ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ: ಅಧಿಕೃತ ಘೋಷಣೆಯೊಂದೇ ಬಾಕಿ

Basavanna Cultural Leader of Karnataka: ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಇಂದು ನಡೆದ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಅಧಿಕೃತವ ಘೋಷಣೆಯೊಂದೇ ಬಾಕಿ ಇದೆ. ಇದರೊಂದಿಗೆ ಸಿದ್ದರಾಮಯ್ಯ ಅವರು ಸ್ವಾಮೀಜಿಗಳು ಇಟ್ಟಿದ್ದ ಬೇಡಿಕೆಯನ್ನು ಈಡೇರಿಸಿದ್ದಾರೆ.

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ: ಅಧಿಕೃತ ಘೋಷಣೆಯೊಂದೇ ಬಾಕಿ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Jan 18, 2024 | 6:57 PM

ಬೆಂಗಳೂರು, (ಜನವರಿ 18): ಅಣ್ಣ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ( Basavanna Cultural Leader of Karnataka) ಎಂದು ಘೋಷಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇಂದು(ಜನವರಿ 18) ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ತೀರ್ಮಾನ ಕೈಳ್ಳಲಾಗಿದ್ದು, ಜಗಜ್ಯೋತಿ ಬಸವೇಶ್ವರರ ಚಿಂತನೆ ಅನುಭಾವ ಸಾರ್ವಕಾಲಿಕವಾಗಿದ್ದು, ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಕರ್ನಾಟಕ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಲಿದೆ.

ಇನ್ನು ಈ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಅಣ್ಣ ಬಸವಣ್ಣ ಅವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ಸಚಿವ ಸಂಪುಟ ಸಭೆಯು ತೀರ್ಮಾನಿಸಿದೆ. ಸಂಪುಟದಲ್ಲಿ ಯಾವುದೇ ಚರ್ಚೆಯಾಗದೇ ಎಲ್ಲರ ಸಮ್ಮತಿಯೊಂದಿಗೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.

ಬೇಡಿಕೆ ಇಟ್ಟಿದ್ದ ಹಲವು ಸ್ವಾಮೀಜಿಗಳು, ಚಿಂತಕರು

ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಸಿಸಬೇಕೆಂದು ಜನವರಿ 8ರಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಜಗದ್ಗುರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ನೇತೃತ್ವದ ಲಿಂಗಾಯತ ಸ್ವಾಮೀಜಿಗಳು, ಪ್ರಗತಿಪರ ಸ್ವಾಮೀಜಿಗಳು, ಪ್ರಗತಿಪರ ಚಿಂತಕರು ಮತ್ತು ದಲಿತ, ರೈತ, ಕಾರ್ಮಿಕ, ಮಹಿಳಾ ಚಳವಳಿಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು.

ಈ ವೇಳೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಥವಾ ರಾಯಭಾರಿಯನ್ನಾಗಿಸಬೇಕು ಎನ್ನುವ ಒಕ್ಕೊರಲ ಒತ್ತಾಯವನ್ನು ಗೌರವಿಸುತ್ತೇನೆ. ವೈಯುಕ್ತಿಕವಾಗಿ ನನಗೆ ಈ ಘೋಷಣೆ ಬಗ್ಗೆ ತಕರಾರಿಲ್ಲ. ಆದರೆ, ಈ ಪ್ರಸ್ತಾವನೆಯನ್ನು ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆಯೇ ಇಂದು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡಿದ್ದಾರೆ.ಇದರೊಂದಿಗೆ ಚಿಂತಕರ ಹಾಗೂ ಸ್ವಾಮೀಜಿಗಳು ಇಟ್ಟಿದ್ದ ಬೇಡಿಕೆಯನ್ನು ಸಿದ್ದರಾಮಯ್ಯ ಈಡೇರಿಸಿದ್ದಾರೆ.

Published On - 6:47 pm, Thu, 18 January 24