ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ನಾಯಕ ಹೆಚ್​ಡಿ ರೇವಣ್ಣಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್

ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್ ನಾಯಕ ಹೆಚ್​ಡಿ ರೇವಣ್ಣಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ಐಪಿಸಿ 354 ಸೆಕ್ಷನ್ ರದ್ದುಪಡಿಸಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ನಡಾವಳಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ರೇವಣ್ಣ ಈಗ ಸುಪ್ರೀಂ ಕೋರ್ಟ್ ಮುಂದೆ ಪ್ರತಿವಾದ ಮಂಡಿಸಬೇಕಿದೆ.

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ನಾಯಕ ಹೆಚ್​ಡಿ ರೇವಣ್ಣಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್
ಹೆಚ್​ಡಿ ರೇವಣ್ಣಗೆ ಸಂಕಷ್ಟ
Image Credit source: tv9
Edited By:

Updated on: Jul 13, 2026 | 2:09 PM

ಮುಖ್ಯಾಂಶಗಳು

  • ಹೊಳೆನರಸೀಪುರದ ಮನೆಗೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣ
  • ಹೆಚ್​ಡಿ ರೇವಣ್ಣಗೆ ಸುಪ್ರೀಂ ಕೋರ್ಟ್​ನಲ್ಲಿ ಸಂಕಷ್ಟ
  • ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ರಾಜ್ಯ ಸರ್ಕಾರದ ವಾದ ಆಲಿಸಿ ಸುಪ್ರೀಂ ನೋಟಿಸ್

ನವದೆಹಲಿ, ಜುಲೈ 13: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ (JDS) ಶಾಸಕ ಹೆಚ್​ಡಿ ರೇವಣ್ಣಗೆ (HD Revanna) ಸುಪ್ರೀಂ ಕೋರ್ಟ್ ಮಹತ್ವದ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಹೈಕೋರ್ಟ್ ಈ ಹಿಂದೆ ರೇವಣ್ಣ ಅವರಿಗೆ ನೀಡಿದ್ದ ದೋಷಮುಕ್ತ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ. ನ್ಯಾಯಮೂರ್ತಿ ಪರ್ದಿವಾಲಾ, ಕೆ.ವಿನೋದ್ ಚಂದ್ರನ್ ಅವರ ದ್ವಿಸದಸ್ಯ ಪೀಠವು ಈ ನೋಟಿಸ್ ಹೊರಡಿಸಿದ್ದು, ಹೈಕೋರ್ಟ್‌ನ ನಡಾವಳಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಹೆಚ್​ಡಿ ರೇವಣ್ಣ ವಿರುದ್ಧದ ಪ್ರಕರಣದ ಹಿನ್ನೆಲೆ

ಈ ಪ್ರಕರಣವು ಹೊಳೆನರಸೀಪುರದ ಮನೆಗೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದೆ. ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಹೆಚ್​ಡಿ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗಾಗಲೇ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದು, ಆತನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಗೆ ಸಿದ್ಧತೆಗಳು ನಡೆಯುತ್ತಿವೆ. ಇದೇ ಪ್ರಕರಣದಲ್ಲಿ ಹೆಚ್​ಡಿ ರೇವಣ್ಣ ಅವರನ್ನೂ ಕೂಡ ಬಂಧಿಸಲಾಗಿತ್ತು. ಮನೆಗೆಲಸದಾಕೆಗೆ ತೀವ್ರ ಕಿರುಕುಳ ನೀಡಲಾಗಿತ್ತು ಮತ್ತು ಆಕೆಯ ಘನತೆಗೆ ಧಕ್ಕೆ ತರಲಾಗಿತ್ತು ಎಂಬ ಆರೋಪದ ಮೇಲೆ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.

