AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರಿನ ಸನ್​ರೂಫ್ ತೆಗೆದು ಮಕ್ಕಳನ್ನು ನಿಲ್ಲಿಸುತ್ತೀರಾ? ದಂಡ ತೆರಬೇಕಾದೀತು ಎಚ್ಚರ

ಸನ್​ರೂಫ್ ಇರುವ ಕಾರಿನಲ್ಲಿ ಮಕ್ಕಳಿಗೆ ಗಾಳಿಯಲ್ಲಿ ಕೈಬೀಸುತ್ತಾ ಹೋಗುವುದೆಂದರೆ ಮಜಾ. ಈ ರೀತಿ ಸನ್​ರೂಫ್ ಒಳಗಿಂದ ಹೊರಗೆ ತೂರಿಕೊಂಡು ನಿಂತಿದ್ದ ಬೆಂಗಳೂರಿನ ಬಾಲಕನೊಬ್ಬನ ತಲೆಗೆ ಕಬ್ಬಿಣದ ರಾಡ್ ಬಡಿದು ಆತನ ತಲೆಯೇ ಒಡೆದುಹೋಗಿತ್ತು. ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಕ್ಕಳ ಕ್ಷಣಿಕ ಖುಷಿಗಾಗಿ ಈ ರೀತಿ ಸನ್​ರೂಫ್​ ಓಪನ್ ಮಾಡಿ ನಿಲ್ಲಿಸುವ ಪೋಷಕರಲ್ಲಿ ಬಹುತೇಕ ಜನರಿಗೆ ಇದು ಕಾನೂನುಬಾಹಿರ ಎಂಬ ವಿಷಯವೇ ಗೊತ್ತಿಲ್ಲ!

ಕಾರಿನ ಸನ್​ರೂಫ್ ತೆಗೆದು ಮಕ್ಕಳನ್ನು ನಿಲ್ಲಿಸುತ್ತೀರಾ? ದಂಡ ತೆರಬೇಕಾದೀತು ಎಚ್ಚರ
Car Sunroof
ಸುಷ್ಮಾ ಚಕ್ರೆ
|

Updated on: Nov 12, 2025 | 8:18 PM

Share

ಬೆಂಗಳೂರು, ನವೆಂಬರ್ 12: ‘ಬಿಗ್ ಬಾಸ್’​ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಸಮೀರ್ ಆಚಾರ್ಯ ಇತ್ತೀಚೆಗೆ ತಮ್ಮ ಮಗಳ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅವರ ಪತ್ನಿ ಕಾರು ಡ್ರೈವ್ ಮಾಡುವಾಗ ಸನ್​ರೂಫ್ (Sunroof) ಓಪನ್ ಮಾಡಲಾಗಿತ್ತು. ಈ ವೇಳೆ ಕಾರಿನ ಸೀಟ್​ ಮೇಲೆ ಹತ್ತಿ ನಿಂತ ಅವರ ಪುಟ್ಟ ಮಗಳು ಹೊರಗೆ ನೋಡಲು ಸರಿಯಾಗಿ ಏನೂ ಕಾಣುತ್ತಿಲ್ಲವೆಂದು ಅಮ್ಮನ ಹೆಗಲ ಮೇಲೆ ಕಾಲಿಟ್ಟು ಕಾರಿನ ಮೇಲ್ಭಾಗದಿಂದ ಹೊರಗೆ ನೋಡುತ್ತಿದ್ದಳು. ಇದರಿಂದ ಏಕಾಗ್ರತೆಯಿಂದ ಕಾರು ಚಲಾಯಿಸಲು ಸಮೀರ್ ಆಚಾರ್ಯ ಅವರ ಪತ್ನಿಗೆ ಸಾಧ್ಯವಾಗದಿದ್ದರೂ ವಿಡಿಯೋಗೆ ಪೋಸ್ ಕೊಡುತ್ತಾ ತಮ್ಮ ಮಗಳ ಸಂಭ್ರಮವನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದರು. ಮಗಳ ಸುರಕ್ಷತೆ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳದ ಸಮೀರ್ ಆಚಾರ್ಯ ಚಲಿಸುತ್ತಿದ್ದ ಕಾರಿನಲ್ಲಿ ಮೇಲೆ ಹತ್ತಿ ನಿಂತಿದ್ದ ಪುಟ್ಟ ಮಗಳನ್ನು ಹಿಡಿದುಕೊಳ್ಳುವ ಪ್ರಯತ್ನವನ್ನೂ ಮಾಡದೆ ವಿಡಿಯೋ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಈ ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ ಸಾಕಷ್ಟು ಜನರು ಅವರಿಗೆ ಬುದ್ಧಿವಾದ ಹೇಳಿದ್ದರು. ಕೊನೆಗೆ ಈ ಘಟನೆ ಪೊಲೀಸರ ಗಮನಕ್ಕೂ ಬಂದಿತ್ತು.

