ಕಾಂಗ್ರೆಸ್ ದಾಖಲೆ ಬಿಡುಗಡೆ ಮಾಡುತ್ತಿದ್ದಂತೆಯೇ ಬಿಜೆಪಿ ಟ್ವೀಟ್ ಡಿಲೀಟ್, ಸಿಎಂ ಚಾಟಿ!
ಹೊಸಕೋಟೆ ಟೌನ್ ಅಲ್ಲಿರುವ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಸಮಿತಿಗೆ ಹಿಂದೂಯೇತರ ವ್ಯಕ್ತಿಯನ್ನು ಸದಸ್ಯನಾಗಿ ನೇಮಿಸಿದೆ ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ. ಇದಕ್ಕೆ ಕಾಂಗ್ರೆಸ್ ದಾಖಲೆಯನ್ನು ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದೆ. ಇದರ ಬೆನ್ನಲ್ಲೇ ಬಿಜೆಪಿ ತನ್ನ ಟ್ವೀಟ್ ಮಾಡಿದ್ದು, ಇದೀಗ ಇದಕ್ಕೆ ಸಿದ್ದರಾಮಯ್ಯ ಬಿಜೆಪಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು, (ಮೇ 08): ಹೊಸಕೋಟೆ (Hoskote) ನಗರದ ಅವಿಮುಕ್ತೇಶ್ವರ ದೇವಾಲಯದ ಬ್ರಹ್ಮರಥೋತ್ಸವ ಸಮಿತಿಗೆ (hoskote brahmarathotsava committee)ಮುಸ್ಲಿಂ ವ್ಯಕ್ತಿಯನ್ನು ಸದಸ್ಯರನ್ನಾಗಿ ಮಾಡಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಹಿಂದು ವಿರೋಧಿ ಸಿಎಂ ಸಿದ್ದರಾಮಯ್ಯ ಈಗ ಹಿಂದುಯೇತರರನ್ನು ನೇಮಿಸುವ ಮೂಲಕ ದೇವಾಲಯಗಳು ಮತ್ತು ಅವುಗಳ ಸಂಪತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ನಿಮ್ಮದೇ ಸರ್ಕಾರ ಇದ್ದಾಗ ಬ್ರಹ್ಮೋತ್ಸವ ಸಮಿತಿಗೆ ಮುಸ್ಲಿಂ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಿದಾಗ ನಿಮ್ಮಲ್ಲಿ ಈಗ ಉಕ್ಕಿ ಹರಿಯುತ್ತಿರುವ ಹಿಂದುತ್ವದ ಅಭಿಮಾನ ಆಗ ಎಲ್ಲಿ ಅಡಗಿ ಕೂತಿತ್ತು ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ನಾಯಕರೇ… ನಮ್ಮ ಕೈಗೆ ಬಡಿಗೆ ಕೊಟ್ಟು ಮತ್ತೆ ಮತ್ತೆ ಯಾಕೆ ಬಡಿಸಿಕೊಳುವಿರಿ? ನಿಮ್ಮ ಸುಳ್ಳುಗಳನ್ನು ಬಯಲು ಮಾಡಲು ಅವಕಾಶ ಕೊಟ್ಟು ಸಮಾಜದ ಎದುರು ಯಾಕೆ ಬೆತ್ತಲಾಗುತ್ತೀರಿ? ಕಾಂಗ್ರೆಸ್ ಸರ್ಕಾರ ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಂ ಸಮುದಾಯದ ನವಾಜ್ ಅವರನ್ನು ಸದಸ್ಯರನ್ನಾಗಿ ಮಾಡಿದೆ ಎಂದು ಎದೆಬಡಿದುಕೊಳ್ಳುತ್ತೀರಲ್ಲಾ? ನಿಮ್ಮದೇ ಪಕ್ಷದ ಸರ್ಕಾರ 2020 ಮತ್ತು 2022ರ ಸಾಲಿನಲ್ಲಿ ಇದೇ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಂ ಸಮುದಾಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಿದಾಗ ನಿಮ್ಮಲ್ಲಿ ಈಗ ಉಕ್ಕಿ ಹರಿಯುತ್ತಿರುವ ಹಿಂದುತ್ವದ ಅಭಿಮಾನ ಆಗ ಎಲ್ಲಿ ಅಡಗಿ ಕೂತಿತ್ತು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹೊಸಕೋಟೆ ಬ್ರಹ್ಮರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ವ್ಯಕ್ತಿ: ಬಿಜೆಪಿ ಆಕ್ರೋಶ
ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನ ಸರ್ವಧರ್ಮಗಳನ್ನು ಸಮಭಾವದಿಂದ ಕಾಣುವ ಹಿಂದು ಧರ್ಮದ ಪರಂಪರೆಗೆ ಸಾಕ್ಷಿಯಾಗಿದೆ. ಅಲ್ಲಿನ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಎಲ್ಲ ಧರ್ಮಗಳ ಜನತೆ ಭಕ್ತಿ-ಗೌರವದಿಂದ ಭಾಗವಹಿಸುತ್ತಾರೆ. 2020ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಈ ದೇವಸ್ಥಾನದ ಬ್ರಹ್ಮರಥೋತ್ಸವ ಸಮಿತಿಗೆ ಇಮ್ತಿಯಾಜ್ ಪಾಷಾ ಅವರನ್ನು ಸದಸ್ಯರನ್ನಾಗಿ ನೇಮಿಸಿತ್ತು. 2022ರಲ್ಲಿ ಬಿಜೆಪಿ ಸರ್ಕಾರ ಮತ್ತೆ ಈ ಸಮಿತಿಗೆ ಅಪ್ಸರ್ ಅವರನ್ನು ಸದಸ್ಯರನ್ನಾಗಿ ಮಾಡಿತ್ತು.
ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಸಂಪತ್ತು ಲೂಟಿ ಮಾಡುವ ದುರುದ್ದೇಶದಿಂದಲೇ ಬಿಜೆಪಿ ಸರ್ಕಾರ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಮರನ್ನು ಸದಸ್ಯರನ್ನಾಗಿ ಮಾಡಿದೆ ಎಂದು ಆರೋಪಿಸುವಷ್ಟು ಕೀಳು ಮಟ್ಟಕ್ಕೆ ನಾನಿಳಿಯಲಾರೆ. ಎಲ್ಲವನ್ನೂ ಕೇಸರಿ ಕಣ್ಣುಗಳಿಂದ ನೋಡುವ ರೋಗದಿಂದ ಶೀಘ್ರ ಗುಣಮುಖರಾಗಿ ಎಂದು ನಿಮಗೂ ನಿಮ್ಮ ಸರ್ವೋಚ್ಚ ನಾಯಕರಾದ ನರೇಂದ್ರ ಮೋದಿ ಅವರಿಗೆ ಹಾರೈಸುತ್ತೇನೆ.
