ಕಠ್ಮಂಡು: ನೇಪಾಳದ ಖಾಸಗಿ ವಿಮಾನಯಾನ ಸಂಸ್ಥೆ ನಿರ್ವಹಿಸುತ್ತಿದ್ದ ವಿಮಾನವೊಂದು ಭಾನುವಾರ ಮುಂಜಾನೆ ಕಣ್ಮರೆಯಾಗಿದೆ. ಈ ವಿಮಾನದಲ್ಲಿ ನಾಲ್ವರು ಭಾರತೀಯರೂ ಸೇರಿದಂತೆ 22 ಪ್ರಯಾಣಿಕರಿದ್ದರು ಎಂದು ನೇಪಾಳದ ತಾರಾ ಏರ್ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ನೀಡಿರುವ ಮಾಹಿತಿ ಉಲ್ಲೇಖಿಸಿ ಹಲವು ಮಾಧ್ಯಮಗಳು ವರದಿ ಮಾಡಿವೆ.
ತಾರಾ ಏರ್ ಸಂಸ್ಥೆಯ 9 NAET ಮಾದರಿಯ ಎರಡು ಎಂಜಿನ್ನ ವಿಮಾನವು ಪ್ರವಾಸಿ ತಾಣ ಪೊಖ್ರಾದಿಂದ ಜೊಮ್ಸೊಮ್ ಎಂಬಲ್ಲಿಗೆ ತೆರಳುತ್ತಿತ್ತು. ಮುಂಜಾನೆ 9:55ಕ್ಕೆ ವಿಮಾನವು ನಿಯಂತ್ರಣ ಕಚೇರಿಯೊಂದಿಗೆ ಸಂಪರ್ಕ ಕಳೆದುಕೊಂಡಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ನಾಪತ್ತೆಯಾದ ವಿಮಾನ ಪತ್ತೆಗೆ ನೇಪಾಳ ಸರ್ಕಾರವು ಹೆಲಿಕಾಪ್ಟರ್ಗಳನ್ನು ನಿಯೋಜಿಸಿದೆ.
‘ಮುಂಜಾನೆ ಜೊಮ್ಸೊಮ್ ಆಗಸದಲ್ಲಿ ವಿಮಾನವು ಕಂಡು ಬಂದಿತ್ತು. ನಂತರ ಧವಳಗಿರಿ ಶಿಖರದ ಕಡೆಗೆ ಹೊರಳಿಕೊಂಡಿತು. ಅನಂತರ ವಿಮಾನ ನಿಯಂತ್ರಣ ಕಚೇರಿಯೊಂದಿಗೆ ಸಂಪರ್ಕ ಕಡಿತುಕೊಂಡಿತು’ ಎಂದು ಜಿಲ್ಲಾಧಿಕಾರಿ ನೇತ್ರಪ್ರಸಾದ್ ಶರ್ಮಾ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿ ನಾಲ್ವರು ಭಾರತೀಯರು, ಮೂವರು ಜಪಾನೀಯರು ಇದ್ದರು. ಇತರೆಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ನೇಪಾಳೀಯರು ಎಂದು ಸರ್ಕಾರಿ ದೂರದರ್ಶನ ವರದಿ ಮಾಡಿದೆ.
ವಿಶ್ವದ ಅತ್ಯಂತ ಸುಂದರ ಮತ್ತು ಎತ್ತರದ ಗಿರಿಶಿಖರಗಳ ತಾಣವಾಗಿರುವ ನೇಪಾಳಕ್ಕೆ ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲವಾಗಿದೆ. ಹಠಾತ್ತನೆ ಬದಲಾಗುವ ಹವಾಮಾನ ಮತ್ತು ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ರನ್ವೇಗಳ ಕಾರಣದಿಂದ ವೈಮಾನಿಕ ಅಪಘಾತಗಳು ಹೆಚ್ಚಾಗುತ್ತಿವೆ. ಸಣ್ಣ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಹೆಚ್ಚಿನ ಸಂಖ್ಯೆಯಲ್ಲಿ ನೇಪಾಳದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಸುದ್ದಿಯನ್ನು ಇಂಗ್ಲಿಷ್ನಲ್ಲಿ ಓದಲು ಲಿಂಕ್: Nepal plane missing
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