಳಿಬ್ಬರು ಹೈದ್ರಾಬಾದ್ಗೆ ಓಡಿ ಹೋಗಿ ಮದುವೆಯಾಗಿ ನಿನ್ನೆ ವಾಪಸ್ ಭದ್ರಾವತಿಗೆ ಬಂದಿದ್ದರು. ನೇರವಾಗಿ ಪ್ರೇಮಿಗಳು ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಗೆ ಬಂದಿದ್ದಾರೆ. ಎರಡು ಕುಟುಂಬಗಳು ಠಾಣೆಯಲ್ಲಿ ಮಾತುಕತೆ ನಡೆಸುತ್ತಿದ್ದರು. ಈ ನಡುವೆ ಯುವತಿಯ ಅಣ್ಣ ಭರತ್ಗೆ ಒಂದು ಮಾಹಿತಿ ಬಂದಿದೆ. ತಂಗಿ ಪ್ರಿಯಕರನ ಜೊತೆ ಓಡಿ ಹೋಗಲು ಕಾರಣ ಇವರು ವಾಸವಿರುವ ಜೈಭೀಮ ನಗರದ ಕಿರಣ್ ಮತ್ತು ಸುರೇಶ್ ಎನ್ನುವುದು ಗೊತ್ತಾಗಿದೆ. ಠಾಣೆಯಿಂದ ಹೊರಗೆ ಬಂದ ಅಣ್ಣ ಭರತ್, ತನ್ನ ಸ್ನೇಹಿತರಿಗೆ ಕಾಲ್ ಮಾಡಿದ್ದಾನೆ. ಠಾಣೆಯಿಂದ ಅಂದಾಜು 2 ಕಿ.ಮೀ ದೂರದಲ್ಲಿ ಜೈ ಭೀಮ ನಗರವಿದೆ.
ಇದನ್ನೂ ಓದಿ: ಸರ್ಕಾರಿ ನೌಕರನೇ ಬೇಕೆಂದು ಮದುವೆ ಆಗುವ ಯುವತಿಯರೇ ಜೋಕೆ: ಪತಿಯ ವರದಕ್ಷಿಣೆ ಟಾರ್ಚರ್ಗೆ ನಾಲೆಗೆ ಹಾರಿದ ಮಹಿಳೆ
ಭರತ್ ಮತ್ತು ಆತನ ಸ್ನೇಹಿತರು ಜೈಭೀಮ ನಗರಕ್ಕೆ ಹೋಗಿದ್ದಾರೆ. ಅಲ್ಲಿ ಮೊದಲು ತಂಗಿಯ ಲವ್ಗೆ ಸಾಥ್ ಕೊಟ್ಟು ಅವಳು ಮನೆಯಿಂದ ಓಡಿ ಹೋಗಲು ಸಹಾಯ ಮಾಡಿದ ಕಿರಣ ಮೇಲೆ ಅಟ್ಯಾಕ್ ಮಾಡಿದ್ದಾರೆ. ಡ್ರ್ಯಾಗನ್, ಮಚ್ಚಿನಿಂದ ದಾಳಿ ಮಾಡಿದ್ದಾರೆ. ಈ ನಡುವೆ ಕಿರಣ್ಗೆ ಸಾಥ್ ಕೊಟ್ಟಿದ್ದ ಸುರೇಶ್ ಮೇಲೆ ಕೂಡ ದಾಳಿ ಮಾಡಿದ್ದಾರೆ. ಏರಿಯಾದಲ್ಲಿ ಗಲಾಟೆ ನೋಡಿದ ಮಂಜುನಾಥ್ ಜಗಳ ಬಿಡಿಸಲು ಹೋಗಿದ್ದಾರೆ. ಆತನ ಮೇಲೂ ಭರತ್ ಆ್ಯಂಡ್ ಗ್ಯಾಂಗ್ ಡೆಡ್ಲಿ ಅಟ್ಯಾಕ್ ಮಾಡಿದ್ದಾರೆ.
ಈ ದಾಳಿಯಲ್ಲಿ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಿರಣ ಗಂಭೀರವಾಗಿ ಗಾಯಗೊಂಡಿದ್ದು, ಭದ್ರಾವತಿಯ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನು ಸುರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೆ ಮೂವರ ಕೊಲೆ ಆಗುತ್ತಿತ್ತು. ಈ ಘಟನೆ ಬಳಿಕ ಭರತ್ ಮತ್ತು ಆತನ ಸ್ನೇಹಿತರು ಎಸ್ಕೇಪ್ ಆಗಿದ್ದಾರೆ.
