ಬೆಂಗಳೂರು: ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ವಿಚಾರ ಚರ್ಚೆಗೆ ಕಾರಣವಾಗುತ್ತಿದೆ. ರಾಷ್ಟ್ರಕವಿ ಕುವೆಂಪುಗೆ (Kuvempu) ಅವಮಾನ ಮಾಡಲಾಗಿದೆ ಅಂತ ಹಲವರು ಧ್ವನಿ ಎತ್ತಿದ್ದಾರೆ. ಈ ನಡುವೆ ಜಗಜ್ಯೋತಿ ಬಸವಣ್ಣನ (Basavanna) ಪಠ್ಯ ಪರಿಷ್ಕರಣೆಯ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಸವಣ್ಣ ಉಪನಯನವಾದ ನಂತರ ಕೂಡಲಸಂಗಮಕ್ಕೆ ನಡೆದರು. ಶೈವ ಗುರುಗಳ ಸಾನ್ನಿಧ್ಯದಲ್ಲಿ ಬಸವಣ್ಣನವರು ಲಿಂಗದೀಕ್ಷೆ ಪಡೆದರು. ಬಸವಣ್ಣನವರು ವೀರಶೈವ ಲಿಂಗಾಯತ ಮತ ಅಭಿವೃದ್ಧಿಪಡಿಸಿದ್ದರು. ಉಪನಯನ ಮಾಡಿಕೊಳ್ಳಲಿಲ್ಲ, ಶೈವ ಗುರುಗಳಿಂದ ಲಿಂಗದೀಕ್ಷೆ ಪಡೆದ್ರಾ? ಎಂಬ ವಿಚಾರ ಚರ್ಚೆಗೆ ಕಾರಣವಾಗುತ್ತಿದೆ.
9ನೇ ತರಗತಿಯ ಸಮಾಜ-ವಿಜ್ಞಾನ ವಿಭಾಗದ ಪಾಠದಲ್ಲಿ ಈ ಬಗ್ಗೆ ಸೇರಿಸಲಾಗಿದೆ. ಆದರೆ ಈ ಪರಿಷ್ಕರಣೆ ಯಾವ ಅವಧಿಯಲ್ಲಿ ಆಗಿರುವುದು ಸ್ಪಷ್ಟನೆ ಸಿಕ್ಕಿಲ್ಲ. ಬಸವಣ್ಣನವರ ಯಾವುದೇ ಪಾಠವನ್ನು ನಾವು ಪರಿಷ್ಕರಣೆ ಮಾಡಿಲ್ಲ, ಪರಿಷ್ಕರಿಸಿಲ್ಲ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.
ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಜಯಮೃತ್ಯುಂಜಯ ಸ್ವಾಮೀಜಿ:
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಜಯಮೃತ್ಯುಂಜಯ ಸ್ವಾಮೀಜಿ, ಪಠ್ಯದಲ್ಲಿ ಕುವೆಂಪು ಬಳಿಕ ಬಸವಣ್ಣ ಅವರ ತತ್ವಕ್ಕೆ ಅಪಚಾರ ಮಾಡಲಾಗಿದೆ. ಪಠ್ಯದಲ್ಲಿನ ಸಾಲನ್ನು ನೋಡಿ ಎದೆಗೆ ಕಲ್ಲು ಹೊಡೆದಂತಾಯ್ತು. ಬಸವಣ್ಣನವರ ತತ್ವಕ್ಕೆ ಅಪಚಾರವಾಗುವ ಕೆಲಸ ಆಗಿದೆ. ಸೈದ್ಧಾಂತಿಕ ವಿಚಾರಕ್ಕೆ ಕೈ ಹಾಕಬೇಡಿ. ಬಸವಣ್ಣ ಅವರ ತತ್ವ ಸಂದೇಶಗಳನ್ನು ಮಕ್ಕಳಿಗೆ ಬೋಧಿಸಬೇಕು. ಬಸವಣ್ಣನವರ ತತ್ವಗಳ ಬಗ್ಗೆ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಅಸಮಾನತೆ ವಿರುದ್ಧ ಬಸವಣ್ಣ ಅವರ ಹೋರಾಟ ಜಗಜ್ಜಾಹೀರು ಆಗಿದೆ. ಬೊಮ್ಮಾಯಿ ಅವರೇ ನಿಮ್ಮ ತಂದೆ ಬಸವಣ್ಣನ ಭಕ್ತರಾಗಿದ್ದರು. ಅನೇಕ ಪೂಜ್ಯರ ಮಾರ್ಗದರ್ಶನ ನಿಮಗಿದೆ. ಪುಸ್ತಕ ಬಿಡುಗಡೆ ಆಗೋ ಮುಂಚೆ ಲೋಪದೋಷ ಸರಿಪಡಿಸಿ. ಬಸವಣ್ಣನವರ ತತ್ವ ಸಿದ್ಧಾಂತಕ್ಕೆ ದಕ್ಕೆಯಾದ್ರೆ ಸಹಿಸುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ:
ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥರನ್ನು ಸಮಿತಿಯಿಂದ ಕೈಬಿಡುವಂತೆ ಒತ್ತಾಯ ಕೇಳಿಬಂದಿದೆ. ಇಂದು (ಮೇ 31) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ. ವಿವಿಧ ಸಂಘಟನೆಗಳಿಂದ ನಡೆಯುವ ಪ್ರತಿಭಟನೆಯಲ್ಲಿ ಸಾಹಿತಿಗಳು, ಚಿಂತಕರು, ಶಿಕ್ಷಣ ತಜ್ಞರು ಸಾಥ್ ನೀಡಲಿದ್ದಾರೆ. ಹಾಗೇ, ಹಲವು ವಿದ್ಯಾರ್ಥಿ ಸಂಘಟನೆಗಳು ಕೂಡಾ ಭಾಗಿಯಾಗಲಿವೆ.
ಸಿಎಂ ಬೊಮ್ಮಾಯಿಗೆ ಪತ್ರ:
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ತರಳಬಾಳು ಮಠದ ಡಾ.ಪಂಡಿತಾರಾಧ್ಯ ಶ್ರೀ ಬೇಸರ ಹೊರಹಾಕಿದ್ದಾರೆ. ಬಸವಣ್ಣನವರ ಪಾಠದಲ್ಲಿ ಕೆಲ ಅಂಶ ಬದಲಾವಣೆ ಬಗ್ಗೆ ಕಿಡಿಕಾರಿರುವ ಅವರು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ವಾಟ್ಸಾಪ್ ಮೂಲಕ ದೊರೆತ ಮಾಹಿತಿ ಮೇರೆಗೆ ಶ್ರೀಗಳು ಸಿಎಂಗೆ ಪತ್ರ ಬರೆದಿದ್ದಾರೆ. ಪಠ್ಯ ಪುಸ್ತಕವನ್ನ ತಡೆಹಿಡಿದು ಸರಿ ಪಡಿಸಬೇಕು. ವೈದಿಕ ಧರ್ಮದಲ್ಲಿ ಬೇರೂರಿದ್ದ ಆಚರಣೆ ವಿರೋಧಿಸಿದ್ದರು. ಮಾನವೀಯ ಮೌಲ್ಯದ ಸರಳ ವೀರಶೈವ ಸಿದ್ಧಾಂತ ಸಾರಿದ್ದರು. ಸಮಾಜದಲ್ಲಿನ ಜಾತಿ ವ್ಯವಸ್ಥೆ, ಮೌಢ್ಯಚಾರಣೆ ವಿರುದ್ಧ ಹೋರಾಡಿದ್ದರು. ಮಹತ್ವದ ಅಂಶಗಳನ್ನು ತೆಗೆದು ಹಾಕಿ ತಿರುಚಲಾಗಿದೆ. ಲಿಂಗಾಯತ ಧರ್ಮದ ಬಗ್ಗೆ ತಪ್ಪು ಅರ್ಥ ಬರುವಂತೆ ತಿರುಚಿದ್ದಾರೆ. ವಚನಕಾರರು ವೀರಶೈವ ಧರ್ಮ ಸುಧಾರಿಸಿದರು ಎಂದು ಈಗಿನ ಪಠ್ಯದಲ್ಲಿ ಉಲ್ಲೇಖಿಸಲಾದೆ. ಇದು ಶುದ್ಧ ಸುಳ್ಳು. ಲಿಂಗಾಯತ ಧರ್ಮ ಜಾರಿಗೆ ತಂದವರು ಬಸವಣ್ಣ ಎಂದು ಆಗಬೇಕಿತ್ತು. ತಕ್ಷಣೆವೇ ಪಠ್ಯವನ್ನ ತಡೆಹಿಡಿಯಬೇಕು. ಹಿಂದಿನ ಪಠ್ಯವನ್ನೇ ಮುಂದುವರೆಸಬೇಕು ಎಂದು ಶ್ರೀಗಳು ಒತ್ತಾಯಿಸಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:38 am, Tue, 31 May 22