ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮಧ್ಯೆ ಮತ್ತೊಂದು ‘ಬ್ರೇಕ್‌ಫಾಸ್ಟ್ ಮೀಟಿಂಗ್’!
ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ತುಸುಮಟ್ಟಿನ ಶಮನ ದೊರೆತಿದ್ದರೂ, ದೆಹಲಿ ಮಟ್ಟದಲ್ಲಿ ಮಾತುಕತೆ ಮುಂದುವರಿದಿದೆ. ಈ ಮಧ್ಯೆ, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ‘ ಬ್ರೇಕ್ ಫಾಸ್ಟ್ ಮೀಟಿಂಗ್’ನಲ್ಲಿ ಭಾಗವಹಿಸಿದ ನಂತರ ಇದೀಗ, ಮಂಗಳವಾರ ಬೆಳಗ್ಗೆ ಡಿಕೆ ಶಿವಕುಮಾರ್ ನಿವಾಸದಲ್ಲಿ ಆಯೋಜನೆಗೊಂಡಿರುವ ‘ ಬ್ರೇಕ್ ಫಾಸ್ಟ್ ಮೀಟಿಂಗ್’ನಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

ಬೆಂಗಳೂರು, ಡಿಸೆಂಬರ್ 1: ಕರ್ನಾಟಕ ಕಾಂಗ್ರೆಸ್ (Congress) ಅಧಿಕಾರ ಹಂಚಿಕೆ ತಿಕ್ಕಾಟ ತೀವ್ರಗೊಂಡ ಬೆನ್ನಲ್ಲೇ ಶನಿವಾರ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ನಡೆದಿತ್ತು. ಆ ಬಳಿಕ ಸಿಎಂ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಗ್ಗಟ್ಟಿನ ಸಂದೇಶ ರವಾನಿಸಿ, ಏನೇ ಇದ್ದರೂ ಹೈಕಮಾಂಡ್ ಹೇಳಿದಂತೆ ನಡೆಯುತ್ತೇವೆ ಎಂದಿದ್ದರು. ಆ ಬಳಿಕ ಸಿದ್ದರಾಮಯ್ಯ ಅವರು, ಡಿಕೆಶಿ ಕೂಡ ಮನೆಗೆ ಆಹ್ವಾನಿಸಿದ್ದಾರೆ. ಹೋಗುತ್ತೇನೆ ಎಂದಿದ್ದಾರೆ. ಇದೀಗ ಅದಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಮಂಗಳವಾರ ಬೆಳಗ್ಗೆ 9.30ಕ್ಕೆ ಡಿಕೆ ಶಿವಕುಮಾರ್ ಅವರ ಸದಾಶಿವನಗರದ ಖಾಸಗಿ ನಿವಾಸದಲ್ಲಿ ಸಿದ್ದರಾಮಯ್ಯ ‘ಬ್ರೇಕ್‌ಫಾಸ್ಟ್ ಮೀಟಿಂಗ್’ಗಾಗಿ ಹಾಜರಾಗಲಿದ್ದಾರೆ.
ಏತನ್ಮಧ್ಯೆ, ಅಧಿಕಾರ ಹಂಚಿಕೆ ತಿಕ್ಕಾಟದ ಅಂತಿಮ ನಿರ್ಧಾರ ಈಗ ಹೈಕಮಾಂಡ್ ಅಂಗಳ ತಲುಪಿದೆ. ದೆಹಲಿಯಲ್ಲಿ ಸೋನಿಯಾ ಗಾಂಧಿ ನಿವಾಸದಲ್ಲಿ ಭಾನುವಾರ ಮಹತ್ವದ ಸಭೆ ನಡೆದಿದ್ದು, ಪರಿಹಾರ ಸೂಚಿಸುವಂತೆ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ಹೆಜ್ಜೆ
ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಬಿಕ್ಕಟ್ಟು ತುಸು ಮಟ್ಟಿಗೆ ಶಮನಗೊಂಡ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಖರ್ಗೆ ಕರ್ನಾಟಕದವರೇ ಆಗಿರುವುದರಿಂದ ಯಾವುದೇ ಏಕಪಕ್ಷೀಯ ಅಥವಾ ಪಕ್ಷಪಾತ ನಿರ್ಧಾರವಾಗಿ ಹೋಗದಂತೆ ನೋಡಿಕೊಳ್ಳಲು ಎಲ್ಲ ಉನ್ನತ ಮಟ್ಟದ ನಾಯಕರನ್ನು ಜತೆ ಕರೆದು ಚರ್ಚಿಸಲು ಮುಂದಾಗಿದ್ದಾರೆ.
ಈ ಹಿನ್ನೆಲೆ, ಖರ್ಗೆ ಅವರು ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ, ವೇಣುಗೋಪಾಲ್ ಹಾಗೂ ಎಐಸಿಸಿಯ ಇತರ ಹಿರಿಯ ನಾಯಕರು ಹಾಗೂ ಗಾಂಧಿ ಕುಟುಂಬದವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಪಕ್ಷದ ಒಳ ಕಲಹ ತೀವ್ರಗೊಳ್ಳದಂತೆ ಪಾರದರ್ಶಕವಾಗಿ ಎಲ್ಲ ನಾಯಕರಿಂದ ‘ಮುಕ್ತ ಅಭಿಪ್ರಾಯ ಸಂಗ್ರಹ’ ನಡೆಸುವ ಕಾರ್ಯ ಪ್ರಗತಿಯಲ್ಲಿದೆ.
ಇದನ್ನೂ ಓದಿ: ಗೊಂದಲ ತಿಳಿಗೊಳಿಸಲು ಕರೆದ ಪತ್ರಿಕಾಗೋಷ್ಠಿಯಲ್ಲೇ ಹಲವು ಅನುಮಾನಗಳ ಉಳಿಸಿಹೋದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್!
ಮತ್ತೊಂದೆಡೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನಡುವಿನ ಈ ಸತತ ಭೇಟಿಗಳು ಶಿಷ್ಟಾಚಾರವಷ್ಟೆಯಾ ಅಥವಾ ಇದರ ಒಳಮರ್ಮ ಬೇರೆಯೇ ಇದೆಯಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ.



