75ನೇ ಸ್ವಾತಂತ್ರ್ಯ ದಿನಾಚರಣೆಗೆ ವಿನೂತನ ಯೋಜನೆ, ಪ್ರತಿ ಜಿಲ್ಲೆಗೆ 1 ಲಕ್ಷ 80 ಸಾವಿರ ರೂ. ಬಿಡುಗಡೆ; ಸಚಿವ ಸುನಿಲ್ ಕುಮಾರ್ ಮಾಹಿತಿ
ಸ್ವಾತಂತ್ರ್ಯ ಸಂಗ್ರಾಮ ನಡೆದ ಜಾಗದಲ್ಲಿ ಜನ ಪಿಕ್ನಿಕ್ ರೀತಿಯಲ್ಲಿ ಹೋಗಬೇಕು. ಸ್ಥಳದ ಮಹತ್ವವನ್ನು ಕೂಡ ಜನ ಅರಿಯಬೇಕು ಎಂಬುದೇ ಇದರ ಉದ್ದೇಶ. ಇದಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ. ಎಲ್ಲಾ ಕ್ಷೇತ್ರದ ಮುಖಂಡರು ಸಮಿತಿಯಲ್ಲಿ ಇರಲಿದ್ದಾರೆ.
ಬೆಂಗಳೂರು: ಆಗಸ್ಟ್ 15ರಂದು ನಡೆಯುವ 75ನೇ ಸ್ವಾತಂತ್ರ್ಯ ದಿನಾಚರಣೆಗೆ (Independents Day) ವಿನೂತನ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಸಚಿವ ಸುನಿಲ್ ಕುಮಾರ್ (Sunil Kumar) ಮಾಹಿತಿ ನೀಡಿದ್ದಾರೆ. ಅಮೃತ ಮಹೋತ್ಸವದ ‘ಅಮೃತ ಭಾರತಿಗೆ ಕನ್ನಡದಾರತಿ’ ಲಾಂಛನ ಬಿಡುಗಡೆ ಮಾಡಿ, ಬೆಸ್ಕಾಂ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ಅಮೃತ ಮಹೋತ್ಸವಕ್ಕೆ ಕನ್ನಡದಾರತಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ಈ ವರ್ಷ ಪೂರ್ತಿ ಕಾರ್ಯಕ್ರಮ ನಡೆಸಲಾಗುತ್ತದೆ. 75 ಸ್ಥಳಗಳನ್ನು ಗುರುತಿಸಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಜನರಿಗೆ ತಿಳಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಕರ್ನಾಟಕದ ನೂರಾರು ಪ್ರದೇಶದಲ್ಲಿ ಬಲಿದಾನ, ಸ್ವಾತಂತ್ರ್ಯ ಹೋರಾಟ ನಡೆದ ಸ್ಥಳಗಳು ಇವೆ. ಈ ಸ್ಥಳದಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಕಾರ್ಯಕ್ರಮದ ಹಿನ್ನೆಲೆ ಪ್ರತಿ ಜಿಲ್ಲೆಗೆ ತಲಾ 1 ಲಕ್ಷದ 80 ಸಾವಿರ ರೂ. ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ ಸಚಿವರು, ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಬೇಕು. 6 ಕೋಟಿ ಕನ್ನಡಿಗರ ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸುವ ಕೆಲಸ ಮಾಡುತ್ತೇವೆ. ಶಾಲಾ- ಕಾಲೇಜುಗಳಲ್ಲಿ ಸ್ಪರ್ಧೆ, ನೃತ್ಯ ನಾಟಕಗಳು ನಡೆಯಬೇಕು ಎಂದು ಹೇಳಿಕೆ ನೀಡಿದರು.
ಸ್ವಾತಂತ್ರ್ಯ ಸಂಗ್ರಾಮ ನಡೆದ ಜಾಗದಲ್ಲಿ ಜನ ಪಿಕ್ನಿಕ್ ರೀತಿಯಲ್ಲಿ ಹೋಗಬೇಕು. ಸ್ಥಳದ ಮಹತ್ವವನ್ನು ಕೂಡ ಜನ ಅರಿಯಬೇಕು ಎಂಬುದೇ ಇದರ ಉದ್ದೇಶ. ಇದಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ. ಎಲ್ಲಾ ಕ್ಷೇತ್ರದ ಮುಖಂಡರು ಸಮಿತಿಯಲ್ಲಿ ಇರಲಿದ್ದಾರೆ. ಆಗಸ್ಟ್ ಲ್ಲಿ ನಾವು ರಥಯಾತ್ರೆ ಹಾಗೂ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಸುನೀಲ್ ಕುಮಾರ್ ಹೇಳಿದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:47 pm, Tue, 24 May 22