
ಬೆಂಗಳೂರು, ಜುಲೈ 21: ಹಾವೇರಿ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆಗ್ಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹಬ್ಬಿಸಿದರೆಂದು ಆರೋಪಿಸಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಸೋಮವಾರ ತಿರಸ್ಕರಿಸಿದೆ. ಆ ಮೂಲಕ ಸಂಸದ ತೇಜಸ್ವಿ ಸೂರ್ಯಗೆ ಬಿಗ್ ರಿಲೀಫ್ ಸಿಕ್ಕಿದ್ದು, ಅತ್ತ ಸರ್ಕಾರಕ್ಕೆ ಮುಖಭಂಗ ಉಂಟಾಗಿದೆ.
ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ನೇತೃತ್ವದ ಪೀಠ ವಿಚಾರಣೆ ಮಾಡಿದ್ದು, ನ್ಯಾಯಾಂಗ ವೀಕ್ಷಣೆಗೆ ಒಳಪಟ್ಟ ವಿಷಯವಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ. ಆ ಮೂಲಕ ಸಂಸದ ತೇಜಸ್ವಿ ಸೂರ್ಯಗೆ ರಿಲೀಫ್ ಸಿಕ್ಕಿದ್ದು, ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. ರಾಜ್ಯ ಸರ್ಕಾರದ ಪರ ಸಿಂಘ್ವಿ ವಾದ ಮಂಡಿಸಿದರು.
ಇನ್ನು ವಿಚಾರಣೆ ವೇಳೆ ಗರಂ ಆದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ಈ ವಿಷಯವನ್ನು ರಾಜಕೀಯಗೊಳಿಸಬೇಡಿ. ನ್ಯಾಯಾಲಯದ ಹೊರಗೆ ಈ ಹೋರಾಟಗಳನ್ನು ಮಾಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿದ್ದರಿಂದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದಾರೆಂಬ ಆರೋಪದಡಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯ ಸಿಇಎನ್ ಠಾಣೆಯಲ್ಲಿ 2024ರ ನವೆಂಬರ್ 14ರಂದು ಎಫ್‌ಐಆರ್ ದಾಖಲಾಗಿತ್ತು. ಈ ಬಗ್ಗೆ 2024 ನವೆಂಬರ್ 8ರಂದು, ತೇಜಸ್ವಿ ಸೂರ್ಯ ತಮ್ಮ ಟ್ವೀಟರ್ನಲ್ಲಿ ರಾಜ್ಯದ ಓರ್ವ ರೈತ ತನ್ನ ಭೂಮಿಯನ್ನು ವಕ್ಫ್ ಮಂಡಳಿಯು ವಶಪಡಿಸಿಕೊಂಡ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ಸುಳ್ಳು ಮಾಹಿತಿ ಹರಡಿದ ಆರೋಪ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯಲ್ಲಿ ಎಫ್‌ಐಆರ್
‘ಸಿಎಂ ಸಿದ್ದರಾಮಯ್ಯ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಅವರ ಅಲ್ಪಸಂಖ್ಯಾತರ ತುಷ್ಟೀಕರಣದಿಂದ ಕರ್ನಾಟಕದಲ್ಲಿ ದುರಂತಗಳು ಸಂಭವಿಸುತ್ತಿವೆ. ಪ್ರತಿ ದಿನ ಇಂಥ ಘಟನೆಗಳು ಸಂಭವಿಸುತ್ತಿವೆ’ ಎಂದು ತೇಜಸ್ವಿ ಸೂರ್ಯ ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿದ್ದರು. ಬಳಿಕ ಟ್ವೀಟ್ ಅನ್ನು ಅಳಿಸಿಹಾಕಲಾಗಿತ್ತು.
ಇದನ್ನೂ ಓದಿ: ವಕ್ಫ್ ವಿವಾದಕ್ಕೆ ಬೇಸತ್ತು ರೈತ ಆತ್ಮಹತ್ಯೆ ಆರೋಪ: ಸರ್ಕಾರದ ವಿರುದ್ದ ಬಿಜೆಪಿ ಆಕ್ರೋಶ
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 353(2) ರ ಅಡಿಯಲ್ಲಿ ನಕಲಿ ಸುದ್ದಿಗಳನ್ನು ಹರಡಿದ್ದಕ್ಕಾಗಿ ಹಾವೇರಿ ಸೈಬರ್ ಅಪರಾಧ, ಆರ್ಥಿಕ ಮತ್ತು ಮಾದಕವಸ್ತು ಅಪರಾಧಗಳ ಪೊಲೀಸರು ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಿಸಿದ್ದರು. 2024ರ ಡಿಸೆಂಬರ್ನಲ್ಲಿ ಈ ಪ್ರಕರಣವನ್ನು ರದ್ದುಗೊಳಿಸಲಾಗಿತ್ತು. ಬಳಿಕ ರಾಜ್ಯ ಸರ್ಕಾರ ಹೈಕೋರ್ಟ್ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:32 pm, Mon, 21 July 25