Nepal Plane Crash: ನೇಪಾಳ ವಿಮಾನ ದುರಂತ; 4 ಭಾರತೀಯರು ಸೇರಿ 22 ಪ್ರಯಾಣಿಕರ ಮೃತದೇಹಗಳೂ ಪತ್ತೆ
ನೇಪಾಳದಲ್ಲಿ ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ವಿಮಾನ ಅಪಘಾತಕ್ಕೀಡಾದ ಎರಡು ದಿನಗಳ ನಂತರ, ಇಂದು ಬೆಳಿಗ್ಗೆ ಕಪ್ಪು ಪೆಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ.
ನವದೆಹಲಿ: ನೇಪಾಳದಲ್ಲಿ (Nepal Plane Crash) ಭಾನುವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ತಾರಾ ಏರ್ ವಿಮಾನ ಸೋಮವಾರ ಬೆಳಗ್ಗೆ ಪರ್ವತದಲ್ಲಿ ಪತನಗೊಂಡಿರುವುದು ಪತ್ತೆಯಾಗಿತ್ತು. ಇಂದು ಬೆಳಗ್ಗೆ ವೇಳೆಗೆ ವಿಮಾನದಲ್ಲಿದ್ದ 22 ಜನರ ಮೃತದೇಹಗಳು ಕೂಡ ಪತ್ತೆಯಾಗಿವೆ. ಈ ಮೂಲಕ ವಿಮಾನದಲ್ಲಿದ್ದ 4 ಭಾರತೀಯರು ಸೇರಿ 22 ಪ್ರಯಾಣಿಕರು ಮೃತಪಟ್ಟಿರುವುದು ಇಂದು ಮುಂಜಾನೆ ದೃಢಪಟ್ಟಿದೆ. ಕಳೆದ ಮೂರು ದಶಕಗಳಲ್ಲಿ ಪೋಖರಾ-ಜೋಮ್ಸೋಮ್ ಮಾರ್ಗದಲ್ಲಿ ಇದು ಏಳನೇ ಅಪಘಾತವಾಗಿದೆ. “ಕೊನೆಯ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ 12 ಮೃತ ದೇಹಗಳನ್ನು ಅಪಘಾತದ ಸ್ಥಳದಿಂದ ಕಠ್ಮಂಡುವಿಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ” ಎಂದು ನೇಪಾಳ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ನಾರಾಯಣ್ ಸಿಲ್ವಾಲ್ ಇಂದು ಬೆಳಗ್ಗೆ ತಿಳಿಸಿದ್ದಾರೆ.
ಈ ವಿಮಾನದಲ್ಲಿ ಮೂವರು ಸಿಬ್ಬಂದಿ, ನಾಲ್ವರು ಭಾರತೀಯ ಮತ್ತು ಇಬ್ಬರು ಜರ್ಮನ್ ಪ್ರಜೆಗಳು ಸೇರಿದಂತೆ 13 ನೇಪಾಳಿಗಳು ವಿಮಾನದಲ್ಲಿದ್ದರು. ಕೆನಡಾದಲ್ಲಿ ನಿರ್ಮಿತ DHC-6-300 ಟ್ವಿನ್ ಓಟರ್ ವಿಮಾನವು ಪೋಖರಾದಿಂದ ಜೋಮ್ಸಮ್‌ಗೆ ಬೆಳಿಗ್ಗೆ 9.55ಕ್ಕೆ ಟೇಕ್ ಆಫ್ ಆಗಿತ್ತು. ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ಹೊರಡಿಸಿದ ಹೇಳಿಕೆಯ ಪ್ರಕಾರ, ಘೋಡೆಪಾನಿ ಪ್ರದೇಶದಲ್ಲಿ ಬೆಳಿಗ್ಗೆ 10.07ಕ್ಕೆ ಏರ್ ಟ್ರಾಫಿಕ್ ಕಂಟ್ರೋಲರ್‌ನೊಂದಿಗಿನ ಸಂಪರ್ಕವನ್ನು ಅದು ಕಳೆದುಕೊಂಡಿತ್ತು. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಹವಾಮಾನ ವೈಪರೀತ್ಯವೇ ಈ ದುರಂತಕ್ಕೆ ಕಾರಣವಿರಬಹುದು ಎನ್ನಲಾಗಿದೆ.
