ಬಿಸಿಲ ಧಗೆಯಲ್ಲೂ ಪದೇ ಪದೇ ನೋಡಲೇಬೇಕೆನಿಸುವ ಜೋಗದ ಗುಂಡಿ, ಹೋಗೋದು ಹೇಗೆ? ಇಲ್ಲಿದೆ ಮಾಹಿತಿ
ಮಕ್ಕಳಿಗೆ ಇನ್ನೇನು ಬೇಸಿಗೆ ರಜೆ ಶುರುವಾಗಲಿದೆ, ಎಲ್ಲಿಗೆ ಕರೆದುಕೊಂಡು ಹೋಗೋದಪ್ಪಾ ಎಲ್ಲಿ ನೋಡಿದ್ರೂ ಬಿರು ಬಿಸಿಲು ಎನ್ನುವ ತಲೆಬಿಸಿಯಲ್ಲಿದ್ದೀರಾ, ಹಾಗಾದರೆ ಜೋಗ ಜಲಪಾತ ಹಾಗೂ ಅದರ ಸಮೀಪದ ಪ್ರದೇಶಗಳು ಬೇಸಿಗೆಯಲ್ಲೂ ಹಿತವಾದ ಅನುಭವ ನೀಡುತ್ತವೆ. ಹಾಗಾದರೆ ಈ ಬೇಸಿಗೆಯಲ್ಲಿ ಮಿಸ್ ಮಾಡದೆ ಇಲ್ಲಿಗೆ ಹೋಗಿ.
ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ಈ ಸುಂದರ ಸಾಲಿನಂತೆಯೇ ಜೋಗದ ಪ್ರಕೃತಿಯ ಸೊಬಗು ಮಾತಿನಲ್ಲಿ ಹೇಳಲಾಗದು ಕಣ್ಣಾರೆ ನೋಡಿ ಆನಂದಿಸಬೇಕು. ಬೆಂಗಳೂರಿನಿಂದ 400 ಕಿ.ಮೀ ದೂರದಲ್ಲಿರುವ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ(Jog Falls) ಭಾರತದ ಎರಡನೇ ಅತಿ ಎತ್ತರದ ಜಲಪಾತ ಎಂದೇ ಹೆಸರುವಾಸಿಯಾಗಿದೆ.
ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಲಪಾತ ಇದಾಗಿದ್ದು ಶರಾವತಿ ನದಿ ಇಲ್ಲಿ ಬಂಡೆಗಳ ಮೇಲಿನಿಂದ 253 ಮೀಟರ್ ಆಳಕ್ಕೆ ಧುಮ್ಮಿಕ್ಕುವ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು.
ಮಳೆಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲೂ ಕೂಡ ಮಲೆನಾಡಾಗಿರುವುದರಿಂದ ಜೋಗ ಸೇರಿದಂತೆ ಅದರ ಸುತ್ತಮುತ್ತಲಿನ ಪ್ರದೇಶಗಳು ತಂಪಾಗಿರಲಿದ್ದು, ನೀವು ಬೇಸಿಗೆ ರಜೆಯಲ್ಲಿ ಮಕ್ಕಳೊಂದಿಗೆ ಭೇಟಿ ನೀಡಬಹುದು.
ಅಲ್ಲೇ ಹತ್ತಿರದ ಲಿಂಗನಮಕ್ಕಿ ಜಲಾಶಯ, ಸೈನಾ ಗೇಟ್, ಹಾಗೆಯೇ ಜೋಗದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಒಡನ್ಬೈಲು ಪದ್ಮಾವತಿ ದೇವಸ್ಥಾನಕ್ಕೆ ಮಳೆಗಾಲಕ್ಕಿಂ ಬೇಸಿಗೆಯಲ್ಲಿ ಭೇಟಿ ನೀಡುವುದು ಉತ್ತಮ. ಮುಂಗಾರು ಮಳೆ ಸಿನೆಮಾದಲ್ಲಿ ಜೋಗ ಜಲಪಾತದ ರಮಣೀಯ ದೃಶ್ಯಗಳಿವೆ. ಜೋಗದ ಸಮೀಪ ಇರುವ ಲಿಂಗನಮಕ್ಕಿ ಜಲಾಶಯ ನಾಡಿಗೆ ವಿದ್ಯುತ್ ಒದಗಿಸುತ್ತದೆ.
