ಮಂಡ್ಯ, ಆಗಸ್ಟ್ 08: ಮಾಜಿ ಸಂಸದೆ ಸುಮಲತಾ (Sumalatha) ಅವರು ಬಿಜೆಪಿಗೆ ಸೇರಿದಾಗಿನಿಂದ ಹೆಚ್ಚಾಗಿ ರಾಜ್ಯ ರಾಜಕೀಯ ಚಟುವಟಿಕೆಗಳಲ್ಲಿ ಅಷ್ಟಾಗಿ ಸಕ್ರಿಯರಾದಂತೆ ಕಾಣುತ್ತಿಲ್ಲ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಇವರ ಬದಲಾಗಿ ಹೆಚ್ಡಿ ಕುಮಾರಸ್ವಾಮಿಗೆ ಟಿಕೆಟ್ ನೀಡಲಾಗಿತ್ತು. ಇದು ಸಾಕಷ್ಟು ಭಿನ್ನಮತಕ್ಕೂ ಕಾರಣವಾಗಿತ್ತು. ಬಳಿಕ ಕುಮಾರಸ್ವಾಮಿ ಸುಮಲತಾ ಅವರ ಮನೆಗೆ ತೆರಳಿ ಬೆಂಬಲ ನೀಡುವಂತೆ ಹೇಳಿದ್ದರು. ಆದರೆ ಸುಮಲತಾ ಮಾತ್ರ ಹೆಚ್ಡಿಕೆ ಪರ ಪ್ರಚಾರಕ್ಕೆ ಹೋಗಿರಲಿಲ್ಲ. ಇದೀಗ ಹಗರಣಗಳಿಂದ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿರುವ ಬಿಜೆಪಿ, ಜೆಡಿಎಸ್ ಪಾದಯಾತ್ರೆ (Padayatra) ಜಿಲ್ಲೆಯಲ್ಲಿ 2ನೇ ದಿನ ನಡೆಯುತ್ತಿದ್ದರೂ ಸುಮಲತಾ ಮಾತ್ರ ದೂರ ಉಳಿದಿದ್ದಾರೆ.
ಮುಡಾದಲ್ಲಿ ಸೈಟ್ ಹಗರಣ ಖಂಡಿಸಿ ಬಿಜೆಪಿ, ಜೆಡಿಎಸ್‌ನಿಂದ ಮೈಸೂರು ಚಲೋಗೆ ರಣಕಹಳೆ ಮೊಳಗಿಸಿ ಇಂದು ಆರನೇ ದಿನಕ್ಕೆ ಕಾಲಿಟ್ಟಿತು. ಮಂಡ್ಯದಿಂದ ಪಾದಯಾತ್ರೆ ಶುರುವಾಗಿದ್ದೇ ತಡ. ಹಾಸನ ಮಾಜಿ ಶಾಸಕ ಪ್ರೀತಂ ಗೌಡ ಎಂಟ್ರಿ ಕೊಟ್ಟರು. ಆದರೆ ಮಂಡ್ಯ ಜಿಲ್ಲೆಯಲ್ಲಿ 2ನೇ ದಿನದ ಪಾದಯಾತ್ರೆಯಿಂದಲೂ ಸುಮಲತಾ ಅವರು ದೂರ ಉಳಿದಿದ್ದಾರೆ. ನಿನ್ನೆ ಕೂಡ ಪಾದಯಾತ್ರೆ ನಡೆದರೂ ಅವರು ಪಾಲ್ಗೊಂಡಿಲ್ಲ. ಇಂದು ಕೂಡ ಮಂಡ್ಯದಲ್ಲೇ ಪಾದಯಾತ್ರೆ ನಡೆದಿದ್ದರೂ ಸುಮಲತಾ ಭಾಗಿಯಾಗಿಲ್ಲ.
ಇದನ್ನೂ ಓದಿ: ಪ್ರೀತಂ ಗೌಡರನ್ನು ಪಾದಯಾತ್ರೆಯಿಂದ ದೂರವಿಡುತ್ತೇವೆ, ಮೈತ್ರಿಗೂ ಅವರಿಗೂ ಸಂಬಂಧವಿಲ್ಲ: ಪುಟ್ಟರಾಜು
ಮೈಸೂರು ಚಲೋ ಪಾದಯಾತ್ರೆಯಲ್ಲಿ ಇಂದು ಪ್ರೀತಂ ಗೌಡ ಭಾಗಿಯಾಗಿರಲ್ಲಿ. ನಿನ್ನೆ ಪಾದಯಾತ್ರೆಯಲ್ಲಿ ಪ್ರೀತಂ ಗೌಡ ಭಾಗವಹಿಸಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರು ಮತ್ತು ಪ್ರೀತಂಗೌಡ ಬೆಂಬಲಿಗರ ನಡುವೆ ಸಂಘರ್ಷ ನಡೆದಿತ್ತು. ಪ್ರೀತಂ ಗೌಡ ಪಾಲ್ಗೊಳ್ಳುವಿಕೆಗೆ ಜೆಡಿಎಸ್ ಬಲವಾದ ಆಕ್ಷೇಪ ಸಲ್ಲಿಸಿತ್ತು.
ಇದನ್ನೂ ಓದಿ: ಮೈಸೂರು-ಬೆಂಗಳೂರು ಹೆದ್ದಾರಿ ಅಂಡರ್ ಪಾಸ್ನಲ್ಲಿ ಪ್ರೀತಂಗೌಡ ಭಾವಚಿತ್ರವಿದ್ದ ಫ್ಲೆಕ್ಸ್ಗಳಿಗೆ ಬೆಂಕಿ
ಹಾದಿಯುದ್ದಕ್ಕೂ ಪ್ರಿತಂ ಪರ ಘೋಷಣೆ ಮೊಳಗಿದ್ದೇ ತಡ, ಜೆಡಿಎಸ್ ಕಾರ್ಯಕರ್ತರು ಅವರನ್ನ ತಡೆಯೋಕೆ ಮುಂದಾಗಿದ್ದರು. ಆಗ ವಾಗ್ವಾದವೇ ನಡೆದಿದ್ದಲ್ಲದೇ ತಳ್ಳಾಟ, ನೂಕಾಟವೂ ಆಗಿತ್ತು. ದೋಸ್ತಿ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಒಂದಷ್ಟು ಕಿಡಿಗೇಡಿಗಳು ಬಿಜೆಪಿ ಜೆಡಿಎಸ್ ಸಂಬಂಧ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ನಾವು ಮತ್ತು ಬಿಜೆಪಿ ಒಟ್ಟಾಗಿದ್ದೇವೆ ಅನ್ನೋ ಮೂಲಕ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.