ರಾಜ್ಯದ ಬಿಜೆಪಿ ನಾಯಕರೇ, ನಿಮಗೆ ಮಾನ-ಮರ್ಯಾದೆ ಎನ್ನುವುದೇನಾದರೂ ಇದ್ದರೆ ಮೊದಲು ಜನರನ್ನು ತಪ್ಪುದಾರಿಗೆಳೆಯುವ ಈ ಹೇಳಿಕೆಯನ್ನು ವಾಪಸು ಪಡೆದು ರಾಜ್ಯದ ಜಾತ್ಯತೀತ ಕನ್ನಡಿಗರ ಕ್ಷಮೆ ಕೇಳಬೇಕೆಂದು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಕ್ಷಮೆಯಾಚಿಸುವಂತೆ ಕೇಳುವಂತೆ ಕಾಂಗ್ರೆಸ್ ಒತ್ತಾಯ
ಇನ್ನು ಬಿಜೆಪಿ ಟ್ವೀಟ್ಗೆ ಕಾಂಗ್ರೆಸ್ ಮುಖಂಡರು ದಾಖಲೆ ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ದಾಖಲೆ ಬಿಡುಗಡೆ ಮಾಡುತ್ತಿದ್ದಂತೆಯೇ ಬಿಜೆಪಿ ತನ್ನ ಟ್ವೀಟ್ ಡಿಲೀಟ್ ಮಾಡಿದೆ. ಬಿಜೆಪಿ ಸರ್ಕಾರಲ್ಲಿ ಸಚಿವರಾಗಿದ್ದ ಎಂಟಿಬಿ ನಾಗರಾಜ್ ಮುಸ್ಲಿಂ ವ್ಯಕ್ತಿಯನ್ನ ನೇಮಕ ಮಾಡಿದ್ದ ದಾಖಲೆ ಸಹ ಬಿಡುಗಡೆ ಮಾಡಿದ್ದು, ದಶಕಗಳಿಂದ ಎಲ್ಲಾ ಸಮುದಾಯದ ಒಬ್ಬೊಬ್ಬರನ್ನ ಸದಸ್ಯರಾಗಿ ಮಾಡ್ತಿರುವುದಾಗಿ ದಾಖಲೆ ತೋರಿಸಿ ಹೊಸಕೋಟೆ ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದಾರೆ. ಇತ್ತ ಬಿಜೆಪಿ ಟ್ವಿಟ್ ಡಿಲೀಟ್ ಮಾಡಿರುವುದನ್ನ ಶಾಸಕ ಶರತ್ ಬಚ್ಚೇಗೌಡ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಶಾಂತಿ ಸೌಹರ್ದತೆ ಕದಳಿಸುವ ಯತ್ನ ಮಾಡಿದ್ದು ಬಿಜೆಪಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.
ಬಿಜೆಪಿ ಏನು ಹೇಳಿತ್ತು?
ಹೊಸಕೋಟೆಯ ಅವಿಮುಕ್ಷೇಶ್ವರ ದೇವಾಲಯದ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಂ ವ್ಯಕ್ತಿ ನೇಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ರಾಜ್ಯ ಬಿಜೆಪಿ, ದೇವಸ್ಥಾನದ ಬ್ರಹ್ಮೋತ್ಸವದ ಮೇಲ್ವಿಚಾರಣೆಗೆ ಕಾಂಗ್ರೆಸ್ ‘ನವಾಜ್’ ಅವರನ್ನು ನೇಮಿಸಿದೆ. ನಮ್ಮ ದೇವಸ್ಥಾನಗಳನ್ನು ಲೂಟಿ ಮಾಡಲು ಪ್ರಯತ್ನಿಸಿದ ನಂತರ, ಹಿಂದು ವಿರೋಧಿ ಸಿಎಂ ಸಿದ್ದರಾಮಯ್ಯ ಈಗ ಹಿಂದುಯೇತರರನ್ನು ನೇಮಿಸುವ ಮೂಲಕ ದೇವಾಲಯಗಳು ಮತ್ತು ಅವುಗಳ ಸಂಪನ್ಮೂಲಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಹಿಂದುಗಳ ಹಕ್ಕುಗಳನ್ನು ಕಸಿದುಕೊಳ್ಳುವ, ಒಂದು ನಿರ್ದಿಷ್ಟ ಸಮುದಾಯಕ್ಕೆ ಒಲವು ತೋರುವ ರಾಹುಲ್ ಗಾಂಧಿಯವರ ಭ್ರಮೆಯ ಕಲ್ಪನೆಗಳನ್ನು ಕಾರ್ಯಗತಗೊಳಿಸಲು ಆತುರ ತೋರುತ್ತಿದೆ. ಇಂದು ಇದು ಕರ್ನಾಟಕದಲ್ಲಿ ಕೇವಲ ಒಂದು ದೇವಾಲಯ, ನಾಳೆ ಅದು ಭಾರತದ ಪ್ರತಿಯೊಂದು ದೇವಾಲಯವಾಗಬಹುದು. ಕಾಂಗ್ರೆಸ್ ಬಗ್ಗೆ ಎಚ್ಚರವಿರಲಿ ಎಂದು ಟ್ವೀಟ್ ಮಾಡಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:54 pm, Wed, 8 May 24