
ಬೆಂಗಳೂರು, ಆಗಸ್ಟ್ 31: ಬೆಂಗಳೂರಿನ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ (shivaram karanth layout) ನಿರ್ಮಾಣಕ್ಕಾಗಿ ಭೂಮಿ ನೀಡಿದ್ದ ರೈತರು ಮತ್ತು ಭೂಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬಿಡಿಎ ನಿಗದಿಪಡಿಸಿದ್ದ ನಿವೇಶನ ದರವನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ. ಸಿಎಂ ಡಿಕೆ ಶಿವಕುಮಾರ್ (DK Shivakumar) ಭೂಮಾಲೀಕರಿಗೆ ಪರಿಹಾರ ಹಾಗೂ ಕ್ರಯಪತ್ರವನ್ನು ವಿತರಣೆ ಮಾಡಿದ್ದಾರೆ.
ಬಡಾವಣೆ ನಿರ್ಮಾಣದ ವೇಳೆ ಜಮೀನು ನೀಡಿದ ರೈತರಿಗೆ ಬಿಡಿಎ ಈ ಹಿಂದೆ ಪ್ರತಿ ಚದರ ಅಡಿಗೆ 50 ರೂ. ರಂತೆ ದರ ನಿಗದಿ ಮಾಡಿತ್ತು. ಇದಕ್ಕೆ ಭೂಮಿ ಕಳೆದುಕೊಂಡ ರೈತರಿಂದ ತೀವ್ರ ಅಸಮಾಧಾನ ಮತ್ತು ವಿರೋಧ ವ್ಯಕ್ತವಾಗಿತ್ತು. ರೈತರ ಸಂಕಷ್ಟಕ್ಕೆ ಸ್ಪಂದಿಸಿದ ಸಿಎಂ ಡಿಕೆ ಶಿವಕುಮಾರ್, ಬಿಡಿಎ ಹಿರಿಯ ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ನಡೆಸಿದ ಸಂಧಾನ ಸಭೆಯ ಬಳಿಕ ಈ ದರವನ್ನು ಪ್ರತಿ ಚದರ ಅಡಿಗೆ ಕೇವಲ 20 ರೂ.ಕ್ಕೆ ನಿಗದಿ ಮಾಡಲು ಬಿಡಿಎ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಾರಂತ ಬಡಾವಣೆಯ ಭೂಮಾಲೀಕರಿಗೆ ನಿವೇಶನ ಪತ್ರ ಹಸ್ತಾಂತರ
ಬೆಂಗಳೂರಿನ ನೆಹರು ತಾರಾಲಯದ ಯು.ಆರ್. ರಾವ್ ಭವನದಲ್ಲಿ ಬಿಡಿಎ ಅಧ್ಯಕ್ಷರಾದ ಶ್ರೀ ಎನ್. ಎ. ಹ್ಯಾರಿಸ್ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ಭೂಮಾಲೀಕರಿಗೆ ನಿವೇಶನ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ, 600ಕ್ಕೂ ಹೆಚ್ಚು ಭೂಮಾಲೀಕರು ಹಾಗೂ… pic.twitter.com/voT1PGAASF
— DK Shivakumar (@DKShivakumar) August 31, 2026
ಈ ದರ ಕಡಿತದ ಸೌಲಭ್ಯ ಕೇವಲ ಯೋಜನೆಗೆ ಭೂಮಿ ನೀಡಿದ್ದ ಮೂಲ ರೈತರು ಮತ್ತು ಭೂಮಾಲೀಕರಿಗೆ ಮಾತ್ರ ಅನ್ವಯವಾಗಲಿದೆ. ಸಾರ್ವಜನಿಕರು ಹಾಗೂ ಖಾಸಗಿಯವರಿಗೆ ನೀಡುವ ಸಾಮಾನ್ಯ ನಿವೇಶನಗಳ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸದ್ಯ ಸರ್ಕಾರದ ಈ ನಿರ್ಧಾರದಿಂದಾಗಿ ಶಿವರಾಮ ಕಾರಂತ ಬಡಾವಣೆಯ ಭೂಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.
ಇನ್ನು ಸಿಎಂ ಡಿಕೆ ಶಿವಕುಮಾರ್ ಕಾರಂತ ಬಡಾವಣೆಯ ಭೂಮಾಲೀಕರಿಗೆ ನಿವೇಶನ ಪತ್ರ ಹಸ್ತಾಂತರ ಮಾಡಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ‘ಬೆಂಗಳೂರಿನ ನೆಹರು ತಾರಾಲಯದ ಯು.ಆರ್. ರಾವ್ ಭವನದಲ್ಲಿ ಬಿಡಿಎ ಅಧ್ಯಕ್ಷ ಎನ್ಎ ಹ್ಯಾರಿಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ಭೂಮಾಲೀಕರಿಗೆ ನಿವೇಶನ ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ, 600ಕ್ಕೂ ಹೆಚ್ಚು ಭೂಮಾಲೀಕರು ಹಾಗೂ ರೈತರಿಗೆ ನಿವೇಶನ ಪತ್ರಗಳನ್ನು ಹಸ್ತಾಂತರಿಸಿದೆ’ ಎಂದಿದ್ದಾರೆ.
ಇದನ್ನೂ ಓದಿ: ಕಾರವಾರ ಮೆಡಿಕಲ್ ಕಾಲೇಜು, ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಗೆ ರಾಮಕೃಷ್ಣ ಹೆಗಡೆ ಹೆಸರು: ಸಿಎಂ ಘೋಷಣೆ
‘ಉತ್ತರ ಬೆಂಗಳೂರಿನ ಆವಲಹಳ್ಳಿ, ರಾಮಗೊಂಡನಹಳ್ಳಿ, ಜಾರಕಬಂಡೆ ಕಾವಲ್ ಸೇರಿದಂತೆ 17 ಹಳ್ಳಿಗಳ 3,069 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಲಾಗಿದೆ. ಡಾ. ಕೆ. ಶಿವರಾಮ ಕಾರಂತ ಬಡಾವಣೆಗೆ 3,200 ಭೂಮಾಲೀಕರು ಹಾಗೂ ರೈತರು ಜಾಗ ನೀಡಿದ್ದು, ಇಲ್ಲಿ ವಿವಿಧ ಅಳತೆಯ 34,992 ನಿವೇಶನಗಳನ್ನು ಸಿದ್ಧಪಡಿಸಲಾಗಿದೆ. ಈ ಪೈಕಿ 18 ಸಾವಿರ ನಿವೇಶನಗಳನ್ನು ಭೂಮಾಲೀಕರು ಹಾಗೂ ರೈತರಿಗೆ ಮೀಸಲಿಡಲಾಗಿದೆ’ ಎಂದು ತಿಳಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ, ಶಾಸಕರಾದ ಎಸ್. ಮುನಿರಾಜು, ಎಸ್.ಆರ್ ವಿಶ್ವನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.