ಇದೊಂದು ಉದಾಹರಣೆ ಮಾತ್ರ. ಇದೇ ರೀತಿ ಸನ್​ರೂಫ್ ಮೇಲೆ ಮಕ್ಕಳನ್ನು ನಿಲ್ಲಿಸಿಕೊಂಡು ಹೋಗುವವರನ್ನು ದಿನನಿತ್ಯವೂ ನಾವು ನೋಡುತ್ತಲೇ ಇರುತ್ತೇವೆ. ಒಂದುವೇಳೆ ಕಾರು ಚಲಾಯಿಸುವಾಗ ಸ್ವಲ್ಪ ಯಾಮಾರಿದರೂ ಮೇಲೆ ನಿಂತಿರುವ ಮಕ್ಕಳು ಹಾರಿ ಕೆಳಗೆ ಬೀಳುವ ಅಪಾಯವೇ ಹೆಚ್ಚು. ಅಥವಾ ತಲೆಗೆ ಯಾವುದಾದರೂ ವಸ್ತುವೋ, ತಂತಿಯೋ ತಾಗುವ ಅಪಾಯವೂ ಇರುತ್ತದೆ. ಅಂದಹಾಗೆ, ಈ ರೀತಿ ಸನ್​ರೂಫ್ ಓಪನ್ ಮಾಡಿಕೊಂಡು, ಚಲಿಸುವ ಕಾರಿನಲ್ಲಿ ನಿಂತು ಹೋಗುವುದು ಕಾನೂನಿನ ಪ್ರಕಾರ ಅಪರಾಧ ಎಂಬುದು ನಿಮಗೆ ಗೊತ್ತಾ? ಮುಂದಿನ ಬಾರಿ ಸನ್​ರೂಫ್ ಓಪನ್ ಮಾಡಿದಾಗ ಈ ವಿಷಯವೂ ನಿಮ್ಮ ಗಮನದಲ್ಲಿರಲಿ. ಇಲ್ಲವಾದರೆ, ದಂಡ ತೆರಬೇಕಾಗಬಹುದು ಎಚ್ಚರ!

ಸನ್​ರೂಫ್ ಇರುವುದು ಶೋಕಿಗಲ್ಲ!

ಸನ್‌ರೂಫ್‌ನ ಉದ್ದೇಶ ಕಾರಿನೊಳಗೆ ಹೆಚ್ಚಿನ ಬೆಳಕು ಬರಲಿ ಮತ್ತು ಗಾಳಿ ಬರಲಿ ಎಂಬ ಉದ್ದೇಶಕ್ಕಾಗಿಯೇ ಹೊರತು ಮನರಂಜನೆಗಾಗಿ ಅಲ್ಲ. ಹೆಚ್ಚಿನ ವೇಗದಲ್ಲಿ ಕಾರು ಚಾಲನೆ ಮಾಡುವಾಗ ಕಿಟಕಿಗಳನ್ನು ತೆರೆದಿಡುವುದು ಸೂಕ್ತವಲ್ಲ. ಏಕೆಂದರೆ ನೇರ ಗಾಳಿ ಕಣ್ಣುಗಳಿಗೆ ತಗುಲಿ ಗಾಯಗಳಿಗೆ ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ ಗಾಳಿಯ ಪ್ರಸರಣವನ್ನು ಸುಗಮಗೊಳಿಸಲು ಸನ್‌ರೂಫ್‌ಗಳನ್ನು ಓಪನ್ ಮಾಡಲಾಗುತ್ತದೆ. ಇದನ್ನು ವಾಹನದೊಳಗಿನ ಗಾಳಿಯನ್ನು ಮರುಪರಿಚಲನೆ ಮಾಡಲು ಸನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ, ಇದು ಗಾಳಿ ಹರಡಲು ಬಳಕೆಯಾಗುವುದಕ್ಕಿಂತ ಅದರ ಮೇಲೆ ತಲೆಹಾಕಿ ಹೊರಗಿನ ಸೌಂದರ್ಯ ಸವಿಯಲು ಬಳಕೆಯಾಗುವುದೇ ಹೆಚ್ಚು.

