ವಿಮಾನ ಪತನದ ಸ್ಥಳ ಗುರುತಿಸಿದ ನೇಪಾಳ ಸೇನೆ: 22 ಮಂದಿ ಜೀವಂತ ಇರುವುದು ಅನುಮಾನ
‘ಶೋಧ ಮತ್ತು ರಕ್ಷಣಾ ತಂಡಗಳು ವಿಮಾನವು ಪತನಗೊಂಡಿರುವ ಸ್ಥಳವನ್ನು ಗುರುತಿಸಿವೆ. ವಿವರಗಳನ್ನು ಶೀಘ್ರ ನೀಡಲಾಗುವುದು’ ಎಂದು ಸೇನೆಯು ತಿಳಿಸಿದೆ.
ಕಂಠ್ಮಂಡು: ನಾಲ್ವರು ಭಾರತೀಯರೂ ಸೇರಿ 22 ಪ್ರಯಾಣಿಕರಿದ್ದ ಖಾಸಗಿ ವಿಮಾನದ ಅವಶೇಷಗಳನ್ನು ಪತ್ತೆ ಮಾಡಿರುವುದಾಗಿ ನೇಪಾಳ ಸೇನೆಯು ಸೋಮವಾರ ಟ್ವೀಟ್ ಮಾಡಿದೆ. ‘ಶೋಧ ಮತ್ತು ರಕ್ಷಣಾ ತಂಡಗಳು ವಿಮಾನವು ಪತನಗೊಂಡಿರುವ ಸ್ಥಳವನ್ನು ಗುರುತಿಸಿವೆ. ವಿವರಗಳನ್ನು ಶೀಘ್ರ ನೀಡಲಾಗುವುದು’ ಎಂದು ಸೇನೆಯು ತಿಳಿಸಿದೆ. ಪ್ರಯಾಣಿಕರು ಬದುಕುಳಿದಿರುವುದು ಅನುಮಾನ ಎಂದು ಹೇಳಲಾಗಿದೆ.
ಎರಡು ಎಂಜಿನ್ಗಳ ತಾರಾ ಏರ್ 9 NAET ವಿಮಾನವು ಭಾನುವಾರ ಮುಂಜಾನೆಯಿಂದಲೇ ವಿಮಾ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿತ್ತು. ಮಷ್ತಾಂಗ್ ಜಿಲ್ಲೆಯಲ್ಲಿ ಪರ್ವತದ ಶಿಖರವೊಂದಕ್ಕೆ ಅಪ್ಪಳಿಸಿ, ಪತನಗೊಂಡಿತ್ತು. ಪ್ರತಿಕೂಲ ಹವಾಮಾನದ ಕಾರಣ ರಕ್ಷಣಾ ಕಾರ್ಯಾಚರಣೆಯನ್ನು ನಿನ್ನೆ ನೇಪಾಳ ಸೇನೆಯು ಸ್ಥಗಿತಗೊಳಿಸಿತ್ತು. ಇಂದು ಮುಂಜಾನೆಯಿಂದ ಮತ್ತೆ ರಕ್ಷಣಾ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ನೇಪಾಳ ಹೇಳಿದೆ.
ವಿಮಾನವು ಪತನಗೊಂಡಿದ್ದ ಸ್ಥಳದಲ್ಲಿ ಭಾನುವಾರ ಮಧ್ಯಾಹ್ನ ಹಿಮಪಾತವಾದ ಕಾರಣ ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಿದ್ದ ಹೆಲಿಕಾಪ್ಟರ್ಗಳನ್ನು ಹಿಂದಕ್ಕೆ ಕರೆಸಬೇಕಾಯಿತು ಎಂದು ನೇಪಾಳದ ಕಠ್ಮಂಡು ನಗರದ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಧಾನ ವ್ಯವಸ್ಥಾಪಕ ಪ್ರೇಮನಾಥ್ ಠಾಕೂರ್ ಹೇಳಿದರು.
Nepal Army locates the crash site of Tara Air aircraft at Sanosware, Thasang-2, Mustang
The aircraft with 22 people including four Indians onboard went missing yesterday. pic.twitter.com/Gn920jfphk
— ANI (@ANI) May 30, 2022
ಭಾರೀ ಸದ್ದಿನೊಂದಿಗೆ ವಿಮಾನವು ಲಾಮ್ಚೆ ಪರ್ವತದ ಶಿಖರಕ್ಕೆ ಅಪ್ಪಳಿಸಿತು. ಘಟನಾ ಸ್ಥಳಕ್ಕೆ ನೇಪಾಳ ಸೇನೆಯು ಧಾವಿಸುತ್ತಿದ್ದು, ಭೂ ಮತ್ತು ವಾಯುಮಾರ್ಗಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ನೇಪಾಳ ಸೇನೆಯು ಹೇಳಿದೆ.
ಪೋಖರಾದಿಂದ ಭಾನುವಾರ ಬೆಳಿಗ್ಗೆ 10.15ಕ್ಕೆ ಹೊರಟ ವಿಮಾನವು, 15 ನಿಮಿಷಗಳ ನಂತರ ಕಂಟ್ರೋಲ್ ಟವರ್ನ ಸಂಪರ್ಕ ಕಳೆದುಕೊಂಡಿತು. ವಿಮಾನವು ಮಾನಪತಿ ಹಿಮಾಲ್ ಭಾಗದ ಲಾಮ್ಚೆ ನದಿ ಪಾತ್ರದಲ್ಲಿ ಪತನಗೊಂಡಿದೆ. ವಿಮಾನ ಅವಶೇಷಗಳನ್ನು ಸೇನೆ ಪತ್ತೆ ಮಾಡಿದೆ ಎಂದು ನೇಪಾಳ ಸೇನೆಯ ವಕ್ತಾರ ನಾರಾಯಣ್ ಸಿಲ್ವಾಲ್ ಹೇಳಿದ್ದಾರೆ.
ವಿಶ್ವದ ಅತ್ಯಂತ ಸುಂದರ ಮತ್ತು ಎತ್ತರದ ಗಿರಿಶಿಖರಗಳ ತಾಣವಾಗಿರುವ ನೇಪಾಳಕ್ಕೆ ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲವಾಗಿದೆ. ಹಠಾತ್ತನೆ ಬದಲಾಗುವ ಹವಾಮಾನ ಮತ್ತು ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ರನ್ವೇಗಳ ಕಾರಣದಿಂದ ವೈಮಾನಿಕ ಅಪಘಾತಗಳು ಹೆಚ್ಚಾಗುತ್ತಿವೆ. ಸಣ್ಣ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಹೆಚ್ಚಿನ ಸಂಖ್ಯೆಯಲ್ಲಿ ನೇಪಾಳದಲ್ಲಿ ಕಾರ್ಯನಿರ್ವಹಿಸುತ್ತಿವೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:02 am, Mon, 30 May 22