ಜೋಗ ಜಲಪಾತದ ಆಕರ್ಷಣೆಗಳು ಭವ್ಯವಾದ ಜಲಪಾತ ವೀಕ್ಷಣೆ : ಸಂದರ್ಶಕರು ಎರಡು ತೆರೆದ ವೀಕ್ಷಣಾ ಸ್ಥಳಗಳಿಂದ ಜಲಪಾತಗಳನ್ನು ವೀಕ್ಷಿಸಬಹುದು (ಒಂದು ಮುಖ್ಯ ದ್ವಾರ ಮತ್ತು ಪಾರ್ಕಿಂಗ್ ಪ್ರದೇಶದ ಹತ್ತಿರ ಇದೆ ಮತ್ತು ಇನ್ನೊಂದು ಪ್ರವಾಸಿ ಬಂಗಲೆ (ಐಬಿ) ಬಳಿ). ಜೋಗ ಜಲಪಾತದ ಕೆಳಭಾಗಕ್ಕೆ ಚಾರಣ: ಸುರಕ್ಷಿತವಾಗಿದ್ದಾಗ (ಮುಂಗಾರು ನಂತರದ ಅಕ್ಟೋಬರ್-ಮೇ ತಿಂಗಳಲ್ಲಿ) ಪ್ರವಾಸಿಗರು 1400 ಮೆಟ್ಟಿಲುಗಳನ್ನು ಇಳಿದು ಕೆಳಗೆ ಜಲಪಾತಗಳ ತಳಕ್ಕೆ ಹೋಗಿ ಪ್ರಕೃತಿಯ ಸೌಂದರ್ಯ, ಶಕ್ತಿ ಮತ್ತು ಧ್ವನಿಯನ್ನು ಅತ್ಯುತ್ತಮವಾಗಿ ಆನಂದಿಸಬಹುದು.
ಹತ್ತಿರದ ಆಕರ್ಷಣೆಗಳು: ಹೊನ್ನೆಮರಡು (ಜೋಗ ಜಲಪಾತದಿಂದ 20 ಕಿ.ಮೀ) ಪಿಕ್ನಿಕ್ ಮತ್ತು ಸೂರ್ಯಾಸ್ತದ ವೀಕ್ಷಣೆಗೆ ಸೂಕ್ತವಾದ ಹಿನ್ನೀರಿನ ಪ್ರದೇಶವಾಗಿದೆ. ಕೆಳದಿ (ಜೋಗ ಜಲಪಾತದಿಂದ 35 ಕಿ.ಮೀ) ಒಂದು ಐತಿಹಾಸಿಕ ತಾಣ.
ಜೋಗ ಜಲಪಾತ ತಲುಪುವುದು ಹೇಗೆ? ತಾಳಗುಪ್ಪವು ಜೋಗ ಜಲಪಾತದಿಂದ 20 ಕಿ.ಮೀ ದೂರದಲ್ಲಿರುವ ಹತ್ತಿರದ ರೈಲು ನಿಲ್ದಾಣವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಿಂದ ಪ್ರತಿದಿನ ರೈಲುಗಳನ್ನು ಹೊಂದಿದೆ. ಸಾಗರ (40 ಕಿ.ಮೀ) ಮತ್ತು ಶಿವಮೊಗ್ಗ (105 ಕಿ.ಮೀ) ಹತ್ತಿರದ ಪಟ್ಟಣಗಳು. ಜೋಗ ಜಲಪಾತ ಉತ್ತಮ ರಸ್ತೆ ಮತ್ತು ಸಾರ್ವಜನಿಕ ಸಾರಿಗೆ ಸಂಪರ್ಕ ಕೂಡ ಹೊಂದಿವೆ.
ಜೋಗ ಜಲಪಾತವನ್ನು ಭೇಟಿ ಮಾಡಲು ಈ ಶಿವಮೊಗ್ಗ ಅಥವಾ ಸಾಗರ ಪಟ್ಟಣಗಳಿಂದ ಟ್ಯಾಕ್ಸಿಗಳನ್ನು ಪಡೆಯಬಹುದು. ಹುಬ್ಬಳ್ಳಿ, ಮಂಗಳೂರು ವಿಮಾನ ನಿಲ್ದಾಣಗಳು ಜೋಗ ಜಲಪಾತಕ್ಕೆ ಕೊಂಚ ಹತ್ತಿರದ ವಿಮಾನ ನಿಲ್ದಾಣಗಳಾಗಿವೆ, (ಕ್ರಮವಾಗಿ 210 ಮತ್ತು 250 ಕಿ.ಮೀ ದೂರದಲ್ಲಿದೆ)
ವಸತಿ ಸೌಲಭ್ಯ : ಅಲ್ಲೇ ಆಸುಪಾಸಿನಲ್ಲಿ ಸಾಕಷ್ಟು ರೆಸಾರ್ಟ್ಗಳು ತಲೆದೋರಿವೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಜೋಗ ಜಲಪಾತದ ಸಮೀಪ ಮಯೂರ ಎನ್ನುವ ಹೋಟೆಲ್ ನಡೆಸುತ್ತಿದೆ, ಇದು ಜೋಗ ಜಲಪಾತಕ್ಕೆ ಅತ್ಯಂತ ಹತ್ತಿರವಿರುವ ವಸತಿ ಸೌಕರ್ಯವಾಗಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:50 am, Thu, 4 April 24