ಇದನ್ನೂ ಓದಿ: ಸನ್​ರೂಫ್ ಮೇಲಿಂದ ಪಟಾಕಿ ಸಿಡಿಸಿದ ಜನ; ಮದುವೆ ದಿಬ್ಬಣದ ಕಾರಿಗೆ ಹೊತ್ತಿಕೊಂಡ ಬೆಂಕಿ

ಇತ್ತೀಚೆಗೆ, ಬೆಂಗಳೂರಿನಲ್ಲಿ 6 ವರ್ಷದ ಬಾಲಕನೊಬ್ಬ ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆಯನ್ನು ಹೊರಗೆ ಹಾಕುವಾಗ ರಾಡ್​ ತಾಗಿ ಗಾಯಗಳಾಗಿತ್ತು. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 281 (ದುಡುಕಿನ ಮತ್ತು ನಿರ್ಲಕ್ಷ್ಯದ ಚಾಲನೆ) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಲಾಗಿತ್ತು. “ಸನ್‌ರೂಫ್ ಮೂಲಕ ತಲೆ ಹಾಕುವುದು ಕಟ್ಟುನಿಟ್ಟಾಗಿ ಕಾನೂನುಬಾಹಿರ ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.

ಕಾರು ಬ್ರೇಕ್ ಹಾಕಿದರೆ ಸನ್​ರೂಫ್​ನಲ್ಲಿ ನಿಂತಿದ್ದ ಮಕ್ಕಳು ವಾಹನಗಳಿಂದ ಹೊರಗೆ ಎಸೆಯಲ್ಪಡುವ ಸಾಧ್ಯತೆಯೂ ಇರುತ್ತದೆ. ಇತರ ವಾಹನಗಳಿಂದ ಬರುವ ಸಣ್ಣ ಕಲ್ಲುಗಳಂತಹ ವಸ್ತುಗಳು ಮಕ್ಕಳಿಗೆ ತಾಗುವ ಅಪಾಯವೂ ಇದೆ. ಇದಲ್ಲದೆ, ವಿದ್ಯುತ್ ತಂತಿಗಳು ಕೆಳಗೆ ಜೋತುಬಿದ್ದಿದ್ದರೆ ಅದು ತಾಗಿ ಮಕ್ಕಳ ಪ್ರಾಣಕ್ಕೂ ಕುತ್ತು ಉಂಟಾಗಬಹುದು ಎಂಬುದು ಪೋಷಕರಿಗೆ ನೆನಪಿರಲಿ.

ಕಾನೂನು ಏನು ಹೇಳುತ್ತದೆ?

