ಬೆಂಗಳೂರು, (ಫೆಬ್ರವರಿ 14): ಮೈಸೂರಿನ ಉದಯಗಿರಿ ಪೊಲೀಸ್ ಸ್ಟೇಷನ್ (Udayagiri Police Station) ಮೇಲೆಯೇ ರೋಷಾವೇಷ ತೋರಿರುವ ಕಿಡಿಗೇಡಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈಗಾಗಲೇ 20 ಆರೋಪಿಗಳನ್ನ ಬಂಧಿಸಿದ್ದು, ಡಿಸಿಪಿ ಕಾರಿಗೆ ಕಲ್ಲೆಸೆದ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಸಿಸಿಕ್ಯಾಮರಾ, ಮೊಬೈಲ್ ವಿಡಿಯೋ ಆಧರಿಸಿ ನಾಲ್ವರನ್ನ ಬಂಧಿಸಲಾಗಿದ್ದು, ಇನ್ನಷ್ಟು ಆರೋಪಿಗಳಿಗಾಗಿ ಸಿಸಿಬಿ ಬಲೆ ಬೀಸಿದೆ. ಇದರ ಮಧ್ಯ ಇದೀಗ ಸಿಎಂ ಸಿದ್ದರಾಮಯ್ಯನವರೇ (Siddaramaiah) ಪೊಲೀಸರ ಬೆನ್ನಿಗೆ ನಿಂತಿದ್ದು, ಘಟನೆಯಲ್ಲಿ ಭಾಗಿಯಾದವರನ್ನು ಮುಲಾಜಿಲ್ಲದೇ ಬಂಧಿಸಿ ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಮೈಸೂರು ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಫೆಬ್ರವರಿ 14) ಕಾವೇರಿ ನಿವಾಸದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ಸಭೆಯಲ್ಲಿ ಮೈಸೂರು ಡಿಸಿ, ಎಸ್ಪಿ ಹಾಗೂ ಮೈಸೂರು ಪೊಲೀಸ್ ಆಯುಕ್ತರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಘಟನೆಯಲ್ಲಿ ಭಾಗಿಯಾದವರನ್ನು ಮುಲಾಜಿಲ್ಲದೇ ಬಂಧಿಸಿ ಎಲ್ಲರ ಮೇಲೂ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರು, ಅದಕ್ಕೆ ಪ್ರಚೋದನೆ ನೀಡಿದ ಎಲ್ಲರನ್ನೂ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಇದರ ಜೊತೆಗೆ ತಪ್ಪು ಮಾಡದವರಿಗೆ ಕೂಡ ತೊಂದರೆ ಆಗಬಾರದು. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕು. ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಮಾಡಿದ ಎಲ್ಲರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಕಾರಿಗಳಿಗೆ ನೀಡಿದ್ದಾರೆ.
ಮೈಸೂರು ಉದಯಗಿರಿ ಘಟನೆಗೆ ಸಂಬಂಧಪಟ್ಟಂತೆ ಮೈಸೂರು ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಮೈಸೂರು ಪೊಲೀಸ್ ಆಯುಕ್ತರು ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಜೊತೆ ಚರ್ಚಿಸಿದೆ.
ತಪ್ಪಿತಸ್ಥರು ಯಾರೇ ಇದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಬೇಕು. ಕಾನೂನು ಕೈಗೆತ್ತಿಕೊಂಡ ಪ್ರತಿಯೊಬ್ಬರನ್ನೂ ಪತ್ತೆಹಚ್ಚಿ ತಕ್ಕ ಶಿಕ್ಷೆಯಾಗುವಂತೆ…
— Siddaramaiah (@siddaramaiah) February 14, 2025
ಮತ್ತೊಂದೆಡೆ ಘಟನೆ ನಡೆದು ನಾಲ್ಕು ದಿನದ ಬಳಿಕ ಉದಯಗಿರಿ ಠಾಣೆಗೆ ಗೃಹ ಸಚಿವ ಪರಮೇಶ್ವರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು, ಮೈಸೂರು ಅಧಿಕಾರಿಗಳ ಜೊತೆ ಸಭೆ ನಡೆಸಿ ಎಲ್ಲಾ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಮಾತನಾಡಿದ ಪರಮೇಶ್ವರ್, ಆರೋಪಿಗಳು ಎಷ್ಟೇ ಬಲಿಷ್ಟವಾಗಿದ್ರೂ ಅರೆಸ್ಟ್ ಮಾಡ್ತೀವಿ ಎಂದಿದ್ದಾರೆ.