ಗಪ್ ಚುಪ್ ಮದುವೆಯಾಗಿದ್ದ ಜೋಡಿ
ನಂದೀಶ್ ಭದ್ರಾವತಿ ನಗರದಲ್ಲಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಸೃಷ್ಟಿ ಮೂಲತಃ ಚನ್ನಪಟ್ಟಣದ ಯುವತಿಯಾಗಿದ್ದು, ಇಲ್ಲಿ ವಿದ್ಯಾಭ್ಯಾಸಕ್ಕೆಂದು ತನ್ನ ದೊಡ್ಡಮ್ಮಳ ಮನೆಗೆ ಬಂದಿದ್ದಳು. ಈ ನಡುವೆ ವ್ಯಾಸಂಗ ಬಿಟ್ಟು, ಮೆಡಿಕಲ್ ಶಾಪ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳಂತೆ. ಈ ನಡುವೆ ನಂದೀಶ್ ಮತ್ತು ಸೃಷ್ಟಿ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಈ ಪ್ರೀತಿ ಗಾಢವಾಗಿ ಬೆಳೆದಿತ್ತು. ಚಿಕ್ಕ ವಯಸ್ಸಿನಲ್ಲೇ ಚೆಲುವಿನ ಚಿತ್ತಾರದಂತೆ ಇಬ್ಬರು ಮನೆ ಬಿಟ್ಟು ಓಡಿ ಹೋಗಿದ್ದರು. ಬಳಿಕ ಇಬ್ಬರು ಗಪ್ ಚುಪ್ ಆಗಿ ಮದುವೆ ಕೂಡ ಆಗಿದ್ದಾರೆ. ಹೀಗೆ ಓಡಿ ಹೋದವರು ಮದುವೆ ಬಳಿಕ ವಾಪಸ್ ಬಂದಿದ್ದಾರೆ.
ಈ ನಡುವೆ ಎರಡು ಕುಟುಂಬಸ್ಥರು ಈ ಪ್ರೀತಿಗೆ ವಿರೋಧವಿದ್ದರು. ಎರಡು ಕುಟುಂಬಗಳ ನಡುವೆ ಮೊದಲೇ ಗಲಾಟೆ ಶುರುವಾಗಿತ್ತು. ಇತ್ತ ಯುವತಿ ಲವ್ ಮತ್ತು ಮನೆ ಬಿಟ್ಟು ಓಡಿಹೋಗಲು ಕಿರಣ ಮತ್ತು ಮಂಜುನಾಥ್ ಕಾರಣ ಅಂತಾ ಆರೋಪಿಸಿ, ಬಡಾವಣೆ ಕೆಲ ಯುವಕರು ಇದೇ ದ್ವೇಷಕ್ಕೆ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಜೈ ಭೀಮ್ ಬಡಾವಣೆ ರಣರಂಗವಾಗಿದ್ದು, ನೋಡು ನೋಡುತ್ತಲೇ ಅಲ್ಲಿ ಇಬ್ಬರ ನೆತ್ತರು ಹರಿದಿತ್ತು. ಇದನ್ನು ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಪ್ರೀತಿಸಿ ಮದವೆಯಾಗಿದ್ದ ಯುವಕ-ಯುವತಿಗೆ ಸಂಬಂಧವೇ ಇಲ್ಲದಿದ್ದರೂ, ವಿನಾಕಾರಣ ದ್ವೇಷಕ್ಕೆ ಇಲ್ಲಿ ಕೊಲೆ ಮಾಡಲಾಗಿದೆ ಎನ್ನುವುದು ಮೃತರ ಕುಟುಂಬಸ್ಥರ ಆರೋಪವಾಗಿದೆ.
ಇದನ್ನೂ ಓದಿ: ಹಳೆಯ ದ್ವೇಷಕ್ಕೆ ಹರಿದ ನೆತ್ತರು: ಮಗನ ಜೀವ ಉಳಿಸಲು ಹೋಗಿ ಬಲಿಯಾದ ತಾಯಿ
ಕಳೆದೆರೆಡು ದಿನಗಳ ಹಿಂದೆ ನಂದೀಶ್ ಮತ್ತು ಸೃಷ್ಟಿ ಇಬ್ಬರು ನಾಪತ್ತೆಯಾಗಿದ್ದರು. ನಿನ್ನೆ ಸಂಜೆ ಅವರು ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಗೆ ವಾಪಸ್ ಬಂದಿದ್ದರು. ಈ ಘಟನೆ ನಡುವೆ ಕಿರಣ ಮತ್ತು ಮಂಜುನಾಥ್ ಕೊಲೆ ಆಗಿದೆ. ಈ ಕೊಲೆ ಕೇಸ್ನಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