ಮೋಟಾರು ವಾಹನ ಕಾಯ್ದೆ (MVA)ಯ ಸೆಕ್ಷನ್ 184 ಮತ್ತು 177ರ ಅಡಿಯಲ್ಲಿ ಸನ್​ರೂಫ್​ ಓಪನ್ ಮಾಡಿ ನಿಲ್ಲುವಂತಹ ಅಭ್ಯಾಸಕ್ಕೆ ದಂಡವನ್ನು ವಿಧಿಸಬಹುದು. ಸನ್‌ರೂಫ್‌ನಿಂದ ಹೊರಗೆ ನೋಡಲು ಚಲಿಸುವ ಕಾರಿನೊಳಗೆ ನಿಲ್ಲುವುದು ಕಾನೂನಿಗೆ ವಿರುದ್ಧವಾಗಿದೆ ಮತ್ತು ಅಪಾಯಕಾರಿಯಾಗಿದೆ. 1988ರ MVA ಯ ಸೆಕ್ಷನ್ 184, ವಾಹನವನ್ನು ಚಾಲನೆ ಮಾಡುವ ಸ್ಥಳ, ಆ ಸಮಯದಲ್ಲಿನ ಸಂಚಾರ ಮತ್ತು ವಾಹನದ ಸ್ಥಿತಿಯಂತಹ ಎಲ್ಲಾ ಸಂಬಂಧಿತ ಸಂದರ್ಭಗಳನ್ನು ಗಣನೆಗೆ ತೆಗೆದುಕೊಂಡು, ಸಾರ್ವಜನಿಕರಿಗೆ ಅಪಾಯವನ್ನುಂಟುಮಾಡುವ ರೀತಿಯಲ್ಲಿ ಅಥವಾ ವೇಗದಲ್ಲಿ ಮೋಟಾರು ವಾಹನವನ್ನು ಓಡಿಸುವ ಯಾರಿಗಾದರೂ ಶಿಕ್ಷೆ ನೀಡಲಾಗುತ್ತದೆ.

ಇದನ್ನೂ ಓದಿ: ಮಹಾರಾಷ್ಟ್ರ: ಕಾರಿನ ಸನ್​ರೂಫ್​ ಮೇಲೆ ಬಿದ್ದ ಬಂಡೆ, ಮಹಿಳೆ ಸಾವು

ಪ್ರಯಾಣಿಕರು ಕಾರು ಚಲಿಸುವಾಗ ಸಂಪೂರ್ಣವಾಗಿ ಕಾರಿನೊಳಗೆ ಇರಬೇಕು. ಸೀಟ್ ಬೆಲ್ಟ್ ಧರಿಸಬೇಕು. ಇದು ಮೋಟಾರು ವಾಹನ ಕಾಯ್ದೆ, 1988 (ವಿಭಾಗ 184 ಮತ್ತು 177) ಅಡಿಯಲ್ಲಿ ಭಾರತ ಸೇರಿದಂತೆ ಅನೇಕ ಸ್ಥಳಗಳಲ್ಲಿ ಜಾರಿಗೊಳಿಸಲಾದ ಸುರಕ್ಷತಾ ನಿಯಮವಾಗಿದೆ. ಯಾರಾದರೂ ತಮ್ಮ ತಲೆ ಅಥವಾ ದೇಹವನ್ನು ಸನ್‌ರೂಫ್‌ನಿಂದ ಹೊರಗೆ ಹಾಕಿದರೆ ಅದನ್ನು ಅಪಾಯಕಾರಿ ಮತ್ತು ಅಜಾಗರೂಕ ಕೃತ್ಯವೆಂದು ಪರಿಗಣಿಸಲಾಗುತ್ತದೆ. ಈ ನಿಯಮ ಉಲ್ಲಂಘಿಸುವವರು ದಂಡ, ಪರವಾನಗಿ ಅಮಾನತು ಅಥವಾ ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ದುಡುಕಿನ ಅಥವಾ ನಿರ್ಲಕ್ಷ್ಯದ ಚಾಲನೆಗೆ ಸಂಬಂಧಿಸಿದ ಕಾನೂನುಗಳ ಅಡಿಯಲ್ಲಿ ಇತರ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ.

ಕಾನೂನಿನ ಪ್ರಕಾರ, ಇತರರ ಜೀವ ಅಥವಾ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಅಜಾಗರೂಕ ಕೃತ್ಯಗಳಿಗೆ ಬಿಎನ್‌ಎಸ್ ಸೆಕ್ಷನ್ 125(ಎ) ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಯಾವುದೇ ಗಾಯವಾಗದಿದ್ದರೆ, ಮೂರು ತಿಂಗಳವರೆಗೆ ಜೈಲು ಶಿಕ್ಷೆ, 2,500 ರೂ. ದಂಡ ಅಥವಾ ಎರಡೂ ವಿಧಿಸಬಹುದು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