ಹೈಕೋರ್ಟ್ ಮೊರೆ ಹೋಗಿದ್ದ ಹೆಚ್​​ಡಿ ರೇವಣ್ಣ

Supreme Court Issues Notice To HD Revanna In Sexual Harassment Case
ನಂತರ ಹೆಚ್​​ಡಿ ರೇವಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡಲು ಕೋರಿದ್ದರು. ಅವರ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ) ಮತ್ತು 354ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಆದರೆ, ಹೈಕೋರ್ಟ್ ಐಪಿಸಿ ಸೆಕ್ಷನ್ 354 ಅನ್ನು ರೇವಣ್ಣ ವಿರುದ್ಧದ ಪ್ರಕರಣದಿಂದ ಕೈಬಿಟ್ಟು, ಸೆಕ್ಷನ್ 354ಎ ಅಡಿ ಪ್ರಾಸಿಕ್ಯೂಷನ್ ಅನ್ನು ಮುಂದುವರಿಸಲು ಕೆಳ ನ್ಯಾಯಾಲಯಕ್ಕೆ ಆದೇಶ ನೀಡಿತ್ತು.

ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದ ಕರ್ನಾಟಕ ರಾಜ್ಯ ಸರ್ಕಾರ

ಹೈಕೋರ್ಟ್‌ನ ಆದೇಶವನ್ನು ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ, ಮೇಲ್ಮನವಿ ಸಲ್ಲಿಸಿತ್ತು. ಒಂದು ಪ್ರಕರಣದಲ್ಲಿ ಆರೋಪದಿಂದ ಮುಕ್ತಗೊಳಿಸಿದ್ದಕ್ಕೆ ಮತ್ತು ಒಂದು ಸೆಕ್ಷನ್ ಅನ್ನು ಕೈಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರವು ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿತು. ‘ಹೈಕೋರ್ಟ್ ಆರೋಪವನ್ನು ಹೇಗೆ ಬದಲಾಯಿಸಲು ಸಾಧ್ಯ’ ಎಂದು ರಾಜ್ಯ ಸರ್ಕಾರ ತನ್ನ ಅರ್ಜಿಯಲ್ಲಿ ವಾದಿಸಿತ್ತು.

ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್‌ನ ವಿಚಾರಣೆಯ ಪ್ರಕ್ರಿಯೆ ಮತ್ತು ಕೊಟ್ಟಂತಹ ಆದೇಶದ ಬಗ್ಗೆ ತೀವ್ರ ಅಸಮಾಧಾನವನ್ನು ಹೊರಹಾಕಿದೆ. ಈ ಪ್ರಕರಣದಲ್ಲಿ ಹೈಕೋರ್ಟ್‌ನ ನಡಾವಳಿ ಸರಿಯಾಗಿಲ್ಲ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ‘ಈ ಪ್ರಕರಣವನ್ನು ಹೈಕೋರ್ಟ್ ಹೇಗೆ ಕೈಬಿಡಲು ಸಾಧ್ಯವಾಯಿತು’ ಎಂದು ಪ್ರಶ್ನಿಸಿದೆ. ಇದರ ಜೊತೆಗೆ, ಸುಪ್ರೀಂ ಕೋರ್ಟ್ ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಹೆಚ್​ಡಿ ರೇವಣ್ಣ ಮುಂದಿನ ನಡೆ ಏನಿರಲಿದೆ?

ಹೆಚ್​ಡಿ ರೇವಣ್ಣ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್​​ನಲ್ಲಿ ಪ್ರತಿವಾದವನ್ನು ಮಂಡಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಪ್ರಶ್ನಿಸಿರುವ ಅಂಶಗಳಿಗೆ ಸಂಬಂಧಿಸಿ ವಾದ-ಪ್ರತಿವಾದಗಳು ನಡೆಯಲಿವೆ. ವಿಚಾರಣೆಯನ್ನು ಸದ್ಯ ಸುಪ್ರೀಂ ಕೋರ್ಟ್ ಮುಂದೂಡಿದ್ದು, ಈ ಪ್ರಕರಣದಲ್ಲಿ ಕಾನೂನು ಹೋರಾಟ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ. ಈ ಬೆಳವಣಿಗೆಯು ರೇವಣ್ಣಗೆ ಮತ್ತಷ್ಟು ಕಾನೂನು ಸಂಕಷ್ಟವನ್ನು ತಂದೊಡ್ಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Mon, 13 July 26

Follow Us