ಇದನ್ನೂ ಓದಿ: Nepal Plane Crash: ನೇಪಾಳದಲ್ಲಿ ವಿಮಾನ ಪತನ; 21 ಶವಗಳು ಪತ್ತೆ, 4 ಭಾರತೀಯರು ಸೇರಿ 22 ಪ್ರಯಾಣಿಕರೂ ಸಾವನ್ನಪ್ಪಿರುವ ಶಂಕೆ
ಈ ವಿಮಾನವು 12,300 ಅಡಿ ಎತ್ತರದಲ್ಲಿ ಹಾರುತ್ತಿತ್ತು. ನಂತರ 14,500 ಅಡಿ ಎತ್ತರದ ಪರ್ವತಕ್ಕೆ ಅಪ್ಪಳಿಸಿತು. ಈ ವಿಷಯವನ್ನು ತನಿಖೆ ಮಾಡಲು ಸರ್ಕಾರವು ಆಯೋಗವನ್ನು ರಚಿಸಲಾಗಿದೆ. ಅಪಘಾತದ ಸ್ವರೂಪ ಮತ್ತು ಅಪಘಾತಕ್ಕೀಡಾದ ವಿಮಾನದ ಸ್ಥಾನವನ್ನು ಗಮನಿಸಿದರೆ ಪೈಲಟ್ ಮೋಡವನ್ನು ತಪ್ಪಿಸಲು ಹೋಗಿ ಈ ಅವಘಡ ಸಂಭವಿಸಿದೆ ಎಂದು ತೋರುತ್ತಿದೆ. ತಾರಾ ಏರ್ ಫ್ಲೈಟ್ 197 ಪೋಖಾರಾದಿಂದ ಜೋಮ್ಸಮ್‌ಗೆ ಭಾನುವಾರ ಬೆಳಿಗ್ಗೆ 6:15ಕ್ಕೆ ಪ್ರಯಾಣಿಸಬೇಕಿದ್ದ ಮೊದಲ ವಿಮಾನವಾಗಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಬೆಳಿಗ್ಗೆ 9:55ಕ್ಕೆ ಹೊರಟಿತ್ತು.
ಕ್ಯಾಪ್ಟನ್ ಘಿಮಿರೆ, ಕೋ-ಪೈಲಟ್ ಉತ್ಸವ್ ಪೋಖರೆಲ್, ಫ್ಲೈಟ್ ಅಟೆಂಡೆಂಟ್ ಕಿಸ್ಮಿ ಥಾಪಾ ವಿಮಾನದಲ್ಲಿದ್ದರು. ನೇಪಾಳ ಸೇನೆಯ ವಕ್ತಾರರು ಸೋಮವಾರ ಬೆಳಗ್ಗೆ ಟ್ವಿಟರ್‌ನಲ್ಲಿ ಪತನಗೊಂಡ ಅವಳಿ ಓಟರ್ ವಿಮಾನದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ನೇಪಾಳದಲ್ಲಿ ಸಿಂಗಲ್ ಇಂಜಿನ್ ಮತ್ತು ಬಹು ಇಂಜಿನ್ ವಿಮಾನಗಳ ಅಪಘಾತದಲ್ಲಿ ಇದುವರೆಗೆ 862 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ವಿಮಾನ ಪತನದ ಸ್ಥಳ ಗುರುತಿಸಿದ ನೇಪಾಳ ಸೇನೆ: 22 ಮಂದಿ ಜೀವಂತ ಇರುವುದು ಅನುಮಾನ
ಈ ವಿಮಾನವು 14,500 ಅಡಿ ಎತ್ತರದಲ್ಲಿ ಡಿಕ್ಕಿ ಹೊಡೆದ ನಂತರ ಪತನಗೊಂಡಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿತ್ತು. ಈ ಮೃತದೇಹಗಳನ್ನು ಹಿಂಪಡೆಯಲು 15 ನೇಪಾಳ ಸೇನೆಯ ಸೈನಿಕರ ತಂಡವನ್ನು ಸ್ಥಳದ ಬಳಿ ನೇಮಿಸಲಾಗಿತ್ತು ಎಂದು ನೇಪಾಳ ಸೇನೆಯ ವಕ್ತಾರರು ತಿಳಿಸಿದ್ದಾರೆ. ಈ ಅಪಘಾತದ ಸ್ಥಳವು ಸುಮಾರು 14,500 ಅಡಿ ಎತ್ತರದಲ್ಲಿದೆ. ನೇಪಾಳದಲ್ಲಿ ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ವಿಮಾನ ಅಪಘಾತಕ್ಕೀಡಾದ ಎರಡು ದಿನಗಳ ನಂತರ, ಇಂದು ಬೆಳಿಗ್ಗೆ ಕಪ್ಪು ಪೆಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೇಪಾಳ ಸೇನೆಯು ವರದಿಗಳಲ್ಲಿ ಉಲ್ಲೇಖಿಸಿದೆ. ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ಕೊನೆಯ ದೇಹವನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಪ್ರವಾಸಿ ನಗರ ಪೊಖರಾದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ತಾರಾ ಏರ್ ವಿಮಾನ ಭಾನುವಾರ ಬೆಳಗ್ಗೆ ಪತನಗೊಂಡಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:02 am, Tue, 31 May 22