ರಮೇಶ್ ಜಾರಕಿಹೊಳಿ ದಾಖಲಾದ ಆಸ್ಪತ್ರೆಗೇ ಭೇಟಿ ನೀಡಿ ಆರೋಗ್ಯ ಸಂಬಂಧಿ ದಾಖಲೆ ಪರಿಶೀಲಿಸಿದ ಎಸ್ಐಟಿ
ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕು ಆಸ್ಪತ್ರೆಗೆ ಎಸ್ಐಟಿ ತನಿಖಾಧಿಕಾರಿಗಳ ತಂಡ ಭೇಟಿ ನೀಡಿದ್ದು, ವೈದ್ಯರಿಂದ ಮಾಹಿತಿ ಕಲೆಹಾಕಿದ್ದಾರೆ. ರಮೇಶ್ ಜಾರಕಿಹೊಳಿ ಆರೋಗ್ಯದ ಬಗ್ಗೆ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅವರನ್ನು ವಿಚಾರಿಸಿ ದಾಖಲೆ ಪಡೆದಿದ್ದಾರೆ.
ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ದೊಡ್ಡ ಸುದ್ದಿ ಮಾಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ನಿರಂತರ ತನಿಖೆ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಇದೆ ಎಂಬ ಸಂಗತಿ ಹೊರಬಿದ್ದಿದ್ದು ಅವರನ್ನು ಗೋಕಾಕ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದರು. ಇದೀಗ ಈ ಬಗ್ಗೆ ಮಾಹಿತಿ ಪಡೆಯಲು ರಮೇಶ್ ಜಾರಕಿಹೊಳಿ ದಾಖಲಾದ ಆಸ್ಪತ್ರೆಗೆ ಎಸ್ಐಟಿ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕು ಆಸ್ಪತ್ರೆಗೆ ಎಸ್ಐಟಿ ತನಿಖಾಧಿಕಾರಿಗಳ ತಂಡ ಭೇಟಿ ನೀಡಿದ್ದು, ವೈದ್ಯರಿಂದ ಮಾಹಿತಿ ಕಲೆಹಾಕಿದೆ. ರಮೇಶ್ ಜಾರಕಿಹೊಳಿ ಆರೋಗ್ಯದ ಬಗ್ಗೆ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅವರನ್ನು ವಿಚಾರಿಸಿ ದಾಖಲೆ ಪಡೆದ ಅಧಿಕಾರಿಗಳು, ರಮೇಶ್ ಜಾರಕಿಹೊಳಿ ಯಾವಾಗ ಆಸ್ಪತ್ರೆಗೆ ದಾಖಲಾಗಿದ್ದರು? ಪಾಸಿಟಿವ್ ಬಂದಿದ್ದು ಯಾವಾಗ? ಆರೋಗ್ಯ ಸ್ಥಿತಿ ಈಗ ಹೇಗಿದೆ? ಇನ್ನೂ ಎಷ್ಟು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕು? ಎಂಬುದೆಲ್ಲವನ್ನೂ ವಿಚಾರಿಸಿದ್ದು, ಇನ್ನೂ ಹಲವು ಪ್ರಶ್ನೆಗಳನ್ನು ವೈದ್ಯರ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿದ್ದ ಅಧಿಕಾರಿಗಳು ಮಾಜಿ ಸಚಿವರ ಆರೋಗ್ಯದ ಬಗ್ಗೆ ಸವಿವರವಾಗಿ ವಿಚಾರಿಸಿ ದಾಖಲೆ ಪಡೆದ ಬಳಿಕ ಹೊರನಡೆದಿರುವುದಾಗಿ ತಿಳಿದುಬಂದಿದೆ.
ನಿನ್ನೆಯ ವರದಿಯಲ್ಲಿ ಏನಿತ್ತು? ಅಶ್ಲೀಲ ಸಿಡಿ ಪ್ರಕರಣದಲ್ಲಿ ಎಸ್ಐಟಿ ತನಿಖೆಯನ್ನು ಎದುರು ನೋಡುತ್ತಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದೊಂದು ವಾರದಿಂದ ರಮೇಶ್ ಜಾರಕಿಹೊಳಿ ಅನಾರೋಗ್ಯಪೀಡಿತರಾಗಿರುವುದಾಗಿ, ಕೊರೊನಾಕ್ಕೆ ತುತ್ತಾಗಿರುವುದಾಗಿ ಅನುಮಾನ, ಆತಂಕ, ಗೊಂದಲಗಳು ಹರಿದಾಡುತ್ತಿದ್ದವು. ಸದ್ಯ ಇದಕ್ಕೆಲ್ಲಾ ತೆರೆ ಬಿದ್ದಿದ್ದು ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ತಗುಲಿರುವುದಾಗಿ ಗೋಕಾಕ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ ಸ್ಪಷ್ಟನೆ ನೀಡಿದ್ದಾರೆ. ಏಪ್ರಿಲ್ 1ರಂದು ಗೋಕಾಕ ಆಸ್ಪತ್ರೆಗೆ ಬಂದು ಕೊವಿಡ್ ಟೆಸ್ಟ್ ಮಾಡಿಸಿದ್ದ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ ಎಂದು ಆರೋಗ್ಯಾಧಿಕಾರಿಗಳು ಟಿವಿ9ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮುಚ್ಚಿದ ಲಕೋಟೆಯಲ್ಲಿ ಸಿಡಿ ಲೇಡಿ ತನಿಖಾ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಹೈಕೋರ್ಟ್ ಸೂಚನೆ
ಆರೋಗ್ಯ ಸಮಸ್ಯೆ ನೆಪವೊಡ್ಡಿ ಎಸ್ಐಟಿ ವಿಚಾರಣೆಯಿಂದ ದೂರ ಉಳೀತಾರಾ ರಮೇಶ್ ಜಾರಕಿಹೊಳಿ?
Published On - 3:01 pm, Tue, 6 April 21